
ಬಾಗಲಕೋಟೆ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಹಾಕಿ ದಿಗ್ಗಜ, ಒಲಿಂಪಿಕ್ ಚಿನ್ನದ ಪದಕ ವಿಜೇತ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ಬಾಗಲಕೋಟೆಯಲ್ಲಿ 7-ಎ-ಸೈಡ್ ರಿಂಕ್ ಹಾಕಿ ಪಂದ್ಯಾವಳಿಗೆ ಅದ್ದೂರಿ ಚಾಲನೆ ನೀಡಲಾಯಿತು.
ಬಿವಿವಿ ಸಂಘದ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಾಕಿ ಹೀರೋಸ್ ಫ್ಯಾನ್ ಬಾಗಲಕೋಟೆ ವತಿಯಿಂದ ಆಯೋಜಿಸಿರುವ ಈ ಪಂದ್ಯಾವಳಿಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಾಕಿ ಕ್ರೀಡೆಗೆ ಭಾರತದಲ್ಲಿ ವಿಶೇಷವಾದ ಇತಿಹಾಸ ಹಾಗೂ ಪರಂಪರೆ ಇದೆ. ದೇಶಕ್ಕೆ ಹೆಮ್ಮೆ ತಂದಿರುವ ಅನೇಕ ಹಾಕಿ ಕ್ರೀಡಾಪಟುಗಳ ಸಾಧನೆಯ ಹಿಂದೆ ಇಂತಹ ಸ್ಥಳೀಯ ಮಟ್ಟದ ಕ್ರೀಡಾಕೂಟಗಳು ಹಾಗೂ ತರಬೇತಿಯ ಮಹತ್ವವಿದೆ. ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಕ್ರೀಡಾ ದಿನವು ಕ್ರೀಡಾಪಟುಗಳ ಸಾಧನೆಯನ್ನು ಸ್ಮರಿಸುವುದರ ಜೊತೆಗೆ, ಯುವ ಪೀಳಿಗೆಯನ್ನು ಕ್ರೀಡೆಯತ್ತ ಪ್ರೇರೇಪಿಸುವ ಮಹತ್ವದ ದಿನವಾಗಿದೆ. ಮೇಜರ್ ಧ್ಯಾನಚಂದ್ ಅವರ ಕ್ರೀಡಾ ಸಾಧನೆ, ಶಿಸ್ತು, ಪರಿಶ್ರಮ ಹಾಗೂ ದೇಶಪ್ರೇಮ ಇಂದಿನ ಯುವ ಕ್ರೀಡಾಪಟುಗಳಿಗೆ ಸದಾ ಆದರ್ಶವಾಗಬೇಕು ಎಂದು ಅವರು ತಿಳಿಸಿದರು.
ಬಾಗಲಕೋಟೆಯಲ್ಲಿ ಹಾಕಿ ಕ್ರೀಡೆಗೆ ಉತ್ತಮ ವಾತಾವರಣ ನಿರ್ಮಿಸುವ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಯುವಕರು ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಇಂತಹ ಪಂದ್ಯಾವಳಿಗಳು ಕ್ರೀಡಾಪಟುಗಳ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಲಿವೆ ಎಂದು ಚರಂತಿಮಠ ಹೇಳಿದರು.
ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಹಾಗೂ ಅನುಭವಿ ಹಾಕಿ ತರಬೇತುದಾರರಾದ ಲಾಲಸಾಬ ಮುದ್ದೇಬಿಹಾಳ ಹಾಗೂ ಶರಣ ನಾವಲಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಾಕಿ ಕ್ರೀಡೆಯ ಬೆಳವಣಿಗೆಗೆ ಅವರು ನೀಡಿರುವ ಸೇವೆಯನ್ನು ಇದೇ ಸಂದರ್ಭದಲ್ಲಿ ಸ್ಮರಿಸಲಾಯಿತು.
ಎರಡು ದಿನಗಳ ಕಾಲ ನಡೆಯಲಿರುವ ಈ 7-ಎ-ಸೈಡ್ ರಿಂಕ್ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದು, ಕ್ರೀಡಾಭಿಮಾನಿಗಳಲ್ಲಿ ಪಂದ್ಯಾವಳಿ ಕುರಿತು ಹೆಚ್ಚಿನ ಉತ್ಸಾಹ ಕಂಡುಬಂದಿದೆ. ವಿವಿಧ ತಂಡಗಳ ಆಟಗಾರರು ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದು, ಎರಡು ದಿನಗಳ ಕಾಲ ಕ್ರೀಡಾಂಗಣದಲ್ಲಿ ಹಾಕಿಯ ರೋಚಕ ಹಣಾಹಣಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ್ ಸೇರಿದಂತೆ ಬಿವಿವಿ ಸಂಘದ ಪದಾಧಿಕಾರಿಗಳು, ಕ್ರೀಡಾಭಿಮಾನಿಗಳು, ಹಾಕಿ ತರಬೇತುದಾರರು, ಆಟಗಾರರು ಹಾಗೂ ಗಣ್ಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande