
ಬೆಂಗಳೂರು, 03 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಬಾಗಲಕೋಟೆಯಲ್ಲಿ ಶಾಲೆಯ ಛಾವಣಿ ಕುಸಿದು ವಿದ್ಯಾರ್ಥಿಗಳು ತರಗತಿಯಲ್ಲಿದ್ದ ಸಂದರ್ಭದಲ್ಲೇ ಅಪಾಯ ಎದುರಾದ ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಈ ‘ಖಟಾಖಟ್ ರೂಫ್ ಸ್ಕೂಲ್’ಗೆ ಭೇಟಿ ನೀಡಿ ವಿದ್ಯಾರ್ಥಿಗಳ ಧ್ವನಿ ಆಲಿಸಬೇಕು ಎಂದು ಆಗ್ರಹಿಸಿದ್ದಾರೆ.
‘ನ್ಯಾಯ್’ ಭಾಷಣಗಳು, ಭರವಸೆಗಳು ಹಾಗೂ ‘ಖಟಾಖಟ್’ ಘೋಷಣೆಗಳನ್ನು ನೀಡಿರುವ ರಾಹುಲ್ ಗಾಂಧಿ, ಇದೀಗ ಬಾಗಲಕೋಟೆಯ ಶಾಲೆಗೆ ಬಂದು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಬೇಕು. ತರಗತಿಯಲ್ಲಿ ಮಕ್ಕಳು ಕುಳಿತಿದ್ದಾಗಲೇ ಶಾಲೆಯ ಛಾವಣಿ ಕುಸಿದಿದೆ. ಇವರು ಕೇವಲ ಅಂಕಿ-ಅಂಶಗಳಲ್ಲ, ಮಕ್ಕಳು ಎಂದು ಅಶೋಕ್ ಹೇಳಿದ್ದಾರೆ.
ಭಾರತಕ್ಕೆ ನ್ಯಾಯ ಮತ್ತು ಗ್ಯಾರಂಟಿಗಳ ಬಗ್ಗೆ ಬೋಧಿಸುವ ಕಾಂಗ್ರೆಸ್ ಸರ್ಕಾರಕ್ಕೆ ಮಕ್ಕಳಿಗೆ ಸುರಕ್ಷಿತ ತರಗತಿ ಕೊಠಡಿಯನ್ನೂ ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.
ಕರ್ನಾಟಕಕ್ಕೆ ಬಂದು ಶಾಲೆಯಲ್ಲಿ ನಿಂತು ಮಕ್ಕಳನ್ನು ನೋಡಿ, ಅವರ ಧ್ವನಿ ಆಲಿಸಿ ‘ಛಾತ್ರೋಂ ಕಿ ಗೂಂಜ್’ ನಡೆಸುವಂತೆ ರಾಹುಲ್ ಗಾಂಧಿಗೆ ಸವಾಲು ಹಾಕಿರುವ ಅಶೋಕ್, ‘ನ್ಯಾಯ್ ಎಲ್ಲಿದೆ? ಗ್ಯಾರಂಟಿಗಳು ಎಲ್ಲಿವೆ? ಆಡಳಿತ ಎಲ್ಲಿದೆ?’ ಎಂದು ಪ್ರಶ್ನಿಸಿದ್ದಾರೆ.
‘ನೀವು ನಮಗೆ ಖಟಾಖಟ್ ನೀಡಿದ್ದೀರಿ, ಕರ್ನಾಟಕ ನಿಮಗೆ ಉತ್ತರ ನೀಡಿದೆ—ಖಟಾಖಟ್ ಛಾವಣಿ ಕುಸಿದಿದೆ’ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.