
ಸೋಮಸಮುದ್ರ, 28 ಸೆಪ್ಟೆಂಬರ್ (ಹಿ.ಸ.)
ಸಿರುಗುಪ್ಪ ರಸ್ತೆಯಲ್ಲಿ ಬಳ್ಳಾರಿಗೆ ಹಿಂದಿರುಗುತ್ತಿದ್ದ ಲಾರಿಯು ಸೋಮಸಮುದ್ರದ ಗ್ರಾಮದ ಮುಂದೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರಣ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ.
ಮೃತಳು ಸೋಮಸಮುದ್ರ ಗ್ರಾಮದ ಮಹಾದೇವಿ (40). ಸೋಮಸಮುದ್ರ ಗ್ರಾಮದ ಸುನಿತಾ, ಗಗನ್ ಮತ್ತು ಪೂಜಾರಿ ಜಡೆಮ್ಮ ಅವರ ಜೊತೆಯಲ್ಲಿ ಮಹಾದೇವಿ ರಸ್ತೆ ದಾಟುತ್ತಿದ್ದಾಗ ಲಾರಿಯು ಏಕಾಏಕಿ ಬಂದು, ಡಿಕ್ಕಿ ಹೊಡೆದ ಕಾರಣ ಮಹಾದೇವಿ ಸ್ಥಳದಲ್ಲೇ ಮೃತಪಟ್ಟರು. ಉಳಿದವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕ ಪರಾರಿಯಾಗಿದ್ದು, ತನಿಖೆ ನಡೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್