ಏಷ್ಯನ್ ಕ್ರೀಡಾಕೂಟ: ಶೂಟೌಟ್ ನಲ್ಲಿ ಚಿಕಿತಾ–ಸಾಹಿಲ್ ಗೆ ಚಿನ್ನ; ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗೆ ಕೋಟಾ
ಐಚಿ-ನಾಗೋಯಾ, 30 ಸೆಪ್ಟೆಂಬರ್ (ಹಿ.ಸ.): ಭಾರತೀಯ ಬಿಲ್ಲುಗಾರರಾದ ಚಿಕಿತಾ ತನಿಪರ್ತಿ ಮತ್ತು ಸಾಹಿಲ್ ಜಾಧವ್ ಅವರು ಏಷ್ಯನ್ ಕ್ರೀಡಾಕೂಟ-2026ರ ಕಾಂಪೌಂಡ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಬುಧವಾರ ನಡೆದ ರೋಚಕ ಫೈನಲ್‌ನಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾವನ್ನು ಶೂಟೌಟ್‌ನ
भारतीय तीरंदाज चिकिता तनीपर्थी और साहिल जाधव


ಐಚಿ-ನಾಗೋಯಾ, 30 ಸೆಪ್ಟೆಂಬರ್ (ಹಿ.ಸ.):

ಭಾರತೀಯ ಬಿಲ್ಲುಗಾರರಾದ ಚಿಕಿತಾ ತನಿಪರ್ತಿ ಮತ್ತು ಸಾಹಿಲ್ ಜಾಧವ್ ಅವರು ಏಷ್ಯನ್ ಕ್ರೀಡಾಕೂಟ-2026ರ ಕಾಂಪೌಂಡ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಬುಧವಾರ ನಡೆದ ರೋಚಕ ಫೈನಲ್‌ನಲ್ಲಿ ಭಾರತೀಯ ಜೋಡಿ ದಕ್ಷಿಣ ಕೊರಿಯಾವನ್ನು ಶೂಟೌಟ್‌ನಲ್ಲಿ ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಈ ಗೆಲುವಿನೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನ ಕಾಂಪೌಂಡ್ ಮಿಶ್ರ ತಂಡ ಸ್ಪರ್ಧೆಗೆ ಭಾರತ ಕೋಟಾ ಪಡೆಯಿತು.

ನಿಗದಿತ ಸ್ಪರ್ಧೆಯ ಅಂತ್ಯದಲ್ಲಿ ಭಾರತ ಮತ್ತು ದಕ್ಷಿಣ ಕೊರಿಯಾ 157-157 ಅಂಕಗಳ ಸಮಬಲ ಸಾಧಿಸಿದ್ದರಿಂದ ಫಲಿತಾಂಶಕ್ಕಾಗಿ ಶೂಟೌಟ್ ನಡೆಸಲಾಯಿತು. ನಿರ್ಣಾಯಕ ಹಂತದಲ್ಲಿ ಚಿಕಿತಾ ಹಾಗೂ ದಕ್ಷಿಣ ಕೊರಿಯಾದ ಪಾರ್ಕ್ ತಲಾ 10 ಅಂಕ ಗಳಿಸಿದರು. ಸಾಹಿಲ್ ಕೂಡ 10 ಅಂಕಗಳ ಗುರಿ ಸಾಧಿಸಿದರೆ, ದಕ್ಷಿಣ ಕೊರಿಯಾದ ಚೊಯ್ 9 ಅಂಕ ಗಳಿಸಿದರು. ಹೀಗಾಗಿ ಭಾರತ 10-9 ಅಂತರದಲ್ಲಿ ಜಯ ಸಾಧಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿತು.

ಫೈನಲ್‌ನ ಆರಂಭದಿಂದಲೇ ಚಿಕಿತಾ ಮತ್ತು ಸಾಹಿಲ್ ಉತ್ತಮ ಪ್ರದರ್ಶನ ನೀಡಿದರು. ಮೊದಲ ನಾಲ್ಕು ಬಾಣಗಳಲ್ಲೂ ತಲಾ 10 ಅಂಕ ಗಳಿಸಿದ ಭಾರತೀಯ ಜೋಡಿ ಮೊದಲ ಹಂತವನ್ನು 40-39ರಿಂದ ಗೆದ್ದುಕೊಂಡಿತು. ಎರಡನೇ ಹಂತದಲ್ಲೂ ಸತತ ನಾಲ್ಕು ಬಾರಿ 10 ಅಂಕ ಗಳಿಸಿದ ಭಾರತ, ಮಧ್ಯಂತರದ ವೇಳೆಗೆ 80-78ರ ಮುನ್ನಡೆ ಸಾಧಿಸಿತು.

ಮುಂದಿನ ಹಂತದಲ್ಲಿ ಭಾರತ 100-98ರ ಮುನ್ನಡೆ ಕಾಯ್ದುಕೊಂಡಿತು. ಬಳಿಕ ಚಿಕಿತಾ ಮತ್ತು ಸಾಹಿಲ್ ತಲಾ 9 ಅಂಕ ಗಳಿಸಿದ್ದರಿಂದ ದಕ್ಷಿಣ ಕೊರಿಯಾ ಪುಟಿದೆದ್ದಿತು. ಅಂತಿಮ ಬಾಣಗಳಲ್ಲಿ ಭಾರತಕ್ಕೆ ಗೆಲುವಿಗಾಗಿ 20 ಅಂಕಗಳ ಅಗತ್ಯವಿತ್ತು. ಚಿಕಿತಾ 9 ಅಂಕ ಗಳಿಸಿದರೆ, ಒತ್ತಡದ ನಡುವೆಯೂ ಸಾಹಿಲ್ ನಿಖರವಾಗಿ 10 ಅಂಕ ಗಳಿಸಿ ಪಂದ್ಯವನ್ನು 157-157ರ ಸಮಬಲಕ್ಕೆ ತಂದರು. ಇದರಿಂದ ಪಂದ್ಯ ಶೂಟೌಟ್‌ಗೆ ಸಾಗಿತು.

ಶೂಟೌಟ್‌ನಲ್ಲಿ ಭಾರತೀಯ ಜೋಡಿ ಸಂಯಮದಿಂದ ಪ್ರದರ್ಶನ ನೀಡಿ 10-9 ಅಂತರದಲ್ಲಿ ಗೆಲುವು ಸಾಧಿಸಿತು. ಏಷ್ಯನ್ ಕ್ರೀಡಾಕೂಟ-2026ರಲ್ಲಿ ಇದು ಭಾರತದ ಎಂಟನೇ ಚಿನ್ನದ ಪದಕವಾಗಿದೆ.

ಇದಕ್ಕೂ ಮೊದಲು ಭಾರತೀಯ ಮಹಿಳಾ ಕಾಂಪೌಂಡ್ ತಂಡವೂ ಚಿನ್ನದ ಪದಕ ಗೆದ್ದಿತ್ತು. ಪೃಥಿಕಾ ಪ್ರದೀಪ್, ಜ್ಯೋತಿ ಸುರೇಖಾ ವೆನ್ನಂ ಮತ್ತು ಚಿಕಿತಾ ತನಿಪರ್ತಿ ಅವರನ್ನೊಳಗೊಂಡ ತಂಡ ಫೈನಲ್‌ನಲ್ಲಿ ಚೀನಾವನ್ನು 238-234 ಅಂಕಗಳಿಂದ ಮಣಿಸಿ ಅಗ್ರಸ್ಥಾನ ಪಡೆದಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande