ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀಲಂಕಾ ವಿದ್ಯಾರ್ಥಿನಿಗೆ ಪ್ರಥಮ ಬಹುಮಾನ
ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.): ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್‌ ವತಿಯಿಂದ ಆಯೋಜಿಸಲಾಗಿದ್ದ 14 ದಿನಗಳ ‘ಹಿಂದಿ ಪಖ್ವಾಡಾ’ ಸಮಾರೋಪ ಸಮಾರಂಭದಲ್ಲಿ ನಡೆದ ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀಲಂಕಾದ ವಿದ್ಯಾರ್ಥಿನಿ ಜನುದಿ ವೀರರವೆಗೆ ಪ್ರಥಮ ಬಹುಮಾನ ಲಭಿಸಿದೆ. ಉಜ್ಬೇಕಿಸ್ತಾನದ ಸಬ್ರಿನಾ ದ್ವ
आईसीसीआर में हिंदी पखवाड़े समापन समारोह में लोग मौजूद।


ನವದೆಹಲಿ, 29 ಸೆಪ್ಟೆಂಬರ್ (ಹಿ.ಸ.):

ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್‌ ವತಿಯಿಂದ ಆಯೋಜಿಸಲಾಗಿದ್ದ 14 ದಿನಗಳ ‘ಹಿಂದಿ ಪಖ್ವಾಡಾ’ ಸಮಾರೋಪ ಸಮಾರಂಭದಲ್ಲಿ ನಡೆದ ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀಲಂಕಾದ ವಿದ್ಯಾರ್ಥಿನಿ ಜನುದಿ ವೀರರವೆಗೆ ಪ್ರಥಮ ಬಹುಮಾನ ಲಭಿಸಿದೆ. ಉಜ್ಬೇಕಿಸ್ತಾನದ ಸಬ್ರಿನಾ ದ್ವಿತೀಯ ಹಾಗೂ ಉಕ್ರೇನ್‌ನ ವೇಲೆರಿಯಾ ತೃತೀಯ ಬಹುಮಾನ ಪಡೆದರು.

ಭಾರತ ನನ್ನ ಹೃದಯದಲ್ಲಿ ನೆಲೆಸಿದೆ’ ಎಂಬ ವಿಷಯದಡಿ ನಡೆದ ಕಾರ್ಯಕ್ರಮದಲ್ಲಿ 30 ದೇಶಗಳ ವಿದೇಶಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್‌ನ ವಿದ್ಯಾರ್ಥಿವೇತನದಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾರತದಲ್ಲಿನ ತಮ್ಮ ಅನುಭವ ಹಾಗೂ ದೇಶದೊಂದಿಗೆ ಹೊಂದಿರುವ ಬಾಂಧವ್ಯವನ್ನು ಹಂಚಿಕೊಂಡರು.

ಹಿಂದಿ ಪ್ರಬಂಧ ಸ್ಪರ್ಧೆಯಲ್ಲಿ ಉಜ್ಬೇಕಿಸ್ತಾನ, ಬಾಂಗ್ಲಾದೇಶ ಹಾಗೂ ನೇಪಾಳದ ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ಉಕ್ರೇನ್, ಉಜ್ಬೇಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮತ್ತು ತಜಿಕಿಸ್ತಾನದ ಇತರ ಅತ್ಯುತ್ತಮ ಪ್ರತಿಭೆಗಳಿಗೆ ಪ್ರಶಂಸಾಪತ್ರ ವಿತರಿಸಲಾಯಿತು. ಆನ್‌ಲೈನ್ ಹಾಗೂ ಅಂತಾರಾಷ್ಟ್ರೀಯ ಬರವಣಿಗೆ ಸ್ಪರ್ಧೆಯಲ್ಲಿ ಇರಾನ್, ಕಾಂಬೋಡಿಯಾ, ಥಾಯ್ಲೆಂಡ್, ಬಾಂಗ್ಲಾದೇಶ ಮತ್ತು ನೇಪಾಳದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ವಾಸ್ತವಿಕ ಮಾಧ್ಯಮದ ಮೂಲಕ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಭಾರತದ ಭಾಷಾ ವೈವಿಧ್ಯತೆ ದುರ್ಬಲತೆಯಲ್ಲ, ಬದಲಾಗಿ ದೇಶದ ಪ್ರಮುಖ ಶಕ್ತಿ ಮತ್ತು ಸಾಂಸ್ಕೃತಿಕ ಸಂಪತ್ತು ಎಂದು ಹೇಳಿದರು. ಯೋಗ, ಆಯುರ್ವೇದ ಹಾಗೂ ಭಾರತೀಯ ಜ್ಞಾನ ಪರಂಪರೆಯ ಜಾಗತಿಕ ಪ್ರಸಾರವನ್ನು ಸ್ವಂತ ಭಾಷೆಗಳ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ಮಾಡಬಹುದು ಎಂದು ಅವರು ಹೇಳಿದರು.

ಭಾರತೀಯ ಸಾಂಸ್ಕೃತಿಕ ಸಂಬಂಧ ಪರಿಷತ್‌ನ ಮಹಾನಿರ್ದೇಶಕಿ ನಂದಿನಿ ಸಿಂಗ್ಲಾ ಮಾತನಾಡಿ, ಹಿಂದಿ ಕೇವಲ ಸಂವಹನದ ಭಾಷೆಯಲ್ಲ. ಅದು ಭಾರತದ ಸಂಸ್ಕೃತಿ, ಭಾವನೆ ಮತ್ತು ವೈವಿಧ್ಯತೆಯನ್ನು ವಿಶ್ವದೊಂದಿಗೆ ಸಂಪರ್ಕಿಸುವ ಜಾಗತಿಕ ಸೇತುವೆಯಾಗಿದೆ ಎಂದು ಹೇಳಿದರು. ವಿದೇಶಿ ವಿದ್ಯಾರ್ಥಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆಗೆ ಜಾಗತಿಕ ಮಟ್ಟದಲ್ಲಿ ಬಲ ನೀಡುತ್ತದೆ ಎಂದರು.

ಪರಿಷತ್‌ನ ಹೆಚ್ಚುವರಿ ಮಹಾನಿರ್ದೇಶಕ ಡಾ. ರಾಜೇಶ್ ರಂಜನ್ ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ ಕಡತಗಳಿಂದ ಹೊರಬಂದು ಹೃದಯಗಳನ್ನು ಜೋಡಿಸುವುದಾಗಿದೆ ಎಂದು ಹೇಳಿದರು. ಹಿಂದಿ ಈಗ ಗಂಗಾ ತೀರದ ಭಾಷೆಯಾಗಿ ಮಾತ್ರ ಉಳಿದಿಲ್ಲ. ವೋಲ್ಗಾ, ರೈನ್ ಮತ್ತು ಅಮುದರಿಯಾ ನದಿಗಳ ತೀರಗಳವರೆಗೂ ಹರಡುತ್ತಿದೆ ಎಂದು ಅವರು ಹೇಳಿದರು. ವಿದೇಶಿ ವಿದ್ಯಾರ್ಥಿಗಳ ಮೂಲಕ ಹಿಂದಿಯ ಅಂತಾರಾಷ್ಟ್ರೀಯ ವಿಸ್ತರಣೆ ಭಾರತ ಮತ್ತು ವಿಶ್ವದ ಸಾಂಸ್ಕೃತಿಕ ಸಂಬಂಧಗಳಿಗೆ ಹೊಸ ಆಯಾಮ ನೀಡಲಿದೆ ಎಂದರು.

ಸಮಾರೋಪ ಸಮಾರಂಭದಲ್ಲಿ ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ ಮತ್ತು ವೈದ್ಯಕೀಯ ಕ್ಷೇತ್ರದ ಪದ್ಮಶ್ರೀ ಪುರಸ್ಕೃತರು ಸೇರಿದಂತೆ 10 ಸಾಧಕರನ್ನು ಅವರ ಕೊಡುಗೆಗಾಗಿ ಸನ್ಮಾನಿಸಲಾಯಿತು. ಪದ್ಮಶ್ರೀ ಪ್ರೊ. ಅಶೋಕ್ ಚಕ್ರಧರ್, ಪದ್ಮಶ್ರೀ ಡಾ. ರಂಜನಾ ಗೌಹರ್, ಪದ್ಮಶ್ರೀ ಡಾ. ಜತಿನ್ ದಾಸ್, ಪದ್ಮಶ್ರೀ ಡಾ. ಮೊಹ್ಸಿನ್ ವಲಿ, ಪದ್ಮಶ್ರೀ ವಿ.ಎಸ್. ಮೆಹ್ತಾ, ಪದ್ಮಶ್ರೀ ಡಾ. ದಿನೇಶ್ ಭಾರ್ಗವ, ಪದ್ಮಶ್ರೀ ಡಾ. ಪುರುಷೋತ್ತಮ ದಧೀಚ್, ಪದ್ಮಶ್ರೀ ಭೇರು ಸಿಂಗ್ ಚೌಹಾಣ್, ಪ್ರೊ. ವಿಮಲೇಶ್ ಕಾಂತಿ ವರ್ಮಾ ಹಾಗೂ ಅನಿತಾ ವರ್ಮಾ ಅವರನ್ನು ಗೌರವಿಸಲಾಯಿತು. ಈ ಗಣ್ಯರು ವಿದೇಶಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸೆ. 14ರಿಂದ 28ರವರೆಗೆ ನಡೆದ ಈ ಬಾರಿ ಹಿಂದಿ ಪಖ್ವಾಡಾದಲ್ಲಿ ಮೊದಲ ಬಾರಿಗೆ ವಿದೇಶಿ ವಿದ್ಯಾರ್ಥಿಗಳನ್ನು ವಿಶೇಷವಾಗಿ ಒಳಗೊಳ್ಳಲಾಯಿತು. ದೆಹಲಿ ವಿಶ್ವವಿದ್ಯಾಲಯ, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ಗುರು ಗೋಬಿಂದ್ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯ ಸೇರಿದಂತೆ ವಿವಿಧ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಉಜ್ಬೇಕಿಸ್ತಾನ, ಉಕ್ರೇನ್, ರಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಈಜಿಪ್ಟ್, ಕೋಸ್ಟರಿಕಾ, ಕಜಕಿಸ್ತಾನ, ಲೆಸೊಥೊ, ತಜಿಕಿಸ್ತಾನ, ಭೂತಾನ್, ಮ್ಯಾನ್ಮಾರ್ ಹಾಗೂ ಚೀನಾದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದೆಹಲಿ ವಿಶ್ವವಿದ್ಯಾಲಯದಲ್ಲಿ ಹಿಂದಿಯಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಉಜ್ಬೇಕಿಸ್ತಾನ ಮತ್ತು ಉಕ್ರೇನ್‌ನ ವಿದ್ಯಾರ್ಥಿನಿಯರಾದ ಜಿಲೋಲಾ, ಸಬ್ರಿನಾ, ವೇಲೆರಿಯಾ ಹಾಗೂ ಡಯಾನಾ ತಮ್ಮ ಅಭಿಪ್ರಾಯ ಹಂಚಿಕೊಂಡರು. ಜರ್ಮನಿ ಮತ್ತು ಜಪಾನ್‌ನ ಅಂತಾರಾಷ್ಟ್ರೀಯ ಕೇಂದ್ರಗಳಿಗೆ ಸಂಬಂಧಿಸಿದ ಹಿಂದಿ ಪ್ರೇಮಿಗಳ ವಿಶೇಷ ವಿಡಿಯೊ ಸಂದೇಶಗಳನ್ನೂ ಪ್ರದರ್ಶಿಸಲಾಯಿತು.

‘ನನ್ನಲ್ಲಿ ಭಾರತ ನೆಲೆಸಿದೆ’ ಹಾಗೂ ಹಿಂದಿ ಪ್ರಬಂಧ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಮಾಣಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮವು ಭಾರತದ ಸಾಂಸ್ಕೃತಿಕ ರಾಜತಾಂತ್ರಿಕತೆ ಹಾಗೂ ಸಾಂಸ್ಕೃತಿಕ ಪ್ರಭಾವವನ್ನು ವಿಶ್ವದ ವಿವಿಧ ದೇಶಗಳ ವಿದ್ಯಾರ್ಥಿಗಳೊಂದಿಗೆ ಬೆಸೆಯುವ ವೇದಿಕೆಯಾಗಿ ಮೂಡಿಬಂತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande