
ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.)
ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಸೇವಾ ಸಂಕಲ್ಪ ಅಭಿಯಾನ 2026ರ ಅಂಗವಾಗಿ ನಾಗಠಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಜಯಪುರ ನಗರದ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಎಂದು ಬಿಜೆಪಿ ವಿಜಯಪುರ ಜಿಲ್ಲಾಧ್ಯಕ್ಷ ಹುರುಳಿಂಗಪ್ಪ ಅಂಗಡಿ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸೇವೆಯ 25 ವರ್ಷಗಳ ಪಯಣವನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಸೇವಾ ಸಂಕಲ್ಪ ಅಭಿಯಾನದ ಭಾಗವಾಗಿ ಈ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸೃಜನಶೀಲತೆ, ಕಲಾತ್ಮಕ ಪ್ರತಿಭೆ ಹಾಗೂ ಸಾರ್ವಜನಿಕ ಸೇವೆಯ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಚಿತ್ರಕಲಾ ಸ್ಪರ್ಧೆಯಲ್ಲಿ ಶಾಂತಿನಿಕೇತನ ಅಂತಾರಾಷ್ಟ್ರೀಯ ಶಾಲೆಯ 1,050 ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ, ತಮ್ಮ ಕಲ್ಪನೆ ಮತ್ತು ಚಿತ್ರಕಲಾ ಕೌಶಲ್ಯವನ್ನು ವಿವಿಧ ಚಿತ್ರಗಳ ಮೂಲಕ ಅನಾವರಣಗೊಳಿಸಿದರು. ದೇಶದ ಅಭಿವೃದ್ಧಿ, ರಾಷ್ಟ್ರಭಕ್ತಿ, ಸಮಾಜ ಸೇವೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ವಿದ್ಯಾರ್ಥಿಗಳು ತಮ್ಮ ಚಿತ್ರಗಳ ಮೂಲಕ ಬಿಂಬಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹುರುಳಿಂಗಪ್ಪ ಅಂಗಡಿ, ವಿದ್ಯಾರ್ಥಿಗಳಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ. ಯುವ ಪೀಳಿಗೆಯಲ್ಲಿ ದೇಶದ ಬಗ್ಗೆ ಅಭಿಮಾನ, ಸಮಾಜದ ಬಗ್ಗೆ ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸೇವಾ ಸಂಕಲ್ಪ ಅಭಿಯಾನ ವಿವಿಧ ಚಟುವಟಿಕೆಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ್ ಬಿರಾದಾರ, ಮುಖಂಡರಾದ ಸಂಜೀವ ಐಹೊಳೆ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಈರಣ್ಣ ರಾವೂರ ಹಾಗೂ ಚಿದಾನಂದ ಚಲವಾದಿ, ಜಿಲ್ಲಾ ಉಪಾಧ್ಯಕ್ಷರಾದ ಮಹೇಂದ್ರ ನಾಯಕ, ಬಸವರಾಜ ಬೈಚಬಾಳ ಹಾಗೂ ಉಮೇಶ ಕೋಳಕೂರ ಸೇರಿದಂತೆ ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.
ಅಭಿಯಾನದ ಜಿಲ್ಲಾ ಸಂಚಾಲಕರಾದ ಕೃಷ್ಣಾ ಗುನ್ನಾಳಕರ, ಸಿದ್ಧಗೊಂಡ ಬಿರಾದಾರ ಹಾಗೂ ಸಚಿನ ಬೊಂಬಳೆ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande