ನಶಾಮುಕ್ತ ಭಾರತ ಅಭಿಯಾನ: ದಕ್ಷಿಣ ಭಾರತದಲ್ಲಿ 30 ಸ್ಥಳಗಳಲ್ಲಿ ಇ.ಡಿ. ಶೋಧ
ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ನಶಾಮುಕ್ತ ಭಾರತ ಅಭಿಯಾನದಡಿ ಜಾರಿ ನಿರ್ದೇಶನಾಲಯ (ಇ.ಡಿ.) ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ಭರ್ಜರಿ ಶೋಧ ಕಾರ್ಯಾಚರಣೆ ನಡೆಸಿದೆ. ಮಾದಕವಸ್ತುಗಳಿಗೆ ಸಂಬಂಧಿಸಿದ ಎಂಟು ಪ್ರಕರಣಗಳ ತನಿಖೆಯ ಭಾಗವಾಗಿ ಕೇರಳ, ಕರ್ನಾಟಕ, ತಮಿಳುನಾಡು ಮತ್ತ
प्रवर्तन निदेशालय (ईडी)


ನವದೆಹಲಿ, 03 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ನಶಾಮುಕ್ತ ಭಾರತ ಅಭಿಯಾನದಡಿ ಜಾರಿ ನಿರ್ದೇಶನಾಲಯ (ಇ.ಡಿ.) ದಕ್ಷಿಣ ಭಾರತದ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ಭರ್ಜರಿ ಶೋಧ ಕಾರ್ಯಾಚರಣೆ ನಡೆಸಿದೆ. ಮಾದಕವಸ್ತುಗಳಿಗೆ ಸಂಬಂಧಿಸಿದ ಎಂಟು ಪ್ರಕರಣಗಳ ತನಿಖೆಯ ಭಾಗವಾಗಿ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದ ಒಟ್ಟು 30 ಸ್ಥಳಗಳಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ), 2002ರ ಸೆಕ್ಷನ್ 17ರ ಅನ್ವಯ ಶೋಧ ನಡೆಸಲಾಗುತ್ತಿದೆ.

ಮಾದಕವಸ್ತುಗಳ ಕಳ್ಳಸಾಗಣೆ ಹಾಗೂ ಅದರಿಂದ ಬಂದಿರುವ ಅಕ್ರಮ ಹಣದ ವಹಿವಾಟಿನ ಕುರಿತು ತನಿಖೆ ನಡೆಯುತ್ತಿದ್ದು, ಶೋಧದ ವೇಳೆ ಅಕ್ರಮ ಹಣ, ಆಸ್ತಿಗಳು, ಬ್ಯಾಂಕ್ ಖಾತೆಗಳು, ದಾಖಲೆಗಳು ಹಾಗೂ ಡಿಜಿಟಲ್ ಸಾಕ್ಷ್ಯಗಳನ್ನು ಪತ್ತೆಹಚ್ಚುವುದು ಇ.ಡಿ.ಯ ಉದ್ದೇಶವಾಗಿದೆ.

ತಮಿಳುನಾಡಿನ ನಿಸಾರದೀನ್, ಕಾಸಿಲಿಂಗಂ ಮತ್ತಿತರರ ಪ್ರಕರಣದಲ್ಲಿ ಮೆಥಾಂಫೆಟಮೈನ್, ನಗದು ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಚೆನ್ನೈ ಹಾಗೂ ರಾಮನಾಥಪುರಂ ಜಿಲ್ಲೆಗಳ ಎರಡು ಸ್ಥಳಗಳಲ್ಲಿ ಶೋಧ ನಡೆದಿದೆ. ಮತ್ತೊಂದು ಪ್ರಕರಣದಲ್ಲಿ 5.970 ಕೆಜಿ ಮೆಥಾಂಫೆಟಮೈನ್, ₹39.38 ಲಕ್ಷ ನಗದು, ಚಿನ್ನ ಮತ್ತು ಬೆಳ್ಳಿ ವಶಪಡಿಸಿಕೊಳ್ಳಲಾಗಿದ್ದು, ರಾಮನಾಥಪುರಂ ಹಾಗೂ ತಿರುನೆಲ್ವೇಲಿಯಲ್ಲಿ ಶೋಧ ಮುಂದುವರಿದಿದೆ.

ಉದಯ ಕುಮಾರ್ ಪ್ರಕರಣದಲ್ಲಿ ಒಟ್ಟು 56 ಕೆಜಿಗೂ ಅಧಿಕ ಮೆಥಾಂಫೆಟಮೈನ್ ಪತ್ತೆಯಾಗಿದ್ದು, ಆರು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಎಂ. ಅಲೆಕ್ಸ್ ಪ್ರಕರಣದಲ್ಲಿ 950 ಗ್ರಾಂ ಮೆಥಾಂಫೆಟಮೈನ್ ಜತೆಗೆ ನಗದು, ವಾಹನ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಾದಕವಸ್ತುಗಳಿಂದ ಬಂದ ಆದಾಯವನ್ನು ಆಸ್ತಿ ಮತ್ತು ಬ್ಯಾಂಕ್ ವಹಿವಾಟುಗಳಲ್ಲಿ ಹೂಡಿಕೆ ಮಾಡಿರುವ ಆರೋಪದ ಕುರಿತು ತನಿಖೆ ನಡೆಯುತ್ತಿದೆ.

ಕರ್ನಾಟಕದ ಪ್ರಕರಣದಲ್ಲೂ ಶೋಧ: ಮರಣ್ತುಂಜಯ ಅಲಿಯಾಸ್ ಜಯಣ್ಣ ಅಲಿಯಾಸ್ ಎಂ.ಜೆ. ಪ್ರಕರಣದಲ್ಲಿ ಒಂದು ಕೆಜಿ 5 ಗ್ರಾಂ ಹ್ಯಾಶಿಶ್ ಆಯಿಲ್ ಹಾಗೂ 1.2 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇದರ ಅಕ್ರಮ ಮಾರುಕಟ್ಟೆ ಮೌಲ್ಯ ಸುಮಾರು ₹80 ಲಕ್ಷ ಎಂದು ಅಂದಾಜಿಸಲಾಗಿದೆ. ಆರೋಪಿ ಮತ್ತು ಆತನ ಪತ್ನಿಯ ಆರು ಬ್ಯಾಂಕ್ ಖಾತೆಗಳಲ್ಲಿ ₹5.15 ಕೋಟಿಗೂ ಅಧಿಕ ಠೇವಣಿ, ₹2.39 ಕೋಟಿಗೂ ಅಧಿಕ ನಗದು ಠೇವಣಿ ಹಾಗೂ ₹57.17 ಲಕ್ಷದಷ್ಟು ಅನುಮಾನಾಸ್ಪದ ಯುಪಿಐ ವಹಿವಾಟು ಪತ್ತೆಯಾಗಿದೆ. ಕೋಲಾರ ಜಿಲ್ಲೆ, ಮಾಲೂರು ಮತ್ತು ಹೊಸಕೋಟೆಯ ಮೂರು ಸ್ಥಳಗಳಲ್ಲಿ ಇ.ಡಿ. ಶೋಧ ನಡೆಸುತ್ತಿದೆ.

ತೆಲಂಗಾಣದ ಪ್ರಕರಣದಲ್ಲಿ ಸುಮಾರು 53.5 ಕೆಜಿ ಗಾಂಜಾ ಹಾಗೂ ₹67.35 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದ್ದು, ಮೂರು ಅಕ್ರಮ ಆಸ್ತಿಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಸೆರುಲಿಂಗಂಪಲ್ಲಿ ಮತ್ತು ನಾನಕ್‌ರಾಮ್‌ಗುಡಾದ ಮೂರು ಸ್ಥಳಗಳಲ್ಲಿ ಶೋಧ ಮುಂದುವರಿದಿದೆ.

ಕೇರಳದ ಎರಡು ಪ್ರಕರಣಗಳಲ್ಲಿ ಬ್ಯಾಂಕಾಕ್‌ನಿಂದ ಕೊಚ್ಚಿಗೆ ಹೈಬ್ರಿಡ್ ಗಾಂಜಾ ಸಾಗಾಟ ಮತ್ತು ಮಸ್ಕಟ್‌ನಿಂದ ಎಂಡಿಎಂಎ ಸಾಗಾಟಕ್ಕೆ ಸಂಬಂಧಿಸಿದ ಜಾಲದ ಕುರಿತು ತನಿಖೆ ನಡೆಯುತ್ತಿದೆ. ಕೊಚ್ಚಿ ಸುತ್ತಮುತ್ತ ನಾಲ್ಕು ಹಾಗೂ ಕೋಝಿಕ್ಕೋಡ್‌ನಲ್ಲಿ ನಾಲ್ಕು ಸ್ಥಳಗಳಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಶೋಧ ನಡೆಸಲಾಗುತ್ತಿದೆ.

ಮಾದಕವಸ್ತು ಕಳ್ಳಸಾಗಣೆಯಿಂದ ಬಂದ ಅಕ್ರಮ ಹಣದ ಮೂಲ, ವಹಿವಾಟು ಹಾಗೂ ಆಸ್ತಿಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಇ.ಡಿ. ತಿಳಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande