ಪತ್ನಿಯೊಂದಿಗೆ ಜಗಳ: ಮನನೊಂದು ನೇಣಿಗೆ ಶರಣಾದ ಪತಿ; ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.): ಪತ್ನಿಯೊಂದಿಗೆ ನಡೆದ ಜಗಳದ ಬಳಿಕ ಮನನೊಂದ ಪತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಲಗ್ಗೆರೆಯಲ್ಲಿ ನಡೆದಿದೆ. ಹಾಸನ ಮೂಲದ ನವೀನ್ (46) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಆದರೆ ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದ ಹಿನ
ಪತ್ನಿಯೊಂದಿಗೆ ಜಗಳ: ಮನನೊಂದು ನೇಣಿಗೆ ಶರಣಾದ ಪತಿ; ಕೊಲೆ ಶಂಕೆ ವ್ಯಕ್ತಪಡಿಸಿದ ಕುಟುಂಬ


ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):

ಪತ್ನಿಯೊಂದಿಗೆ ನಡೆದ ಜಗಳದ ಬಳಿಕ ಮನನೊಂದ ಪತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಲಗ್ಗೆರೆಯಲ್ಲಿ ನಡೆದಿದೆ.

ಹಾಸನ ಮೂಲದ ನವೀನ್ (46) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಆದರೆ ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಸುಮಾರು 15 ವರ್ಷಗಳ ಹಿಂದೆ ನವೀನ್ ಹಾಗೂ ಕವಿತಾ ವಿವಾಹವಾಗಿದ್ದರು. ಕಳೆದ 7–8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದ ದಂಪತಿ, ಲಗ್ಗೆರೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನವೀನ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಮಗುವಾದ ಬಳಿಕ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ಸೆಪ್ಟೆಂಬರ್ 26ರಂದು ರಾತ್ರಿ ನವೀನ್ ಕುಡಿದು ಮನೆಗೆ ಬಂದಿದ್ದು, ಈ ವೇಳೆ ದಂಪತಿ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿದಾಗ ನವೀನ್ ಹಲ್ಲೆಗೆ ಮುಂದಾದರು.

ಈ ವೇಳೆ ಕವಿತಾ ಪ್ರತಿಯಾಗಿ ಹಲ್ಲೆ ನಡೆಸಿದ್ದು, ನವೀನ್ ತಲೆಗೆ ಗಾಯವಾಗಿತ್ತು ಎಂದು ಸ್ಥಳಿಯರು ಮಾಹಿತಿ ನೀಡಿದ್ದು, ಘಟನೆ ಬಳಿಕ ಕವಿತಾ ಮನೆಯಿಂದ ಹೊರಗೆ ಹೋಗಿದ್ದಾರೆ.

ತಾಯಿಗೆ ಕರೆ ಮಾಡಿ ಮಾಹಿತಿ:ಪತ್ನಿಯಿಂದ ಹಲ್ಲೆಗೊಳಗಾದ ಬಳಿಕ ನವೀನ್ ತಮ್ಮ ತಾಯಿಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ.

ನಂತರ ರಾತ್ರಿ ಸುಮಾರು 10 ಗಂಟೆ ವೇಳೆಗೆ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡಿದ್ದಾರೆ. ಕವಿತಾ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದ್ದು, ನೆರೆಹೊರೆಯವರ ಸಹಾಯದಿಂದ ನವೀನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕುಟುಂಬಸ್ಥರಿಂದ ಕೊಲೆ ಆರೋಪ:ಮೃತದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ನವೀನ್ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ನಿಯೇ ಕೊಲೆ ಮಾಡಿರಬಹುದು ಎಂದು ಆರೋಪಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಸಂಬಂಧ ಪೊಲೀಸರು ಅಸಹಜ ಸಾವು (UDR) ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande