
ಬೆಂಗಳೂರು, 30 ಸೆಪ್ಟೆಂಬರ್ (ಹಿ.ಸ.):
ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ರಾಜ್ಯ ಸರ್ಕಾರದ ನೀರು ನಿರ್ವಹಣೆಯ ಬಗ್ಗೆ ಪ್ರತಿಪಕ್ಷ ನಾಯಕ ಆರ್. ಅಶೋಕ ಪ್ರಶ್ನೆ ಮಾಡಿದ್ದಾರೆ.
ಎಕ್ಸ್‌ನಲ್ಲಿ ನೀಡಿರುವ ಹೇಳಿಕೆಯಲ್ಲಿ ಅಶೋಕ, ಕಳೆದ ವರ್ಷ ಇದೇ ಅವಧಿಯಲ್ಲಿ ನಾಲ್ಕು ಪ್ರಮುಖ ಜಲಾಶಯಗಳಲ್ಲಿ 107.4 ಟಿಎಂಸಿ ಅಡಿ ನೀರಿದ್ದರೆ, ಈ ಬಾರಿ 59.5 ಟಿಎಂಸಿ ಅಡಿ ಮಾತ್ರ ಉಳಿದಿದೆ ಎಂದು ತಿಳಿಸಿದ್ದಾರೆ. ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ 84.1 ಟಿಎಂಸಿ ಅಡಿಯಿಂದ 36.2 ಟಿಎಂಸಿ ಅಡಿಗೆ ಕುಸಿದಿದೆ ಎಂದು ಹೇಳಿದ್ದಾರೆ.
ಇದು ಕೇವಲ ಅಂಕಿ-ಅಂಶದ ವಿಚಾರವಲ್ಲ. ಕರ್ನಾಟಕದ ರೈತರ ಬದುಕು, ಬೆಳೆ ಹಾಗೂ ಕುಡಿಯುವ ನೀರಿನ ಭದ್ರತೆಯ ಪ್ರಶ್ನೆಯಾಗಿದೆ. ಬೆಂಗಳೂರಿನ ಜನರ ಕುಡಿಯುವ ನೀರಿನ ಹಕ್ಕಿನ ಪ್ರಶ್ನೆಯೂ ಆಗಿದೆ ಎಂದು ಅಶೋಕ ಹೇಳಿದ್ದಾರೆ.
ತಮಿಳುನಾಡಿಗೆ ನೀರು ನೀಡುವುದನ್ನು ಇನ್ನೂ ತಡೆಯದಿದ್ದರೆ ಕುಡಿಯಲು ಒಂದು ಹನಿ ನೀರು ಕೂಡ ಉಳಿಯದ ಪರಿಸ್ಥಿತಿ ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಶ್ನಿಸಿರುವ ಅಶೋಕ, ಮಳೆ ಕೊರತೆ ಹಾಗೂ ಜಲಾಶಯಗಳ ಸ್ಥಿತಿ ಸರ್ಕಾರಕ್ಕೆ ತಿಳಿದಿದ್ದರೂ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳೇನು ಎಂದು ಕೇಳಿದ್ದಾರೆ. ನೀರಿನ ನಿರ್ವಹಣೆಯಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವೇನು? ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯಕ್ಕೆ ಬೆಲೆ ಕಟ್ಟಬೇಕಿರುವುದು ರೈತರೇ ಅಥವಾ ಕನ್ನಡಿಗರೇ ಎಂದು ಪ್ರಶ್ನಿಸಿದ್ದಾರೆ.
ಕಾವೇರಿ ಕರ್ನಾಟಕದ ಜೀವನಾಡಿಯಾಗಿದ್ದು, ಅಧಿಕಾರದ ರಾಜಕೀಯಕ್ಕಿಂತ ಕನ್ನಡಿಗರ ನೀರು ಮತ್ತು ರೈತರ ಬದುಕು ಮುಖ್ಯ ಎಂದು ಅಶೋಕ ಹೇಳಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.