
ಬೆಂಗಳೂರು, 30 ಸೆಪ್ಟೆಂಬರ್ (ಹಿ.ಸ.):
ಭೂಸುಧಾರಣಾ ಕಾಯ್ದೆಗೆ ಮಾಡಿರುವ ತಿದ್ದುಪಡಿಗಳನ್ನು ಹಿಂಪಡೆದು, ಕಾಯ್ದೆಯ 79ಎ, 79ಬಿ ಮತ್ತು 79ಸಿ ಸೆಕ್ಷನ್ಗಳನ್ನು ಮರುಸ್ಥಾಪಿಸುವಂತೆ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಯನ್ನು ಉಲ್ಲೇಖಿಸಿರುವ ಪಾಟೀಲ್, ತಮ್ಮ ಪತ್ರದೊಂದಿಗೆ ಪಕ್ಷದ ಪ್ರಣಾಳಿಕೆಯ ಪ್ರತಿಯನ್ನೂ ಲಗತ್ತಿಸಿ, ರೈತರಿಗೆ ಸಂಬಂಧಿಸಿದ ಈ ವಿಷಯದಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
“ಭೂಸುಧಾರಣಾ ಕಾಯ್ದೆಯ ರೈತ ವಿರೋಧಿ ತಿದ್ದುಪಡಿಗಳನ್ನು ಹಿಂಪಡೆಯುವ ಭರವಸೆಯನ್ನು ಚುನಾವಣೆಯ ಸಂದರ್ಭದಲ್ಲಿ ನೀಡಲಾಗಿತ್ತು. ಆದರೆ, ಇದುವರೆಗೆ ಆ ಭರವಸೆ ಈಡೇರಿಲ್ಲ. 79ಎ, 79ಬಿ ಮತ್ತು 79ಸಿ ಸೆಕ್ಷನ್ಗಳನ್ನು ಮರುಸ್ಥಾಪಿಸುವ ಅಗತ್ಯವಿದೆ” ಎಂದು ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.
2021ರಿಂದ ಇದುವರೆಗೆ ರಾಜ್ಯದಲ್ಲಿ ಸುಮಾರು 19.92 ಲಕ್ಷ ಎಕರೆ ಕೃಷಿ ಭೂಮಿ ಮಾರಾಟವಾಗಿದೆ ಎಂದು ಅವರು ಉಲ್ಲೇಖಿಸಿದ್ದು, ಮಾರಾಟವಾಗಿರುವ ಕೃಷಿ ಭೂಮಿಯ ಪೈಕಿ ಶೇ.60ರಷ್ಟು ಉತ್ತರ ಕರ್ನಾಟಕದಲ್ಲೇ ನಡೆದಿದೆ ಎಂದು ಹೇಳಿದ್ದಾರೆ. ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕೃಷಿ ಭೂಮಿ ಮಾರಾಟದ ಪ್ರಮಾಣ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಭೂಸುಧಾರಣಾ ಕಾಯ್ದೆಯ 79ಎ, 79ಬಿ ಮತ್ತು 79ಸಿ ಸೆಕ್ಷನ್ಗಳನ್ನು ಮರುಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಲಿಖಿತ ಉತ್ತರ ನೀಡಿರುವುದಕ್ಕೆ ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೃಷಿ ಭೂಮಿಯ ರಕ್ಷಣೆ ಮತ್ತು ರೈತರ ಹಿತದೃಷ್ಟಿಯಿಂದ ಕಾಯ್ದೆಯ ತಿದ್ದುಪಡಿಗಳನ್ನು ಮರುಪರಿಶೀಲಿಸಿ, ಚುನಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವಂತೆ ಅವರು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R