
ದಾವಣಗೆರೆ, 03 ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ನಗರದ ಪ್ರತಿಷ್ಠಿತ 'ಟೀಮ್ ಅಕಾಡೆಮಿ'ಯ ಹಾಸ್ಟೆಲ್ನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ಹೂವಿನ ಹಡಗಲಿ ತಾಲ್ಲೂಕಿನ ಕುರುವತ್ತಿ ಗ್ರಾಮದ 17 ವರ್ಷದ ರಂಜಿತಾ ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ದಾವಣಗೆರೆಯ ಟೀಮ್ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ, ನಿನ್ನೆ ರಾತ್ರಿ ಹಾಸ್ಟೆಲ್ನ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಮಗಳ ಅನಿರೀಕ್ಷಿತ ಸಾವಿನ ಬಗ್ಗೆ ಪೋಷಕರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಆತ್ಮಹತ್ಯೆಯಲ್ಲ, ಬದಲಿಗೆ ಮಗಳನ್ನು ಹೊಡೆದು ಕೊಲೆ ಮಾಡಿ ನಂತರ ನೇಣು ಹಾಕಲಾಗಿದೆ ಎಂದು ಅವರು ಅಕಾಡೆಮಿ ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮೃತರ ಪೋಷಕರು ನಗರದ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R