
ಶಿವಮೊಗ್ಗ, 30 ಸೆಪ್ಟೆಂಬರ್ (ಹಿ.ಸ.):
ದೇಶದಲ್ಲಿ ದ್ವೇಷ ಮತ್ತು ಅಸೂಯೆಯ ವಾತಾವರಣದ ವಿರುದ್ಧ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶ ಸಾರುವ ಉದ್ದೇಶದಿಂದ ಜನತಾ ಜೋಡೋ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದರು.
ಶಿಕಾರಿಪುರದಲ್ಲಿ ನಡೆದ ಜನತಾ ಜೋಡೋ ಜಾಗೃತಿ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಜನಪ್ರಿಯತೆಗೆ ಈ ಸಮಾವೇಶ ಸಾಕ್ಷಿಯಾಗಿದೆ ಎಂದರು.
ಇದು ಭಾರತ ಜೋಡೋ ಯಾತ್ರೆಯಲ್ಲ. ಮಹಾತ್ಮ ಗಾಂಧೀಜಿ ದಂಡಿ ಯಾತ್ರೆಯಲ್ಲಿ ಸುಮಾರು 300 ಕಿ.ಮೀ. ಕ್ರಮಿಸಿದ್ದರು. ರಾಹುಲ್ ಗಾಂಧಿ ಅವರು ದೇಶದಲ್ಲಿ ದ್ವೇಷ ಮತ್ತು ಅಸೂಯೆಯ ವಾತಾವರಣದ ವಿರುದ್ಧ ಶಾಂತಿ ಹಾಗೂ ಸೌಹಾರ್ದತೆಯ ಸಂದೇಶದೊಂದಿಗೆ ದೀರ್ಘ ಯಾತ್ರೆ ನಡೆಸಿದ್ದರು. ಆ ಯಾತ್ರೆಗೆ ನಾಲ್ಕು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ರಾಹುಲ್ ಗಾಂಧಿ ಅವರ ಆಶಯದಂತೆ ಜನತಾ ಜೋಡೋ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದೇಶದಲ್ಲಿ ಹಲವು ಪ್ರಮುಖ ಧರ್ಮಗಳ ಜನರು ಭಾರತೀಯರಾಗಿ ಒಂದಾಗಿ ಬದುಕುತ್ತಿದ್ದಾರೆ. ಆದರೆ ಬಿಜೆಪಿ ದ್ವೇಷದ ವಾತಾವರಣ ಸೃಷ್ಟಿಸಿದೆ ಎಂದು ಆರೋಪಿಸಿದ ಅವರು, ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸ್ಮರಿಸಿದರು.
“ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರಬನ್ನಿ, ಮೌಢ್ಯತೆಯ ಮಾರಿಯನ್ನು ಹೊರದೂಡ ಬನ್ನಿ, ಬಡತನದ ಬುಡ ಕೀಳ ಬನ್ನಿ, ವಿಜ್ಞಾನ ದೀವಿಗೆ ಹಿಡಿಯ ಬನ್ನಿ, ಬನ್ನಿ ಸೋದರರೆ ವಿಶ್ವಪಥಕ್ಕೆ” ಎಂಬ ಕುವೆಂಪು ಅವರ ಸಂದೇಶವನ್ನು ಉಲ್ಲೇಖಿಸಿದ ಹರಿಪ್ರಸಾದ್, ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಉಳಿಸಿಕೊಳ್ಳಬೇಕು ಎಂದರು.
ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ
ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕರು ತ್ಯಾಗ, ಬಲಿದಾನ ಮಾಡಿದ್ದಾರೆ. ಇಂತಹ ಮಹನೀಯರು ಹುಟ್ಟಿದ ನೆಲದಲ್ಲಿ ಇಂದು ಭ್ರಷ್ಟಾಚಾರ ಮತ್ತು ದ್ವೇಷದ ವಾತಾವರಣ ಸೃಷ್ಟಿಯಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದರು.
‘ಉಳುವವನೇ ಭೂಮಿಯ ಒಡೆಯ’ ಎಂಬ ಕಾಗೋಡು ಹೋರಾಟ ಆರಂಭವಾದ ಜಿಲ್ಲೆ ಶಿವಮೊಗ್ಗ. ಇಂತಹ ಜಿಲ್ಲೆಯ ಪರಂಪರೆಯನ್ನು ಉಳಿಸುವ ಬದಲು ಬಿಜೆಪಿ ನಾಯಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸಿದವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, 18 ಕೋಟಿ ರೂಪಾಯಿಗಳನ್ನು ಆರ್ಟಿಜಿಎಸ್ ಮೂಲಕ ಲಂಚ ಪಡೆದವರು ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಮಾಡುವುದು ದುರಂತ ಎಂದು ಆರೋಪಿಸಿದರು.
ಬಿಜೆಪಿ ನಾಯಕರು ತಮ್ಮ ತಂದೆಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ ಹರಿಪ್ರಸಾದ್, ನೋಟು ರದ್ದತಿ ಸಂದರ್ಭದಲ್ಲಿ 90 ವರ್ಷದ ವೃದ್ಧೆಯೊಬ್ಬರನ್ನು ಬ್ಯಾಂಕ್ ಮುಂದೆ ನಿಲ್ಲಿಸಿದ ಘಟನೆಯನ್ನು ಉಲ್ಲೇಖಿಸಿದರು. ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ ಪಕ್ಷವೇ ಅವರ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆ ಎಂದು ಆರೋಪಿಸಿದರು.
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಶಾಸಕರ ಬೆಂಬಲ ಇರಲಿಲ್ಲ. ಆ ಸಂದರ್ಭದಲ್ಲಿ ‘ಆಪರೇಷನ್ ಕಮಲ’ದ ಮೂಲಕ ಶಾಸಕರನ್ನು ಖರೀದಿಸಿ ರಾಜ್ಯದ ಕೀರ್ತಿ ಹಾಗೂ ಕನ್ನಡಿಗರ ಘನತೆಗೆ ಧಕ್ಕೆ ತಂದರು ಎಂದು ಹರಿಪ್ರಸಾದ್ ಆರೋಪಿಸಿದರು. ಬಳಿಕ ಕೆಜೆಪಿ ಸ್ಥಾಪಿಸಿ, ಮತ್ತೆ ಬಿಜೆಪಿಗೆ ಸೇರಿದ ಸಂದರ್ಭದಲ್ಲಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಂಡರು ಎಂದು ಟೀಕಿಸಿದರು.
ಎಸ್ಐಆರ್ ವಿರುದ್ಧ ಹೋರಾಟಕ್ಕೆ ಕರೆ
ದೇಶದ ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಚುನಾವಣೆ ವ್ಯವಸ್ಥೆಯನ್ನು ಸ್ವಾತಂತ್ರ್ಯ ಹೋರಾಟದ ಕೊಡುಗೆಯಾಗಿ ಉಳಿಸಿಕೊಳ್ಳಬೇಕು ಎಂದು ಹರಿಪ್ರಸಾದ್ ಹೇಳಿದರು.
ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಕರ್ನಾಟಕದಲ್ಲಿ ಎಸ್ಐಆರ್ ಮೂಲಕ 5.47 ಕೋಟಿ ಮತದಾರರ ಪೈಕಿ 1.7 ಕೋಟಿ ಮತದಾರರನ್ನು ಕೈಬಿಡಲಾಗಿದೆ ಎಂದು ಹೇಳಿದರು. 43 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ. ಹಿರಿಯ ನಾಗರಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ಅಧಿಕಾರಿಗಳ ಮುಂದೆ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಎಲ್ಲರೂ ಒಗ್ಗೂಡಿ ಹೋರಾಡಬೇಕು ಎಂದು ಕರೆ ನೀಡಿದರು.
ವಂದೇ ಮಾತರಂ ವಿಚಾರ ಪ್ರಸ್ತಾಪ
ಮೀಸಲಾತಿಯ ಉದ್ದೇಶ ಬಡತನ ನಿರ್ಮೂಲನೆ ಅಥವಾ ಉದ್ಯೋಗ ವಿನಿಮಯವಲ್ಲ ಎಂದು ಹೇಳಿದ ಹರಿಪ್ರಸಾದ್, ವಂದೇ ಮಾತರಂ ಹಾಡಿನ ವಿಚಾರವನ್ನೂ ಪ್ರಸ್ತಾಪಿಸಿದರು.
1937ರಲ್ಲಿ ವಂದೇ ಮಾತರಂನ ಮೊದಲ ಎರಡು ಪ್ಯಾರಾಗಳನ್ನು ಅಳವಡಿಸಿಕೊಳ್ಳಲಾಯಿತು. 1950ರಲ್ಲಿ ರಾಜೇಂದ್ರ ಪ್ರಸಾದ್ ಅವರು ಅದನ್ನು ರಾಷ್ಟ್ರದ ಹಾಡು ಎಂದು ಕರೆದಿದ್ದರು. ಕಳೆದ 80 ವರ್ಷಗಳಿಂದ ಯಾವುದೇ ರೀತಿಯ ವಿರೋಧ ಇರಲಿಲ್ಲ. ಜನರ ಗಮನವನ್ನು ಬೇರೆಡೆ ಸೆಳೆಯಲು ಈಗ ವಂದೇ ಮಾತರಂ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ ಎಂದು ಆರೋಪಿಸಿದರು.
ಮೊದಲ ಎರಡು ಪ್ಯಾರಾಗಳನ್ನೇ ಹಾಡುತ್ತೇವೆ ಎಂಬ ತಮ್ಮ ನಿಲುವನ್ನು ಮುಂದುವರಿಸುವುದಾಗಿ ಅವರು ಹೇಳಿದರು.
ಉದ್ಯೋಗ, ರೈತರ ಸಮಸ್ಯೆಗಳ ಬಗ್ಗೆ ಟೀಕೆ
ಮೋದಿ ಸರ್ಕಾರ ಬಂದ ನಂತರ ದೇಶದಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ ಎಂದು ಹರಿಪ್ರಸಾದ್ ಆರೋಪಿಸಿದರು. ದೇಶದಲ್ಲಿ ಶೇ.72ರಷ್ಟು ಪದವೀಧರರಿಗೆ ಉದ್ಯೋಗವಿಲ್ಲ ಎಂದು ಹೇಳಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ 72 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಲಾಗಿತ್ತು. ಕಾಫಿ ತೋಟಗಳಿಗೆ 1,200 ಕೋಟಿ ರೂಪಾಯಿ ಪ್ಯಾಕೇಜ್ ನೀಡಲಾಗಿತ್ತು ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಲವು ಪ್ರದೇಶಗಳು ಬರದಿಂದ ಬಳಲುತ್ತಿದ್ದರೂ ಪಂಚತಾರಾ ಹೋಟೆಲ್ಗಳಲ್ಲಿ ಊಟ ಮಾಡುತ್ತಿದ್ದರು ಎಂದು ಟೀಕಿಸಿದ ಹರಿಪ್ರಸಾದ್, ಬಳ್ಳಾರಿಯ ಗಣಿಗಾರಿಕೆ ಆರೋಪ ಎದುರಿಸಿದ್ದವರನ್ನು ಮಂತ್ರಿಗಳನ್ನಾಗಿ ಮಾಡಲಾಗಿತ್ತು ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನೂ ಟೀಕಿಸಿದ ಅವರು, ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರ ಉದ್ಯೋಗ ಹಾಗೂ ಮಹಿಳೆಯರ ಸುರಕ್ಷತೆ ಕುರಿತು ಸಾಕಷ್ಟು ಚರ್ಚೆಯಾಗಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಂಗಳುಗಟ್ಟಲೆ ಹೇಳಬಹುದು. ಬಿಜೆಪಿಯ ಸಾಧನೆ ಏನು ಎಂದು ಪ್ರಶ್ನಿಸಿದ ಹರಿಪ್ರಸಾದ್, “ಹಿಂಸೆ, ಸುಳ್ಳು ಅವರ ಮಂತ್ರ” ಎಂದು ಟೀಕಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.