ಪಂಜಾಬ್ ವಿಧಾನಸಭೆ ಚುನಾವಣೆ ಮಾದಕವಸ್ತು ಸಮಸ್ಯೆ ಪ್ರಮುಖ ವಿಷಯ: ಅಮಿತ್ ಶಾ
ಚಂಡೀಗಢ, 30 ಸೆಪ್ಟೆಂಬರ್ (ಹಿ.ಸ.): ಪಂಜಾಬ್‌ನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮಾದಕವಸ್ತು ಸಮಸ್ಯೆಯನ್ನು ಪ್ರಮುಖ ವಿಷಯವನ್ನಾಗಿಸಿಕೊಂಡು ಎದುರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಜಲಂಧರ್‌ನಲ್ಲಿ ಬುಧವಾರ ನಡೆದ ‘ಮಾದಕವಸ್ತು ಮುಕ್ತ ಪ
गृहमंत्री अमित शाह पंजाब के जालंधर में जनसभा काे संबाेधित करते हुए


ಚಂಡೀಗಢ, 30 ಸೆಪ್ಟೆಂಬರ್ (ಹಿ.ಸ.):

ಪಂಜಾಬ್‌ನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮಾದಕವಸ್ತು ಸಮಸ್ಯೆಯನ್ನು ಪ್ರಮುಖ ವಿಷಯವನ್ನಾಗಿಸಿಕೊಂಡು ಎದುರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಜಲಂಧರ್‌ನಲ್ಲಿ ಬುಧವಾರ ನಡೆದ ‘ಮಾದಕವಸ್ತು ಮುಕ್ತ ಪಂಜಾಬ್‌ ಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪಂಜಾಬ್‌ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 2029ರ ಡಿಸೆಂಬರ್‌ 31ರೊಳಗೆ ರಾಜ್ಯವನ್ನು ಸಂಪೂರ್ಣ ಮಾದಕವಸ್ತು ಮುಕ್ತಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪಂಜಾಬ್‌ನಲ್ಲಿನ ಮಾದಕವಸ್ತು ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರ ವಿಫಲವಾಗಿದೆ ಎಂದು ಅಮಿತ್‌ ಶಾ ಆರೋಪಿಸಿದರು. ಮಾದಕವಸ್ತುಗಳ ಅಕ್ರಮ ವ್ಯಾಪಾರವನ್ನು ತಡೆಯಲು ಸಾಧ್ಯವಾಗದವರು ಪಂಜಾಬ್‌ ಅನ್ನು ಮಾದಕವಸ್ತು ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಭಗವಂತ್‌ ಮಾನ್‌ ವಿರುದ್ಧ ವಾಗ್ದಾಳಿ ನಡೆಸಿದರು.

ದೆಹಲಿ ಮದ್ಯ ಹಗರಣದ ಆರೋಪವನ್ನು ಉಲ್ಲೇಖಿಸಿದ ಅವರು, ಮಾದಕವಸ್ತುಗಳ ಅಕ್ರಮ ವ್ಯಾಪಾರಕ್ಕೆ ಉತ್ತೇಜನ ನೀಡುವವರಿಂದ ಪಂಜಾಬ್‌ ಅನ್ನು ಮಾದಕವಸ್ತು ಮುಕ್ತಗೊಳಿಸುವ ನಿರೀಕ್ಷೆ ಸಾಧ್ಯವಿಲ್ಲ ಎಂದು ಹೇಳಿದರು.

ಪಂಜಾಬ್‌ನ ಸೈನಿಕರು ದೇಶದ ಭದ್ರತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ರೈತರು ದೇಶದ ಆಹಾರ ಧಾನ್ಯ ಸಂಗ್ರಹವನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಮಿತ್‌ ಶಾ ಹೇಳಿದರು. ರಾಜ್ಯ ಸರ್ಕಾರ 26 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ರೈತರಿಗೆ ಭರವಸೆ ನೀಡಿತ್ತು. ಆದರೆ ಅದನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ಮಾದಕವಸ್ತುಗಳ ಕಾರಣ ಪ್ರತಿಭಾವಂತ ಯುವಕರು ಅಕಾಲಿಕವಾಗಿ ಮೃತಪಟ್ಟಿರುವುದು ಅತ್ಯಂತ ದುಃಖಕರ ಎಂದು ಹೇಳಿದ ಅವರು, ಯುವಕರನ್ನು ಮಾದಕವಸ್ತುಗಳ ಜಾಲದಿಂದ ಹೊರತರುವುದರ ಜತೆಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಕಳೆದ ಮೂರು ವರ್ಷಗಳಲ್ಲಿ ಪಂಜಾಬ್‌ ಸರ್ಕಾರ ಮಾದಕವಸ್ತು ವಿರೋಧಿ ಕ್ರಮಗಳಿಗೆ ಸಂಬಂಧಿಸಿದಂತೆ ಒಂದೂ ಸಭೆ ನಡೆಸಿಲ್ಲ ಎಂದು ಅಮಿತ್‌ ಶಾ ಆರೋಪಿಸಿದರು. ಜಲಂಧರ್‌ನಲ್ಲಿ ಮಾದಕವಸ್ತು ನಿಯಂತ್ರಣ ದಳದ ಕಚೇರಿ ತೆರೆಯುವ ಕೇಂದ್ರದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ ಎಂದೂ ಅವರು ಹೇಳಿದರು.

ಮಹಿಳೆಯರ ಸುರಕ್ಷತೆಯೂ ಗಂಭೀರ ವಿಷಯವಾಗಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅದಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಜಾಹೀರಾತು ಹಂಚಿಕೆ, ಭೂಮಿ ಹಾಗೂ ಪೌಷ್ಟಿಕ ಆಹಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿಯೂ ಪಂಜಾಬ್‌ ಸರ್ಕಾರವನ್ನು ಅವರು ಟೀಕಿಸಿದರು.

2029ರ ಡಿಸೆಂಬರ್‌ 31ರ ಬಳಿಕ ಪಂಜಾಬ್‌ನಲ್ಲಿ ಮಕ್ಕಳಿಗೆ ‘ಚಿಟ್ಟಾ’ ಮಾದಕವಸ್ತು ಒದಗಿಸುವ ಯಾವುದೇ ವ್ಯಾಪಾರಿ ಉಳಿಯುವುದಿಲ್ಲ ಮತ್ತು ಮಾದಕವಸ್ತುಗಳ ಅಕ್ರಮ ವ್ಯಾಪಾರ ನಡೆಸುವವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಅಮಿತ್‌ ಶಾ ಹೇಳಿದರು. ಇದನ್ನು ಬಿಜೆಪಿ ತನ್ನ ಚುನಾವಣಾ ಗುರಿ ಮತ್ತು ಭರವಸೆಯಾಗಿ ಘೋಷಿಸಿದೆ ಎಂದು ತಿಳಿಸಿದರು.

ಬಿಜೆಪಿಯ ‘ಮಾದಕವಸ್ತು ಮುಕ್ತ ಪಂಜಾಬ್‌ ಯಾತ್ರೆ’ ಸೆಪ್ಟೆಂಬರ್‌ 18ರಂದು ಆರಂಭವಾಗಿತ್ತು. ಪಕ್ಷದ ಪ್ರಕಾರ, ನಾಲ್ಕು ಹಂತಗಳಲ್ಲಿ ನಡೆದ ಯಾತ್ರೆ ರಾಜ್ಯದ 117 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಸುಮಾರು 4,000 ಕಿಲೋಮೀಟರ್‌ ಕ್ರಮಿಸಿದೆ. ಜಲಂಧರ್‌ನಲ್ಲಿ ಅಮಿತ್‌ ಶಾ ಅವರ ಸಭೆಯೊಂದಿಗೆ ಯಾತ್ರೆ ಸಮಾಪ್ತಿಯಾಯಿತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande