ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ವಿಳಂಬ: ಸ್ಥಳೀಯರಿಂದಲೇ ರಿಬ್ಬನ್ ಕಟ್
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.): ಪಿಂಕ್ ಲೈನ್ ಮೆಟ್ರೋ ಕಾಮಗಾರಿ ಆರು ನಿಲ್ದಾಣಗಳವರೆಗೆ ಪೂರ್ಣಗೊಂಡಿದ್ದರೂ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಲ್ಲಿ ವಿಳಂಬವಾಗಿರುವುದಕ್ಕೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ವಿಶಿಷ್ಟ ರೀತಿಯಲ್ಲಿ ಖಂಡಿಸಿದ ಸ್ಥಳೀಯರು, ಯಾವುದೇ ಅಧಿ
bmrcl-pink-line-metro-opening-delay-locals-cut-ribbon-protest


ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):

ಪಿಂಕ್ ಲೈನ್ ಮೆಟ್ರೋ ಕಾಮಗಾರಿ ಆರು ನಿಲ್ದಾಣಗಳವರೆಗೆ ಪೂರ್ಣಗೊಂಡಿದ್ದರೂ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವಲ್ಲಿ ವಿಳಂಬವಾಗಿರುವುದಕ್ಕೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ವಿಶಿಷ್ಟ ರೀತಿಯಲ್ಲಿ ಖಂಡಿಸಿದ ಸ್ಥಳೀಯರು, ಯಾವುದೇ ಅಧಿಕೃತ ಉದ್ಘಾಟನಾ ಸಮಾರಂಭಕ್ಕಾಗಿ ಕಾಯದೆ ಮೆಟ್ರೋ ಮಾರ್ಗಕ್ಕೆ ತಾವೇ ರಿಬ್ಬನ್ ಕಟ್ ಮಾಡಿ ಗಮನ ಸೆಳೆದಿದ್ದಾರೆ.

ಪಿಂಕ್ ಲೈನ್ನ ಆರು ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡು ಸಂಚಾರ ಆರಂಭಿಸಲು ಸಿದ್ಧವಾಗಿದ್ದರೂ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿಗಾಗಿ ಕಾಯುತ್ತಿದೆ.

ಅಗತ್ಯ ಸುರಕ್ಷತಾ ಅನುಮತಿ ದೊರೆಯದ ಹಿನ್ನೆಲೆಯಲ್ಲಿ ಮಾರ್ಗವನ್ನು ಸಾರ್ವಜನಿಕ ಬಳಕೆಗೆ ತೆರೆಯುವ ಪ್ರಕ್ರಿಯೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಸತತ ವಿಳಂಬದಿಂದ ಬೇಸತ್ತಿರುವ ಸ್ಥಳೀಯರು, ಮೆಟ್ರೋ ಕಾಮಗಾರಿ ಪೂರ್ಣಗೊಂಡಿದ್ದರೂ ಸೇವೆ ಆರಂಭವಾಗದಿರುವುದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳೀಯರೇ ಪಿಂಕ್ ಮೆಟ್ರೋ ಮಾರ್ಗದ ಬಳಿ ರಿಬ್ಬನ್ ಕತ್ತರಿಸುವ ಮೂಲಕ ಸಾಂಕೇತಿಕವಾಗಿ ಉದ್ಘಾಟನೆ ನೆರವೇರಿಸಿದರು.

ಸ್ಥಳೀಯರ ಆಕ್ರೋಶ:

“ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕ ಸೇವೆಗೆ ಸಿದ್ಧವಾಗಿರುವ ಮಾರ್ಗವನ್ನು ಇನ್ನೂ ಏಕೆ ತೆರೆಯುತ್ತಿಲ್ಲ? ಪ್ರತಿದಿನ ಮೆಟ್ರೋ ಸೇವೆ ಆರಂಭವಾಗುವುದನ್ನು ನಿರೀಕ್ಷಿಸುತ್ತಿರುವ ಪ್ರಯಾಣಿಕರಿಗೆ ಈ ವಿಳಂಬದಿಂದ ತೊಂದರೆಯಾಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಶೀಘ್ರದಲ್ಲೇ ಅಗತ್ಯ ಅನುಮತಿಗಳನ್ನು ಪಡೆದು ಸೇವೆ ಆರಂಭಿಸಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಧಿಕೃತ ಉದ್ಘಾಟನೆಗೂ ಮುನ್ನ ಸ್ಥಳೀಯರು ನಡೆಸಿದ ಈ ಸಾಂಕೇತಿಕ ರಿಬ್ಬನ್ ಕಟ್ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆದಿದ್ದು, ಪಿಂಕ್ ಲೈನ್ ಮೆಟ್ರೋ ಸೇವೆ ಶೀಘ್ರ ಆರಂಭಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande