
ಬೆಂಗಳೂರು, 30 ಸೆಪ್ಟೆಂಬರ್ (ಹಿ.ಸ.):
ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಸಿನಿಮಾ, ಕಿರುತೆರೆ ಜೊತೆಗೆ ಕಿರುಚಿತ್ರದಲ್ಲೂ ನಟಿಸಿದ್ದಾರೆ. ಸಾಮಾಜಿಕ ಕಳಕಳಿ ಇರುವ ಕಿರುಚಿತ್ರವಾಗಿದ್ದು, ಆಟೋ ಚಾಲಕರ ಆರೋಗ್ಯದ ಬಗ್ಗೆ ಎಚ್ಚರಿಕೆ ನೀಡುವ ಪಾತ್ರದಲ್ಲಿ ಈ ವಿಜಯ್ ರಾಘವೇಂದ್ರ ಕಾಣಿಸಿಕೊಂಡಿದ್ದಾರೆ.
ಹೃದಯ ಬಡಿತದ ವಿಶೇಷ ದಿನದೊಂದು ನಗು ನಗುತ ಕಿರುಚಿತ್ರವನ್ನು ರಿಲೀಸ್ ಮಾಡಿರುವುದು ವಿಶೇಷ. ಆಟೋ ಚಾಲಕರ ಸಮ್ಮುಖದಲ್ಲಿ ಕಿರುಚಿತ್ರವನ್ನು ಬಿಡುಗಡೆ ಮಾಡಲಾಯಿತು. ಸಾಮಾಜಿಕ ಕಳಕಳಿ ಇರುವ ಈ ಕಿರುಚಿತ್ರದಲ್ಲಿ ವಿಜಯ್ ರಾಘವೇಂದ್ರ ಆಟೋ ಚಾಲಕನಾಗಿ ಅಭಿನಯಿಸಿದ್ದಾರೆ. ವಿಜಯ್ ರಾಘವೇಂದ್ರ ಪತ್ನಿ ಪಾತ್ರದಲ್ಲಿ ನಟಿ ವರ್ಷಿತಾ ರಾಮ್ ಮಿಂಚಿದ್ದಾರೆ.
ನಗು ನಗುತ ಕಿರುಚಿತ್ರವನ್ನು ನಿರ್ದೇಶಕ ಶಿವು ಜಮಖಂಡಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ಶಿವು ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಅದ್ದೂರಿಯಾಗಿ ಮೂಡಿ ಬಂದಿರುವ ಕಿರುಚಿತ್ರಕ್ಕೆ ನಾಸಿರ್ ಖತೀಬ್ ಮತ್ತು ಮೊಹಮ್ಮದ್ ಸಲಾವುದ್ದೀನ್ ನಿರ್ಮಾಣ ಮಾಡಿದ್ದಾರೆ. ನಾಸಿರ್ ಖತೀಬ್ ನಿರ್ಮಾಣದ ಜೊತೆಗೆ ಕಥೆ ಕೂಡ ಬರೆದಿದ್ದಾರೆ.
ಪ್ರತಿನಿತ್ಯ ವಾಹನ ಓಡಿಸುವ ಚಾಲಕರು ಅದರಲ್ಲೂ ಆಟೋ ಡ್ರೈವರ್ಸ್ ಎಷ್ಟೆಲ್ಲಾ ಕಷ್ಟಗಳನ್ನು ಎದುರಿಸುತ್ತಾರೆ, ಕುಟುಂಬದ ಜವಾಬ್ದಾರಿ ಒಂದೆಡೆಯಾದರೆ, ಊಟ, ನಿದ್ದೆಯನ್ನು ಲೆಕ್ಕಿಸದೆ ಆಟೋ ಓಡಿಸುವ ಬರದಲ್ಲಿ ಆರೋಗ್ಯದ ಕಡೆ ಗಮನ ಹರಿಸದೆ ಜೀವವನ್ನೆ ಕಳೆದುಕೊಳ್ಳುವ ಚಾಲಕರ ಬಗ್ಗೆ ಈ ಕಿರುಚಿತ್ರವನ್ನು ಕಟ್ಟಿಕೊಡಲಾಗಿದೆ.
ಕಿರುಚಿತ್ರ ರಿಲೀಸ್ ಮಾಡಿ ಮಾತನಾಡಿದ, ನಾಯಕ ವಿಜಯ್ ರಾಘವೇಂದ್ರ, 'ಈ ಕಿರುಚಿತ್ರಕ್ಕೆ ಆಟೋ ಚಾಲಕರು ದೊಡ್ಡ ಮಟ್ಟದಲ್ಲಿ ಪ್ರೊತ್ಸಾಹಿಸಿದ್ದಾರೆ. ಆಟೋ ಚಾಲಕರು ಅವರ ಆರೋಗ್ಯ ಹಾಗೂ ಕುಟುಂಬದ ಕಡೆ ಹೆಚ್ಚು ಗಮನ ಹರಿಸಲಿ ಎನ್ನುವ ಕಾರಣಕ್ಕೆ ಈ ಕಿರುಚಿತ್ರವನ್ನು ಮಾಡಿದ್ದು, ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ. ನೆಗಡಿ ಶೀತದ ಹಾಗೆ ಆಗಿದೆ. ಆದರೆ ಅದರ ಪರಿಣಾಮ ತೀವ್ರವಾಗಿದೆ. ಸಾಕಷ್ಟು ಕಾರಣಗಳು ಇರತ್ತೆ ಆದರೂ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರಲಿ' ಎಂದು ಆಟೋ ಚಾಲಕರಿಗೆ ಎಚ್ಚರಿಕೆಯ ಕಿವಿಮಾತನ್ನು ಹೇಳಿದರು.
ನಾಯಕಿ ವರ್ಷಿತಾ ರಾಮ್ ಮಾತನಾಡಿ, 'ಇದು ಕಿರುಚಿತ್ರವಾದರೂ ನನಗೆ ದೊಡ್ಡ ಸಿನಿಮಾ ಮಾಡಿದಷ್ಟು ಖುಷಿಯಾಗಿದೆ. ನನ್ನ ಮೇಲೆ ನಂಬಿಕೆ ಇಟ್ಟು ಈ ಅವಕಾಶ ಕೊಟ್ಟಿದ್ದಕ್ಕೆ ಇಡೀ ತಂಡಕ್ಕೆ ಧನ್ಯವಾದ' ತಿಳಿಸಿದರು.
ನಿರ್ದೇಶಕ ಶಿವು ಜಮಖಂಡಿ ಮಾತನಾಡಿ, 'ಕಥೆ ತುಂಬಾ ಚೆನ್ನಾಗಿತ್ತು ಹಾಗಾಗಿ ನಿರ್ದೇಶನ ಮಾಡಲು ಒಪ್ಪಿಕೊಂಡೆ. ನಿರ್ಮಾಪಕರಿಗೆ ದೊಡ್ಡ ಮಟ್ಟದಲ್ಲಿ ಮಾಡಬೇಕು ಎನ್ನುವ ಕನಸಿತ್ತು. ಅದರಂತೆ ಈ ಕಿರುಚಿತ್ರವನ್ನು ಕಟ್ಟಿಕೊಡಲಾಗಿದೆ. ನೋಡುಗರ ಮೊಗದಲ್ಲಿ ನುಗು ಮೂಡಿಸುವುದೆ ನಗು ನಗುತ ಕಿರುಚಿತ್ರದ ಉದ್ದೇಶ' ಎಂದು ಹೇಳಿದರು.
ನಿರ್ಮಾಪಕರು ಮಾತನಾಡಿ,' ಸಾಮಾಜಿಕ ಕಳಕಳಿಯ ಸಿನಿಮಾ ಮಾಡಬೇಕು ಎನ್ನುವುದು ನನ್ನ ಕನಸಾಗಿತ್ತು. ನಿರ್ದೇಶಕ ಶಿವು ಜಮಖಂಡಿ ಅವರನ್ನು ಭೇಟಿಯಾಗಿ ಕಥೆ ಬಗ್ಗೆ ಮಾತನಾಡಿದೆ. ಬಳಿಕ ವಿಜಯ ರಾಘವೇಂದ್ರ ಅವರ ಜೊತೆ ಮಾತನಾಡಿದೆವು ಅವರು ಕೂಡ ಒಪ್ಪಿಕೊಂಡಿದ್ದು ಖುಷಿಯಾಗಿತು. ಒಳ್ಳೆಯ ಉದ್ದೇಶಕ್ಕೆ ಮಾಡಿರುವ ಸಿನಿಮಾವಿದು' ಎಂದು ಹೇಳಿದರು. ಸಿನಿಮಾ, ಕಿರುತೆರೆಯಲ್ಲಿ ಬ್ಯುಸಿಯಾಗಿರುವ ವಿಜಯ್ ರಾಘವೇಂದ್ರ ಇದೀಗ ಸಾಮಾಜಿಕ ಕಳಕಳಿಯ ಕಿರುಚಿತ್ರದಲ್ಲಿ ಕಾಣಿಸಿಕೊಂಡಿರುವು ನಿಜಕ್ಕೂ ಶ್ಲಾಘನೀಯ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.