ಅಕ್ಟೋಬರ್ 2ರಂದು ‘ಬೇಲ್’ ಚಿತ್ರ ತೆರೆಗೆ; ಅದ್ಧೂರಿಯಾಗಿ ಬಿಡುಗಡೆಯಾದ ‘ಶಿವಣ್ಣ ಆಂಥೆಮ್’ ಹಾಡು
ಬೆಂಗಳೂರು, 29 ಸೆಪ್ಟೆಂಬರ್ (ಹಿ.ಸ.): ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಚಿತ್ರದ ‘ಶಿವಣ್ಣ ಆಂಥೆಮ್’ ಲಿರಿಕಲ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದ್ದು, ಅಕ್ಟೋಬ
shivanna-anthem-from-shivarajkumar-starrer-bail-released-movie-to-hit-screens-on-october-2


ಬೆಂಗಳೂರು, 29 ಸೆಪ್ಟೆಂಬರ್ (ಹಿ.ಸ.):

ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಬೇಲ್’ ಚಿತ್ರದ ‘ಶಿವಣ್ಣ ಆಂಥೆಮ್’ ಲಿರಿಕಲ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ.

ಕೆವಿಎನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟ್ ಕೆ. ನಾರಾಯಣ ನಿರ್ಮಿಸಿರುವ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದ್ದು, ಅಕ್ಟೋಬರ್ 2ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ಶಿವರಾಜ್ ಕುಮಾರ್, ತಾವು ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದ ಕಠಿಣ ದಿನಗಳನ್ನು ನೆನಪಿಸಿಕೊಂಡರು. “ಕೊನೆಯ ಹಂತದ ಕೀಮೋಥೆರಪಿ ಪಡೆಯುತ್ತಿದ್ದ ಸಂದರ್ಭದಲ್ಲಿ ನಿರ್ದೇಶಕ ಪವನ್ ಒಡೆಯರ್ ಹಾಗೂ ಅವರ ಪತ್ನಿ ಅಪೇಕ್ಷಾ ಬಂದು ಕಥೆ ಹೇಳಿದ್ದರು.

ಆ ಕಷ್ಟದ ಸಂದರ್ಭದಲ್ಲೂ ಅವರು ಪ್ರೀತಿಯಿಂದ ಅಡ್ವಾನ್ಸ್ ನೀಡಿ ಸಿನಿಮಾ ಒಪ್ಪಿಸಿದರು. ಅವರ ನಂಬಿಕೆ ಕಂಡು ನಾನು ಹಾಗೂ ಪತ್ನಿ ಗೀತಾ ಭಾವುಕರಾಗಿ ಕಣ್ಣೀರಿಟ್ಟಿದ್ದೆವು” ಎಂದು ಹೇಳಿದರು.

‘ಬೇಲ್’ ಚಿತ್ರವು ಕೇವಲ ಒಬ್ಬ ನಟನನ್ನು ಕೇಂದ್ರವಾಗಿಟ್ಟುಕೊಂಡ ಸಿನಿಮಾ ಅಲ್ಲ ಎಂದು ಶಿವರಾಜ್ ಕುಮಾರ್ ತಿಳಿಸಿದರು. “ಎಲ್ಲ ಪಾತ್ರಗಳು ಚಿತ್ರಕಥೆಗೆ ಜೀವ ತುಂಬಿವೆ. ದೀಕ್ಷಿತ್ ಅತ್ಯುತ್ತಮ ಡ್ಯಾನ್ಸರ್ ಹಾಗೂ ಹ್ಯಾಂಡ್ಸಮ್ ನಟ. ಸಂಜನಾ ಉತ್ತಮ ಅಭಿನಯ ನೀಡಿದ್ದಾರೆ. ‘ದುನಿಯಾ’ ಚಿತ್ರದಿಂದಲೂ ಲೂಸ್ ಮಾದ ಯೋಗಿ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರೊಂದಿಗೆ ತೆರೆ ಹಂಚಿಕೊಂಡಿರುವುದು ಖುಷಿ ನೀಡಿದೆ” ಎಂದರು.

“ವಯಸ್ಸಾಗುವುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. 64 ವರ್ಷವಾದರೂ ಕೆಲಸ ಮಾಡುವ ಸಕಾರಾತ್ಮಕ ಮನೋಭಾವ ನಮ್ಮಲ್ಲಿರಬೇಕು. ‘ಬೇಲ್’ ಉತ್ತಮ ಸಿನಿಮಾವಾಗಲಿದೆ ಎಂಬ ವಿಶ್ವಾಸವಿದೆ” ಎಂದು ಶಿವಣ್ಣ ಹೇಳಿದರು.

ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, ಶಿವರಾಜ್ ಕುಮಾರ್ ಅವರ ಅನಾರೋಗ್ಯದ ಸುದ್ದಿ ಕೇಳಿದಾಗ ತಾವು ದಿಗ್ಭ್ರಮೆಗೊಂಡಿದ್ದಾಗಿ ಹೇಳಿದರು. “ಚಿತ್ರರಂಗದ ಕಾರ್ಮಿಕರ ಬದುಕಿಗೆ ನಿರಂತರವಾಗಿ ಆಸರೆಯಾಗಿರುವ ಶಿವಣ್ಣ ಅವರಿಗೆ ಏನೂ ಆಗಲ್ಲ ಎಂಬ ನಂಬಿಕೆ ಇತ್ತು.

ಚಿಕಿತ್ಸೆ ಮುಗಿಸಿ ಗುಣಮುಖರಾಗಿ ಬಂದ ಕೂಡಲೇ ಅವರು ನಮಗೆ ಕರೆ ಮಾಡಿ ಚಿತ್ರೀಕರಣಕ್ಕೆ ಡೇಟ್ಸ್ ನೀಡಿದರು. ಇದಕ್ಕೆ ಬೆನ್ನೆಲುಬಾಗಿ ನಿಂತ ಗೀತಕ್ಕ ಹಾಗೂ ನಿವೇದಿತಾ ಶಿವರಾಜಕುಮಾರ್ ಅವರಿಗೆ ಧನ್ಯವಾದಗಳು” ಎಂದರು.

ತಮ್ಮ ತಾಯಿಯ ನಿಧನವನ್ನು ನೆನಪಿಸಿಕೊಂಡ ಪವನ್ ಒಡೆಯರ್ ಭಾವುಕರಾದರು. “ಎರಡನೇ ಶೆಡ್ಯೂಲ್ ಚಿತ್ರೀಕರಣದ ವೇಳೆ ನನ್ನ ತಾಯಿಗೂ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವರು ಶಿವಣ್ಣ ಅವರ ಅಪ್ಪಟ ಅಭಿಮಾನಿಯಾಗಿದ್ದರು.

ತಮಗೆ ನೋವಿದ್ದರೂ, ‘ಚಿತ್ರ ಚೆನ್ನಾಗಿ ಮೂಡಿಬರಬೇಕು, ಸದಾ ಕೆಲಸ ಮಾಡು’ ಎಂದು ಹುರಿದುಂಬಿಸುತ್ತಿದ್ದರು. ತಾಯಿ ತೀರಿಕೊಂಡ ಸೂತಕದ ದಿನಗಳಲ್ಲೂ ಈ ಸಿನಿಮಾಗಾಗಿ ಶ್ರಮಿಸಿದ್ದೇನೆ” ಎಂದು ಹೇಳಿದರು.

ಅಜನೀಶ್ ಲೋಕನಾಥ್ ಸಂಗೀತ, ವೈದಿ ಎಸ್. ಛಾಯಾಗ್ರಹಣ ಹಾಗೂ ಮುರಳಿ ಮಾಸ್ಟರ್ ನೃತ್ಯ ಸಂಯೋಜನೆ ‘ಬೇಲ್’ ಚಿತ್ರಕ್ಕಿದೆ. ಚಿತ್ರವು ಅಕ್ಟೋಬರ್ 2ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande