
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):
ಸಸ್ಯಕಾಶಿ ಲಾಲ್ಬಾಗ್ ಉದ್ಯಾನವನದಲ್ಲಿ ಸರ್ಕಾರದ ಅನುಮತಿ ಪಡೆಯದೆ ಟೆನ್ನಿಸ್ ಕೋರ್ಟ್ ಮರು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ. ತೋಟಗಾರಿಕೆ ನಿರ್ದೇಶಕರಿಗೆ ಮೀಸಲಾಗಿರುವ ಸರ್ಕಾರಿ ನಿವಾಸದ ಪಕ್ಕದಲ್ಲಿಯೇ ಕಾಮಗಾರಿ ನಡೆಯುತ್ತಿದ್ದು, ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಪ್ರಶ್ನೆಗಳು ಎದ್ದಿವೆ.
ಟೆನ್ನಿಸ್ ಕೋರ್ಟ್ ನಿರ್ಮಾಣಕ್ಕಾಗಿ ಸುಮಾರು 100x100 ಅಡಿ ಪ್ರದೇಶದಲ್ಲಿದ್ದ ಗಿಡಗಳನ್ನು ತೆರವುಗೊಳಿಸಿ, ಜಾಗವನ್ನು ಸಮತಟ್ಟು ಮಾಡಲಾಗಿದೆ. ಕಾಮಗಾರಿಗೆ ತೋಟಗಾರಿಕಾ ಇಲಾಖೆಯಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, ಖಾಸಗಿ ಗುತ್ತಿಗೆದಾರರಿಗೆ ಕಾಮಗಾರಿ ವಹಿಸಲಾಗಿದೆ ಎನ್ನಲಾಗಿದೆ. ಕೋರ್ಟ್ ಸುತ್ತ ಹಸಿರು ಬಲೆ ಅಳವಡಿಸಲಾಗಿದ್ದು, ಲಾನ್ ಕೂಡ ನಿರ್ಮಿಸಲಾಗಿದೆ.
ಲಾಲ್ಬಾಗ್ ಉತ್ತರ ದ್ವಾರದಿಂದ ಪ್ರವೇಶಿಸಿದ ಬಳಿಕ ಎಡಭಾಗದಲ್ಲಿರುವ ತೋಟಗಾರಿಕೆ ನಿರ್ದೇಶನಾಲಯದ ಸಮೀಪದಲ್ಲೇ ಈ ಟೆನ್ನಿಸ್ ಕೋರ್ಟ್ ನಿರ್ಮಾಣವಾಗುತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದು, ಈಗಾಗಲೇ ಹಲವು ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಲಾಲ್ಬಾಗ್ನಲ್ಲಿ ಯಾವುದೇ ನಿರ್ಮಾಣ ಅಥವಾ ಕಾಮಗಾರಿ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಯ ಅನುಮತಿ ಸೇರಿದಂತೆ ಅಗತ್ಯ ಕಾನೂನುಬದ್ಧ ಅನುಮತಿಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಆದರೆ, ಈ ಟೆನ್ನಿಸ್ ಕೋರ್ಟ್ ಮರು ನಿರ್ಮಾಣಕ್ಕೆ ಅಧಿಕೃತ ಅನುಮತಿ ಪಡೆದಿಲ್ಲ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಅನುಮತಿ ನೀಡಿಲ್ಲ: ಗಿರೀಶ್“ಲಾಲ್ಬಾಗ್ನಲ್ಲಿ ಟೆನ್ನಿಸ್ ಕೋರ್ಟ್ ಮರು ನಿರ್ಮಾಣಕ್ಕೆ ಅಥವಾ ಹೊಸದಾಗಿ ನಿರ್ಮಾಣಕ್ಕೆ ಅನುಮತಿ ನೀಡಿಲ್ಲ. ಈ ರೀತಿಯ ನಿರ್ಮಾಣ ಚಟುವಟಿಕೆ ನಡೆದಿದ್ದರೆ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್. ಗಿರೀಶ್ ತಿಳಿಸಿದ್ದಾರೆ.
ನಿರ್ದೇಶಕರ ಸೂಚನೆಯಂತೆ ಕಾಮಗಾರಿ: ಬಾಲಕೃಷ್ಣ“1960ರಲ್ಲಿಯೇ ಲಾಲ್ಬಾಗ್ನಲ್ಲಿ ಟೆನ್ನಿಸ್ ಕೋರ್ಟ್ ಇತ್ತು. ಅದನ್ನು ಮರು ನಿರ್ಮಿಸುವಂತೆ ನಿರ್ದೇಶಕ ಇಬ್ರಾಹಿಂ ಸೂಚಿಸಿದ್ದರು. ಅದರಂತೆ ಹೊಸ ಹಸಿರು ಬಲೆ ಅಳವಡಿಸಲಾಗಿದೆ.
ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಕಾಮಗಾರಿಗೆ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದುಕೊಂಡಿಲ್ಲ,” ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಾಲಕೃಷ್ಣ ಹೇಳಿದ್ದಾರೆ.
‘ಬೇಲಿಯೇ ಎದ್ದು ಹೊಲ ಮೇಯ್ದಂತೆ’“ಇಂದು ಟೆನ್ನಿಸ್ ಕೋರ್ಟ್ ನಿರ್ಮಿಸುತ್ತೇವೆ, ನಾಳೆ ಸ್ವಿಮ್ಮಿಂಗ್ ಪೂಲ್ ಬೇಕು ಎಂದು ಹೇಳುವಂತಾದರೆ ಅಧಿಕಾರಿಗಳಿಗೆ ಪ್ರತ್ಯೇಕ ಕಾನೂನು ಎಂಬಂತಾಗುತ್ತದೆ.
ಲಾಲ್ಬಾಗ್ ಪರಿಸರ ಅತ್ಯಂತ ಸೂಕ್ಷ್ಮವಾಗಿದ್ದು, ಈ ರೀತಿಯ ನಿರ್ಮಾಣ ಚಟುವಟಿಕೆಗಳಿಂದ ಉದ್ಯಾನದ ಸ್ವರೂಪಕ್ಕೆ ಧಕ್ಕೆಯಾಗಬಹುದು,” ಎಂದು ಲಾಲ್ಬಾಗ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಸರ್ಕಾರವೇ ಲಾಲ್ಬಾಗ್ನಲ್ಲಿ ಯಾವುದೇ ಆಟಗಳನ್ನು ಆಡದಂತೆ ನಿರ್ಬಂಧಿಸಿರುವ ಸಂದರ್ಭದಲ್ಲಿ ಅಧಿಕಾರಿಗಳೇ ಇಂತಹ ಕಾಮಗಾರಿ ನಡೆಸುವುದು ಸರಿಯಲ್ಲ. ತಮ್ಮದೇ ಆದೇಶಗಳನ್ನು ಅಧಿಕಾರಿಗಳು ಉಲ್ಲಂಘಿಸಿದರೆ ಹೇಗೆ? ಸರ್ಕಾರ ಈ ಬಗ್ಗೆ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R