
ಮೈಸೂರು, 29 ಸೆಪ್ಟೆಂಬರ್ (ಹಿ.ಸ.):
ಅಣ್ಣ ಶಾಲೆಯಿಂದ ಬರುತ್ತಾನೆ ಎಂದು ತಾಯಿಯೊಂದಿಗೆ ಖುಷಿಯಿಂದ ಆತನನ್ನು ಕರೆತರಲು ತೆರಳಿದ್ದ ಒಂದೂವರೆ ವರ್ಷದ ಮಗು ಶಾಲಾ ಬಸ್ ಹರಿದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ಮಗುವನ್ನು ನಂಜಾಪುರ ಗ್ರಾಮದ ಬಸವರಾಜು ಹಾಗೂ ಕಾಂಚನ ದಂಪತಿಯ ಪುತ್ರಿ ಲತೀಕ್ಷಾ ಎಂದು ಗುರುತಿಸಲಾಗಿದೆ.
ಬಸವರಾಜು ಅವರ ಮೊದಲ ಪುತ್ರ ತಿಲಕ್ ಇದೇ ಶಾಲಾ ಬಸ್ನಲ್ಲಿ ಮನೆಗೆ ಬರುತ್ತಿದ್ದ. ತಿಲಕ್ನನ್ನು ಬಸ್ನಿಂದ ಕೆಳಗಿಳಿಸಿಕೊಂಡು ಆತನ ತಾಯಿ ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಲತೀಕ್ಷಾ ಕೂಡ ಅಲ್ಲಿಗೆ ಬಂದಿದ್ದಳು ಎನ್ನಲಾಗಿದೆ.
ಚಾಲಕ ಬಸ್ ಅನ್ನು ರಿವರ್ಸ್ ತೆಗೆಯುತ್ತಿದ್ದ ಸಂದರ್ಭದಲ್ಲಿ ಪುಟ್ಟ ಮಗುವಿನ ಮೇಲೆ ಬಸ್ ಹರಿದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲತೀಕ್ಷಾಳನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಖಾಸಗಿ ವಿದ್ಯಾಸಂಸ್ಥೆಗೆ ಸೇರಿದ ಶಾಲಾ ಬಸ್ ಇದಾಗಿದ್ದು, ಚಾಲಕನ ನಿರ್ಲಕ್ಷ್ಯದಿಂದಲೇ ಅವಘಡ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆ ಬಳಿಕ ಪೊಲೀಸರು ಶಾಲಾ ಬಸ್ ಚಾಲಕ ಸಿದ್ದರಾಜು ಎಂಬಾತನನ್ನು ಬಂಧಿಸಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪುಟ್ಟ ಮಗುವನ್ನು ಕಳೆದುಕೊಂಡ ಬಸವರಾಜು ಹಾಗೂ ಕಾಂಚನ ದಂಪತಿಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಅಣ್ಣನನ್ನು ಕರೆತರಲು ತಾಯಿಯೊಂದಿಗೆ ತೆರಳಿದ್ದ ಮಗು ಮನೆಗೆ ಮರಳದೆ ಶವವಾಗಿ ಹಿಂದಿರುಗಿರುವುದು ಗ್ರಾಮಸ್ಥರಲ್ಲೂ ತೀವ್ರ ದುಃಖಕ್ಕೆ ಕಾರಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R