
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):
ಭಾರತೀಯ ರೂಪಾಯಿ ನೀಡಿದರೆ ಪ್ರತಿಯಾಗಿ ಹೆಚ್ಚಿನ ಮೌಲ್ಯದ ಸೌದಿ ರಿಯಾಲ್ ನೀಡುವುದಾಗಿ ನಂಬಿಸಿ ಸೊಪ್ಪಿನ ವ್ಯಾಪಾರಿಯಿಂದ ₹8 ಲಕ್ಷ ಪಡೆದು ವಂಚಿಸಿದ ಆರೋಪದಡಿ ಮಹಿಳೆ ಸೇರಿದಂತೆ ಮೂವರ ವಿರುದ್ಧ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಾಜಿನಗರ ನಿವಾಸಿ ಶಕೀಲ್ ಅಹ್ಮದ್ (36) ವಂಚನೆಗೊಳಗಾದವರು. ಈ ಸಂಬಂಧ ಅವರು ನೀಡಿದ ದೂರಿನ ಮೇರೆಗೆ ರೇಷ್ಮಾ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮೌಲ್ಯದ ರಿಯಾಲ್ ಆಮಿಷಶಕೀಲ್ ಅಹ್ಮದ್ ಶಿವಾಜಿನಗರದಲ್ಲಿ ಸೊಪ್ಪಿನ ವ್ಯಾಪಾರ ನಡೆಸುತ್ತಿದ್ದಾರೆ. ಇತ್ತೀಚೆಗೆ ರೇಷ್ಮಾ ಎಂಬ ಮಹಿಳೆ ಅವರಿಗೆ ಪರಿಚಯವಾಗಿದ್ದರು. ಈ ವೇಳೆ ತನ್ನ ಬಳಿ ಸೌದಿ ರಿಯಾಲ್ ಇದ್ದು, ಅದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಬೇಕಿದೆ ಎಂದು ರೇಷ್ಮಾ ಹೇಳಿಕೊಂಡಿದ್ದಾರೆ.
ಭಾರತೀಯ ರೂಪಾಯಿಯಲ್ಲಿ ನೀಡುವ ಹಣಕ್ಕಿಂತ ಹೆಚ್ಚಿನ ಮೌಲ್ಯದ ಸೌದಿ ರಿಯಾಲ್ ನೀಡುವುದಾಗಿ ಆಕೆ ಶಕೀಲ್ ಅವರಿಗೆ ಆಮಿಷವೊಡ್ಡಿದ್ದಾಳೆ. ಆಕೆಯ ಮಾತನ್ನು ನಂಬಿದ ಶಕೀಲ್ ₹8 ಲಕ್ಷ ನೀಡಲು ಒಪ್ಪಿಕೊಂಡಿದ್ದರು.
ನಂತರ ಹಣ ಪಡೆದ ಆರೋಪಿಗಳು ಸೌದಿ ರಿಯಾಲ್ ನೀಡದೆ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R