
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):
ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುವಾಹಟಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್ವೇ ಸಂಪರ್ಕದಲ್ಲಿ ಎಡವಟ್ಟಿಗೆ ಒಳಗಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಇಂಡಿಗೋದ 6E 6542 ವಿಮಾನವು ಮಧ್ಯಾಹ್ನ 1.34ರ ಸುಮಾರಿಗೆ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಜೋರಾದ ಗಾಳಿಯ ನಡುವೆ ವಿಮಾನದ ರೆಕ್ಕೆ ರನ್ವೇಗೆ ಬಡಿದಿದೆ ಎಂದು ತಿಳಿದುಬಂದಿದೆ.
ಪೈಲಟ್ನ ಎಚ್ಚರಿಕೆಯ ಕ್ರಮದಿಂದ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದ್ದು, ವಿಮಾನದಲ್ಲಿದ್ದ 225ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ.
ಘಟನೆ ನಡೆದ ತಕ್ಷಣವೇ ಸಂಬಂಧಪಟ್ಟ ಇಂಡಿಗೋ ಏರ್ಲೈನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸಂಸ್ಥೆಯ ಪ್ರಮಾಣಿತ ಕಾರ್ಯಾಚರಣಾ ವಿಧಾನದ ಪ್ರಕಾರ ಪೈಲಟ್ಗಳು ಅಧಿಕಾರಿಗಳಿಗೆ ಘಟನೆಯ ಕುರಿತು ವರದಿ ಮಾಡಿದ್ದಾರೆ.
ವಿಮಾನವನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದ್ದು, ಘಟನೆಯ ನಿಖರ ಕಾರಣ ಹಾಗೂ ವಿಮಾನಕ್ಕೆ ಉಂಟಾಗಿರುವ ಹಾನಿಯ ಕುರಿತು ಇಂಡಿಗೋ ತಾಂತ್ರಿಕ ತಂಡದಿಂದ ಪರಿಶೀಲನೆ ಮುಂದುವರಿದಿದೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R