ವಿಜಯಪುರ: ಎಸ್ಐಆರ್ ಕುರಿತು ದಾಖಲೆ ಬಿಡುಗಡೆ ಮಾಡಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಸಚಿವ ಎಂ.ಬಿ.ಪಾಟೀಲ
ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.): ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿರುವ 1,607 ಮಂದಿಯ ಹೆಸರಿನ ಕುರಿತು ಸಾಮೂಹಿಕವಾಗಿ ಆಕ್ಷೇಪಣೆ ಸಲ್ಲಿಸಿ, ಬಳಿಕ ಅದನ್ನು ಹಿಂಪಡೆಯಲಾಗಿದೆ. ಆಕ್ಷೇಪಣೆ ಸಲ್ಲಿಸಿದವರೇ ತಮ್ಮ ಪತ್ರದಲ್ಲಿ ತಾವು ಭಾರತೀಯ ಜನತಾ
Press meet


ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.):

ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯಲ್ಲಿರುವ 1,607 ಮಂದಿಯ ಹೆಸರಿನ ಕುರಿತು ಸಾಮೂಹಿಕವಾಗಿ ಆಕ್ಷೇಪಣೆ ಸಲ್ಲಿಸಿ, ಬಳಿಕ ಅದನ್ನು ಹಿಂಪಡೆಯಲಾಗಿದೆ. ಆಕ್ಷೇಪಣೆ ಸಲ್ಲಿಸಿದವರೇ ತಮ್ಮ ಪತ್ರದಲ್ಲಿ ತಾವು ಭಾರತೀಯ ಜನತಾ ಪಕ್ಷದವರು ಎಂದು ಉಲ್ಲೇಖಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ದಾಖಲೆಗಳ ಪ್ರತಿಗಳನ್ನು ಪ್ರದರ್ಶಿಸಿದರು. “ನಾನು ಯಾರನ್ನೂ ಬಿಜೆಪಿ ಎಂದು ಆರೋಪಿಸುತ್ತಿಲ್ಲ. ಆಕ್ಷೇಪಣೆ ಸಲ್ಲಿಸಿದವರೇ ಸಹಿ ಮಾಡಿ ತಮ್ಮನ್ನು ಬಿಜೆಪಿ ಎಂದು ಉಲ್ಲೇಖಿಸಿಕೊಂಡಿದ್ದಾರೆ. ಅದನ್ನು ದಾಖಲೆ ಸಮೇತ ಸಾರ್ವಜನಿಕರ ಮುಂದೆ ಇಡುತ್ತಿದ್ದೇನೆ” ಎಂದು ಹೇಳಿದರು.

ಬಬಲೇಶ್ವರ ಕ್ಷೇತ್ರದಲ್ಲಿ ಕೆಲವು ರಾಜಕೀಯ ವ್ಯಕ್ತಿಗಳ ಪ್ರೇರಣೆಯಿಂದ 1,607 ಮತದಾರರ ವಿರುದ್ಧ ಸಾಮೂಹಿಕವಾಗಿ ಆಕ್ಷೇಪಣೆ ಸಲ್ಲಿಸಲಾಗಿದ್ದು, ನಂತರ ಆಕ್ಷೇಪಣೆಗಳನ್ನು ಹಿಂಪಡೆಯಲಾಗಿದೆ. ಈ ಪ್ರಕರಣದ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ತಪ್ಪು ಮಾಹಿತಿ ನೀಡಿ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲು ಪ್ರಯತ್ನಿಸಿದ್ದರೆ, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

“ಆಕ್ಷೇಪಣೆಗಳನ್ನು ವಾಪಸ್ ಪಡೆದಿರುವುದರಿಂದ ಪ್ರಕರಣದಲ್ಲಿ ಸೂಕ್ಷ್ಮತೆ ಇದೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅರ್ಹ ಮತದಾರನ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಸರಿಯಾದ ಮಾರ್ಗವಲ್ಲ” ಎಂದು ಎಂ.ಬಿ. ಪಾಟೀಲ ಹೇಳಿದರು.

ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದಲ್ಲಿಯೂ ಸೆ.22ರಂದು 5 ಸಾವಿರಕ್ಕೂ ಅಧಿಕ ಆಕ್ಷೇಪಣೆಗಳು ಹಾಗೂ ಸೆ.23ರಂದು ಮತ್ತೆ ಸುಮಾರು 8 ಸಾವಿರ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಒಟ್ಟಾರೆ ಸುಮಾರು 14 ಸಾವಿರ ಆಕ್ಷೇಪಣೆಗಳನ್ನು ಸಲ್ಲಿಸಿ ನಂತರ ಹಿಂಪಡೆಯಲಾಗಿದೆ ಎಂಬ ಮಾಹಿತಿ ಇದೆ ಎಂದು ಸಚಿವರು ಹೇಳಿದರು.

ತಮ್ಮ ಮಾಹಿತಿಯ ಪ್ರಕಾರ, ಆಕ್ಷೇಪಣೆ ಸಲ್ಲಿಸಿದವರಲ್ಲಿ ರಾಜಕುಮಾರ ಬಿರಾದಾರ ಹಾಗೂ ಸಚಿನ್ ಎಂಬವರು ವಿಜಯಪುರ ನಗರ ವಿಧಾನಸಭಾ ಮತಕ್ಷೇತ್ರದ ಶಾಸಕರ ಕಾರ್ಯಾಲಯದ ಸಿಬ್ಬಂದಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಪ್ರೇಮಾನಂದ ಬಿರಾದಾರ, ಚಂದ್ರಶೇಖರ ಕವಟಗಿ ಸೇರಿದಂತೆ ಕೆಲವರು ಸಹ ಆಕ್ಷೇಪಣೆ ಸಲ್ಲಿಸಿರುವುದು ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.

ಆದರೆ, ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ ಸಲ್ಲಿಕೆಯಾಗಿರುವ ಪ್ರತಿಯೊಂದು ಆಕ್ಷೇಪಣೆಯೂ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಪರಿಶೀಲನೆ ಮತ್ತು ನಿಯಮಾನುಸಾರ ನಿರ್ಧಾರದ ಪ್ರಕ್ರಿಯೆಗೆ ಒಳಪಡುತ್ತದೆ. ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ Form-7 ಮೂಲಕ ಮತದಾರರ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸುವ ಅವಕಾಶವಿದೆ. ರಾಜ್ಯದಲ್ಲಿ ಈ ಪ್ರಕ್ರಿಯೆಯಡಿ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ಮುಂದುವರಿದಿದೆ.

‘ಅರ್ಹ ಮತದಾರರ ಹಕ್ಕು ಕಸಿಯಬಾರದು’ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಬಾರದು ಎಂದು ಸಚಿವ ಎಂ.ಬಿ. ಪಾಟೀಲ ಒತ್ತಾಯಿಸಿದರು.

“ಯಾವುದೇ ಸಮುದಾಯದವರಾಗಿರಲಿ, ಅರ್ಹ ಮತದಾರರ ಮತದಾನದ ಹಕ್ಕನ್ನು ರಕ್ಷಿಸಬೇಕು. ತಪ್ಪು ಮಾಹಿತಿ ನೀಡಿ ಮತದಾರರ ಹೆಸರನ್ನು ತೆಗೆದುಹಾಕುವ ಪ್ರಯತ್ನ ನಡೆದಿದ್ದರೆ ಅದು ಗಂಭೀರ ವಿಚಾರ” ಎಂದು ಹೇಳಿದರು.

ಬಬಲೇಶ್ವರ ಕ್ಷೇತ್ರದಲ್ಲಿ ಸಲ್ಲಿಕೆಯಾಗಿರುವ ಆಕ್ಷೇಪಣೆಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯಕ್ಕೆ ಸೇರಿದ ಹಲವು ಮತದಾರರ ಹೆಸರುಗಳಿರುವ ಬಗ್ಗೆ ವರದಿಗಳು ಪ್ರಕಟವಾಗಿವೆ. ಈ ಕುರಿತು ವಿವಿಧ ರಾಜಕೀಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರ ವಿರುದ್ಧ ಗುರುತರ ಆರೋಪಗಳು ಕೇಳಿಬಂದಿವೆ ಎಂದು ಹೇಳಿದ ಎಂ.ಬಿ. ಪಾಟೀಲ, ಅವರನ್ನು ತಕ್ಷಣ ವಜಾಗೊಳಿಸಬೇಕು ಹಾಗೂ ಅವರ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಹಾಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ಅರ್ಹ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದೆ ಎಂಬುದು ತಮ್ಮ ಆರೋಪವಾಗಿದೆ ಎಂದು ಸಚಿವರು ಹೇಳಿದರು.

ಅಸುನೀಗಿದವರು, ಸ್ಥಳಾಂತರಗೊಂಡವರು, ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಸೇರಿದಂತೆ ನಿಯಮಾನುಸಾರ ಅನರ್ಹರಾಗಿರುವವರ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕುವುದಕ್ಕೆ ತಮ್ಮ ಆಕ್ಷೇಪವಿಲ್ಲ. ಆದರೆ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ರಾಜಕೀಯ ಉದ್ದೇಶದಿಂದ ತೆಗೆದುಹಾಕಬಾರದು ಎಂದು ಅವರು ಹೇಳಿದರು.

ಸಂಸದ ಗೋವಿಂದ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, “ದಲಿತನಾಗಿರಲಿ, ಲಿಂಗಾಯತನಾಗಿರಲಿ ಅಥವಾ ಯಾವುದೇ ಸಮುದಾಯದವರಾಗಿರಲಿ, ತಪ್ಪು ಮಾಡಿದರೆ ತಪ್ಪೇ. ಇದರಲ್ಲಿ ಸಮುದಾಯದ ಪ್ರಶ್ನೆಯೇ ಬರುವುದಿಲ್ಲ” ಎಂದು ಹೇಳಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಪಾರದರ್ಶಕವಾಗಿ ನಡೆಯಬೇಕು. ಅರ್ಹ ಮತದಾರರು ತಮ್ಮ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಚುನಾವಣಾ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಆಕ್ಷೇಪಣೆ ಸಲ್ಲಿಕೆ ಹಾಗೂ ಹಿಂಪಡೆಯುವಿಕೆಯ ಹಿಂದೆ ಯಾವುದೇ ದುರುದ್ದೇಶವಿದ್ದರೆ, ದಾಖಲೆಗಳ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande