
ನವದೆಹಲಿ, 30 ಸೆಪ್ಟೆಂಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿರುವ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.
ಈ ಸಂದರ್ಭದಲ್ಲಿ ಯುಪಿಎಸ್‌ಸಿ ಶತಮಾನೋತ್ಸವದ ಅಂಗವಾಗಿ ಪ್ರಧಾನಿ ಸ್ಮರಣಾರ್ಥ ನಾಣ್ಯ ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ. ಬಳಿಕ ‘ಭಾರತದಲ್ಲಿ ಕೇಂದ್ರ ಲೋಕಸೇವಾ ಆಯೋಗ ಮತ್ತು ರಾಜ್ಯ ಲೋಕಸೇವಾ ಆಯೋಗಗಳ ನೀತಿಗಳನ್ನು ರೂಪಿಸಿದ 100 ಮಹತ್ವದ ನಿರ್ಧಾರಗಳು’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ.
ಪ್ರಧಾನಿ ಕಚೇರಿಯ ಪ್ರಕಾರ, ವರ್ಷವಿಡೀ ನಡೆದ ಶತಮಾನೋತ್ಸವ ಕಾರ್ಯಕ್ರಮಗಳ ಸಮಾರೋಪವಾಗಿ ಈ ಸಮಾರಂಭ ನಡೆಯಲಿದೆ. ಕೇಂದ್ರ ಲೋಕಸೇವಾ ಆಯೋಗವು 1926ರಲ್ಲಿ ಸ್ಥಾಪನೆಯಾಗಿದ್ದು, 100 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ವರ್ಷವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಗಳಿಗೆ ಕಳೆದ ವರ್ಷದ ಅ.1ರಂದು ಚಾಲನೆ ನೀಡಲಾಗಿತ್ತು.
ಸಮಾರಂಭದಲ್ಲಿ ದೇಶದ ವಿವಿಧ ರಾಜ್ಯಗಳ ಲೋಕಸೇವಾ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರು, ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಯುಪಿಎಸ್‌ಸಿ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟವರು ಭಾಗವಹಿಸಲಿದ್ದಾರೆ.
ಯುಪಿಎಸ್‌ಸಿ ವತಿಯಿಂದ ಸೆ.30 ಮತ್ತು ಅ.1ರಂದು ಎರಡು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಮೊದಲ ದಿನ ಭಾರತ ಮಂಟಪದಲ್ಲಿ ‘ಶತಮಾನೋತ್ಸವ ಸಮಾರಂಭ–ಮಂಥನ’ ನಡೆಯಲಿದ್ದು, ಗಣ್ಯರ ಭಾಷಣದ ಬಳಿಕ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.