

ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಮ್ಮ ಜನಸಭೆ ನಡೆದ ಬಳಿಕ ರಾಮಲೀಲಾ ಮೈದಾನದಲ್ಲಿ ನಡೆಸಲಾದ ‘ಶುದ್ಧೀಕರಣ’ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಈ ಕುರಿತು ರಾಜ್ಯಸಭೆಯ ನಾಯಕ ಜೆ.ಪಿ. ನಡ್ಡಾ ಅವರಿಗೆ ಸೆ. 2ರಂದು ಪತ್ರ ಬರೆದಿರುವ ಖರ್ಗೆ, ಆಗಸ್ಟ್ 13ರಂದು ರಾಜ್ಯಸಭೆಯಲ್ಲಿ ತಾವು ಈ ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ನಡ್ಡಾ ನೀಡಿದ್ದ ಭರವಸೆಯನ್ನು ನೆನಪಿಸಿದ್ದಾರೆ. ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನಡ್ಡಾ ಸದನದಲ್ಲಿ ಭರವಸೆ ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.
ಆದರೆ, ಘಟನೆ ನಡೆದು 24 ದಿನಗಳು ಕಳೆದರೂ ಹಲ್ದ್ವಾನಿಯಲ್ಲಿ ಈ ಘೃಣಿತ ಕೃತ್ಯಕ್ಕೆ ಕಾರಣರಾದ ಸಂಘಟನೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಇದುವರೆಗೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸದಿರುವುದು ಆಶ್ಚರ್ಯ ಮೂಡಿಸಿದೆ ಎಂದು ಖರ್ಗೆ ಹೇಳಿದ್ದಾರೆ.
ತಮ್ಮ ಜನಸಭೆ ನಡೆದ ರಾಮಲೀಲಾ ಮೈದಾನದಲ್ಲಿ ಭಾರತದ ಸಂವಿಧಾನದ ಆಶಯಗಳು ಹಾಗೂ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿ ‘ಶುದ್ಧೀಕರಣ’ ನಡೆಸಲಾಗಿದೆ. ಇಂತಹ ಶುದ್ಧೀಕರಣದ ಪ್ರಕ್ರಿಯೆ ನೇರವಾಗಿ ಅಸ್ಪೃಶ್ಯತೆಗೆ ಸಂಬಂಧಿಸಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಹಾಡ್ ಚಳವಳಿಯ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ದಲಿತರು ನೀರು ಬಳಸಿದ ಸ್ಥಳವನ್ನು ಜಾತೀಯ ಮನೋಭಾವ ಹೊಂದಿದ್ದವರು 108 ಕೊಡಗಳ ಗೋಮೂತ್ರ ಮತ್ತು ಗೋಮಯ ಬಳಸಿ ಶುದ್ಧೀಕರಿಸಿದ್ದರು. ಕೇವಲ ಮಂತ್ರೋಚ್ಚಾರಣೆ ಅಥವಾ ಹೋಮ ನಡೆಸುವುದರಿಂದ ಶುದ್ಧೀಕರಣದ ಜಾತೀಯ ಪ್ರಕ್ರಿಯೆ ಪವಿತ್ರವಾಗುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ.
ಈ ವಿಚಾರ ವೈಯಕ್ತಿಕವಾಗಿ ತಮ್ಮ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೀಮಿತವಾಗಿಲ್ಲ. ಇಂತಹ ಕ್ರೂರ ವಾಸ್ತವವನ್ನು ಪ್ರತಿದಿನ ಎದುರಿಸುತ್ತಿರುವ ಕೋಟ್ಯಂತರ ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯವಾಗಿದೆ. ಇಂತಹ ತಪ್ಪು ಕೃತ್ಯ ಎಸಗುವವರಿಗೆ ಪಾಠ ಕಲಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ನೀಡಿದ ಭರವಸೆ ಹಾಗೂ ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿಗೆ ನಿರ್ದೇಶನ ನೀಡಿ, ಹಲ್ದ್ವಾನಿಯಲ್ಲಿ ತಮ್ಮ ಜನಸಭೆಯ ಬಳಿಕ ರಾಮಲೀಲಾ ಮೈದಾನದಲ್ಲಿ ನಡೆದ ಶುದ್ಧೀಕರಣ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸುವುದನ್ನು ಖಚಿತಪಡಿಸಬೇಕು ಎಂದು ಖರ್ಗೆ ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.