ಜಾಗತಿಕ ಮಟ್ಟದಲ್ಲಿ ಭಾರತೀಯ ಜವಳಿ, ಫ್ಯಾಷನ್ ಉದ್ಯಮಕ್ಕೆ ಉತ್ತೇಜನ: ಭಾರತ–ಫ್ರಾನ್ಸ್ ಒಪ್ಪಂದ
ನವದೆಹಲಿ/ಪ್ಯಾರಿಸ್, 03 ಸೆಪ್ಟೆಂಬರ್(ಹಿ.ಸ): ಆ್ಯಂಕರ್:ಭಾರತೀಯ ಜವಳಿ ಮತ್ತು ಫ್ಯಾಷನ್ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಭಾರತ–ಫ್ರಾನ್ಸ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಪ್ಯಾರಿಸ್‌ನಲ್ಲಿ ನಡೆದ ‘ಪ್ರೀಮಿಯರ್ ವಿಷನ್’ ಪ್ರದರ್ಶನದ ಸಂ
केन्द्रीय कपड़ा सचिव नीलम शमी राव के साथ अन्य लोग मौजूद।


ನವದೆಹಲಿ/ಪ್ಯಾರಿಸ್, 03 ಸೆಪ್ಟೆಂಬರ್(ಹಿ.ಸ):

ಆ್ಯಂಕರ್:ಭಾರತೀಯ ಜವಳಿ ಮತ್ತು ಫ್ಯಾಷನ್ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಭಾರತ–ಫ್ರಾನ್ಸ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಮಾಡಲಾಗಿದೆ.

ಪ್ಯಾರಿಸ್‌ನಲ್ಲಿ ನಡೆದ ‘ಪ್ರೀಮಿಯರ್ ವಿಷನ್’ ಪ್ರದರ್ಶನದ ಸಂದರ್ಭದಲ್ಲಿ ಭಾರತ ಟೆಕ್ಸ್ಟೈಲ್ ಟ್ರೇಡ್ ಫೆಡರೇಷನ್ (ಬಿಟಿಟಿಎಫ್) ಹಾಗೂ ಜಾಗತಿಕ ಫ್ಯಾಷನ್ ಮತ್ತು ಜವಳಿ ವೇದಿಕೆಯಾದ ಪ್ರೀಮಿಯರ್ ವಿಷನ್ ಎಸ್‌ಎ ನಡುವೆ ಬಹುವರ್ಷಗಳ ಕಾರ್ಯತಂತ್ರದ ಒಪ್ಪಂದಕ್ಕೆ ಬುಧವಾರ ಸಹಿ ಹಾಕಲಾಯಿತು. ಬಿಟಿಟಿಎಫ್ ಕೋರ್ ಕಮಿಟಿ ಸದಸ್ಯ ಹಾಗೂ ಅಪ್ಯಾರಲ್ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ಅಧ್ಯಕ್ಷ ಡಾ. ಎ. ಶಕ್ತಿವೇಲ್ ಮತ್ತು ಪ್ರೀಮಿಯರ್ ವಿಷನ್‌ನ ಫ್ಯಾಷನ್ ವಿಭಾಗದ ಸಿಇಒ ಫ್ಲೋರೆನ್ಸ್ ರುಸೋನ್ ಒಪ್ಪಂದಕ್ಕೆ ಸಹಿ ಹಾಕಿದರು.

ಭಾರತೀಯ ಜವಳಿಯನ್ನು ಜಾಗತಿಕ ಐಷಾರಾಮಿ ಮತ್ತು ಉನ್ನತ ಮಟ್ಟದ ಫ್ಯಾಷನ್ ಉದ್ಯಮದೊಂದಿಗೆ ಸಂಪರ್ಕಿಸುವುದು, ಸುಸ್ಥಿರ ಉತ್ಪಾದನೆಗೆ ಉತ್ತೇಜನ ನೀಡುವುದು ಹಾಗೂ ಭಾರತವನ್ನು ಪ್ರಮಾಣಾಧಾರಿತ ರಫ್ತು ಕೇಂದ್ರದಿಂದ ಹೆಚ್ಚಿನ ಮೌಲ್ಯ ಮತ್ತು ವಿನ್ಯಾಸ ಆಧಾರಿತ ರಫ್ತು ಕೇಂದ್ರವಾಗಿ ರೂಪಿಸುವುದು ಒಪ್ಪಂದದ ಪ್ರಮುಖ ಉದ್ದೇಶವಾಗಿದೆ.

ಭಾರತ–ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದದ ಬಳಿಕ ಈ ಸಹಭಾಗಿತ್ವ ಮಹತ್ವ ಪಡೆದಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಭಾರತೀಯ ಜವಳಿ ಮತ್ತು ಉಡುಪುಗಳ ಸ್ಪರ್ಧಾತ್ಮಕತೆಗೆ ಮತ್ತಷ್ಟು ಬಲ ಸಿಗಲಿದೆ. ಉಭಯ ದೇಶಗಳ ವ್ಯಾಪಾರ ಪ್ರದರ್ಶನಗಳಲ್ಲಿ ಪ್ರತಿನಿಧಿಗಳು, ತಜ್ಞರು ಹಾಗೂ ಭಾಷಣಕಾರರ ವಿನಿಮಯ, ಖರೀದಿದಾರ–ಮಾರಾಟಗಾರರ ಸಭೆಗಳು ಮತ್ತು ಮಾರುಕಟ್ಟೆ ಮಾಹಿತಿಯ ಹಂಚಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಜೊತೆಗೆ, ಚಕ್ರಾಕಾರದ ಉತ್ಪಾದನೆ, ಉತ್ಪನ್ನಗಳ ಪತ್ತೆಹಚ್ಚುವಿಕೆ ಹಾಗೂ ಜವಾಬ್ದಾರಿಯುತ ಮೂಲಸಂಗ್ರಹಣೆಗೆ ಆದ್ಯತೆ ನೀಡಲಾಗುತ್ತದೆ. ಭಾರತೀಯ ಕರಕುಶಲ, ಕೈ ಕಸೂತಿ, ಕೈಮಗ್ಗ ಹಾಗೂ ಫ್ರೆಂಚ್ ಜವಳಿ ಪರಂಪರೆಯನ್ನು ಪರಿಚಯಿಸಲು 2027ರ ಜನವರಿಯಲ್ಲಿ ‘ಎ ಲಿವಿಂಗ್ ಥ್ರೆಡ್’ ಪ್ರದರ್ಶನ ಆಯೋಜಿಸಲಾಗುವುದು.

ಕೇಂದ್ರ ಜವಳಿ ಸಚಿವಾಲಯದ ಕಾರ್ಯದರ್ಶಿ ನೀಲಂ ಶಮಿ ರಾವ್, ಕೈಮಗ್ಗ ಅಭಿವೃದ್ಧಿ ಆಯುಕ್ತೆ ಡಾ. ಎಂ. ಬೀನಾ ಸೇರಿದಂತೆ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ಉದ್ಯಮಿಗಳು, ಪ್ರಮುಖ ಫ್ಯಾಷನ್ ವಿನ್ಯಾಸಕರು ಹಾಗೂ ರಫ್ತು ಉತ್ತೇಜನ ಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ 5ಎಫ್ ದೃಷ್ಟಿಕೋನದಡಿ ರೂಪುಗೊಂಡ ‘ಭಾರತ್ ಟೆಕ್ಸ್’ ಜಾಗತಿಕ ಮಟ್ಟದ ಪ್ರಮುಖ ಜವಳಿ ಕಾರ್ಯಕ್ರಮವಾಗಿ ಬೆಳೆದಿದ್ದು, ಪ್ರೀಮಿಯರ್ ವಿಷನ್ ಜತೆಗಿನ ಸಹಭಾಗಿತ್ವವು ಭಾರತೀಯ ಐಷಾರಾಮಿ ಜವಳಿಯನ್ನು ಯುರೋಪ್ ಹಾಗೂ ಜಾಗತಿಕ ಮಾರುಕಟ್ಟೆಗೆ ಪರಿಚಯಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande