
ಬಾಗಲಕೋಟೆ, 03 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇದ್ದಲಗಿ ಪುನರ್ವಸತಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಯೋಜನಾಧಿಕಾರಿ ಮಹೇಶ್ ಕವಲಾಗಿ ತಿಳಿಸಿದ್ದಾರೆ.
ಇದ್ದಲಗಿ ಪುನರ್ವಸತಿ ಕೇಂದ್ರದ ಸಮಸ್ಯೆಗಳ ಕುರಿತು ಮಹಾ ವ್ಯವಸ್ಥಾಪಕರು, ಪುನರ್ವಸತಿ ಮತ್ತು ಪುನರ್ನಿರ್ಮಾಣ ಹಾಗೂ ಭೂಸ್ವಾಧೀನ, ಕೃಷ್ಣಾ ಮೇಲ್ದಂಡೆ ಯೋಜನೆ, ಬಾಗಲಕೋಟೆ ಅವರ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಿ, ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ನೀಡಿದ ಸೂಚನೆಗಳ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶೆಡ್ಗಳ ದುರಸ್ತಿಗೆ ₹50 ಲಕ್ಷ ಅನುಮೋದನೆ
ಪುನರ್ವಸತಿ ಕೇಂದ್ರದಲ್ಲಿರುವ ಶೆಡ್ಗಳ ದುರಸ್ತಿಗಾಗಿ ಅನುದಾನ ಒದಗಿಸುವಂತೆ ಮಹಾ ವ್ಯವಸ್ಥಾಪಕರ ಕಚೇರಿಯಿಂದ ಸಲ್ಲಿಸಲಾಗಿದ್ದ ಪ್ರಸ್ತಾವನೆಯನ್ನು ಪುರಸ್ಕರಿಸಲಾಗಿದೆ. ಇದರ ಮೊದಲ ಹಂತವಾಗಿ ನಿಗಮ ಕಚೇರಿಯಿಂದ ₹50 ಲಕ್ಷ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಇದೀಗ ಟೆಂಡರ್ ಪ್ರಕ್ರಿಯೆ ಮೂಲಕ ದುರಸ್ತಿ ಕಾಮಗಾರಿಯನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮಹೇಶ್ ಕವಲಾಗಿ ವಿವರಿಸಿದ್ದಾರೆ.
ಸಂತ್ರಸ್ತರ ನಿವೇಶನಗಳಿಗೆ ನೀರು ಪೂರೈಕೆ
ಪುನರ್ವಸತಿ ಕೇಂದ್ರದಲ್ಲಿ ಮನೆ ನಿರ್ಮಿಸಿರುವ ಹಾಗೂ ಮನೆ ನಿರ್ಮಿಸುತ್ತಿರುವ ಸಂತ್ರಸ್ತರ ನಿವೇಶನಗಳಿಗೆ ತುರ್ತು ಕ್ರಮ ಕೈಗೊಂಡು ನೀರಿನ ವ್ಯವಸ್ಥೆ ಕಲ್ಪಿಸಿ ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರು ಸೇರಿದಂತೆ ಅಗತ್ಯ ನೀರಿನ ಸೌಲಭ್ಯ ದೊರೆಯುವಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ರಸ್ತೆ ಬದಿಯ ಮುಳ್ಳು ಕಂಟಿಗಳ ತೆರವು
ಪುನರ್ವಸತಿ ಕೇಂದ್ರದಲ್ಲಿ ಮನೆ ನಿರ್ಮಿಸಿರುವ ಹಾಗೂ ನಿರ್ಮಾಣ ಹಂತದಲ್ಲಿರುವ ಸಂತ್ರಸ್ತರ ನಿವೇಶನಗಳಿಗೆ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಮುಳ್ಳು ಕಂಟಿ ಹಾಗೂ ಜಂಗಲ್ ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಸಂತ್ರಸ್ತರಿಗೆ ತಮ್ಮ ನಿವೇಶನಗಳಿಗೆ ಸುಗಮವಾಗಿ ಸಂಚರಿಸಲು ಅನುಕೂಲವಾಗಲಿದೆ.
ತಾತ್ಕಾಲಿಕ ವಿದ್ಯುತ್ ವ್ಯವಸ್ಥೆಗೆ ₹30 ಲಕ್ಷ ಪ್ರಸ್ತಾವನೆ
ಮನೆ ನಿರ್ಮಿಸಿರುವ ಹಾಗೂ ನಿರ್ಮಿಸುತ್ತಿರುವ ಸಂತ್ರಸ್ತರ ನಿವೇಶನಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಒದಗಿಸುವ ಉದ್ದೇಶದಿಂದ ₹30 ಲಕ್ಷ ಮೊತ್ತದ ಕಾಮಗಾರಿಗೆ ಅನುಮೋದನೆ ನೀಡುವಂತೆ ನಿಗಮ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸ್ತುತ ಪ್ರಸ್ತಾವನೆಯು ಅನುಮೋದನೆ ಹಂತದಲ್ಲಿದ್ದು, ಅನುಮೋದನೆ ದೊರೆತ ಬಳಿಕ ಅಗತ್ಯ ವಿದ್ಯುತ್ ಕಾಮಗಾರಿಯನ್ನು ಕೈಗೊಳ್ಳಲು ಕ್ರಮ ವಹಿಸಲಾಗುವುದು ಎಂದು ಯೋಜನಾಧಿಕಾರಿ ತಿಳಿಸಿದ್ದಾರೆ.
ಒಟ್ಟಾರೆ, ಇದ್ದಲಗಿ ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರು ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಶೆಡ್ಗಳ ದುರಸ್ತಿ, ನೀರು ಪೂರೈಕೆ, ಜಂಗಲ್ ತೆರವು ಹಾಗೂ ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪುನರ್ವಸತಿ ಕೇಂದ್ರದ ನಿವಾಸಿಗಳ ಜೀವನಮಟ್ಟ ಸುಧಾರಿಸಲು ಕ್ರಮ ವಹಿಸಲಾಗುತ್ತಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande