ಚಡಚಣ–ಇಂಡಿ ತಾಲ್ಲೂಕುಗಳನ್ನು ‘ತೀವ್ರ ಬರಗಾಲ’ ಪಟ್ಟಿಗೆ ಸೇರಿಸಿ: ಗುರುಲಿಂಗಪ್ಪ ಅಂಗಡಿ
ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.): ವಿಜಯಪುರ ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆ ನಷ್ಟ, ನೀರಿನ ಕೊರತೆ ಹಾಗೂ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಡಚಣ ಮತ್ತು ಇಂಡಿ ತಾಲ್ಲೂಕುಗಳನ್ನು ‘ತೀವ್ರ ಬರಗಾಲ’ ಪಟ್ಟಿಗೆ ಸೇರ್ಪಡೆ ಮಾಡಬೇಕು ಹಾ
ಮನವಿ


ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.):

ವಿಜಯಪುರ ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಬೆಳೆ ನಷ್ಟ, ನೀರಿನ ಕೊರತೆ ಹಾಗೂ ಆರ್ಥಿಕ ಸಂಕಷ್ಟದಿಂದ ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಡಚಣ ಮತ್ತು ಇಂಡಿ ತಾಲ್ಲೂಕುಗಳನ್ನು ‘ತೀವ್ರ ಬರಗಾಲ’ ಪಟ್ಟಿಗೆ ಸೇರ್ಪಡೆ ಮಾಡಬೇಕು ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ವೈಜ್ಞಾನಿಕ ಬೆಳೆ ಪರಿಹಾರ ಸೇರಿದಂತೆ ಅಗತ್ಯ ನೆರವು ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ತಿಳಿಸಿದ್ದಾರೆ.

ಬರ ಪರಿಸ್ಥಿತಿಯಿಂದ ಈ ಭಾಗದ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಯ ಕೊರತೆಯಿಂದ ಬೆಳೆಗಳು ಹಾನಿಗೊಳಗಾಗಿದ್ದು, ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.

ಬೆಳೆ ನಷ್ಟದಿಂದ ಆದಾಯ ಕುಂಠಿತಗೊಂಡಿರುವ ರೈತರು ಕೃಷಿ ಸಾಲ, ಕುಟುಂಬ ನಿರ್ವಹಣೆ ಹಾಗೂ ಮುಂದಿನ ಹಂಗಾಮಿನ ಕೃಷಿ ವೆಚ್ಚವನ್ನು ಭರಿಸುವ ಆತಂಕದಲ್ಲಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯ ರೈತರ ಹಿತದೃಷ್ಟಿಯಿಂದ ವೈಜ್ಞಾನಿಕ ಹಾಗೂ ಸಮಗ್ರ ಬೆಳೆ ನಷ್ಟದ ಸಮೀಕ್ಷೆ ನಡೆಸಬೇಕು. ಪ್ರತಿ ರೈತನ ವಾಸ್ತವಿಕ ಬೆಳೆ ನಷ್ಟವನ್ನು ಪರಿಗಣಿಸಿ ಸೂಕ್ತ ಹಾಗೂ ನ್ಯಾಯಯುತ ಬೆಳೆ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಬ್ಯಾಂಕ್ಗಳು ಹಾಗೂ ಸಹಕಾರಿ ಸಂಸ್ಥೆಗಳಿಂದ ಪಡೆದಿರುವ ಕೃಷಿ ಸಾಲದ ಹೊರೆ ಕಡಿಮೆ ಮಾಡುವ ಮೂಲಕ ರೈತರಿಗೆ ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಲಾಗಿದೆ.

ಇದೇ ವೇಳೆ, ರೈತರು ಪಾವತಿಸಿರುವ ಬೆಳೆ ವಿಮೆಗೆ ಅನುಗುಣವಾಗಿ ಬೆಳೆ ವಿಮೆ ಪರಿಹಾರವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು. ಬೆಳೆ ನಷ್ಟದ ನಿಖರ ಅಂದಾಜು ಮಾಡಿ ವಿಮಾ ಪರಿಹಾರ ದೊರೆಯುವಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ಬರ ಪರಿಸ್ಥಿತಿಯ ಪರಿಣಾಮ ಕೇವಲ ಕೃಷಿ ಬೆಳೆಗಳಿಗೆ ಸೀಮಿತವಾಗದೆ ಜಾನುವಾರುಗಳ ಮೇಲೂ ಬೀರುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಸಮರ್ಪಕ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿರುವ ಕಡೆಗಳಲ್ಲಿ ಮೇವು ಬ್ಯಾಂಕ್ಗಳನ್ನು ಸ್ಥಾಪಿಸಿ, ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಚಡಚಣ ಮತ್ತು ಇಂಡಿ ತಾಲ್ಲೂಕುಗಳಲ್ಲಿನ ವಾಸ್ತವಿಕ ಬರ ಪರಿಸ್ಥಿತಿಯನ್ನು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಬೇಕು. ರೈತರ ಅಹವಾಲುಗಳನ್ನು ಆಲಿಸಿ, ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಈ ಎರಡೂ ತಾಲ್ಲೂಕುಗಳನ್ನು ತೀವ್ರ ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸುವ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಗುರುಲಿಂಗಪ್ಪ ಅಂಗಡಿ ಒತ್ತಾಯಿಸಿದರು.

ರೈತರ ಸಂಕಷ್ಟವನ್ನು ವಿಳಂಬ ಮಾಡದೆ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಪರಿಹಾರ ಕಾಮಗಾರಿಗಳು ಹಾಗೂ ಆರ್ಥಿಕ ನೆರವು ಸೇರಿದಂತೆ ಅಗತ್ಯ ಕ್ರಮಗಳನ್ನು ತಕ್ಷಣ ಜಾರಿಗೊಳಿಸಬೇಕು. ರೈತರ ಬದುಕು ಹಾಗೂ ಕೃಷಿ ಆರ್ಥಿಕತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ಸ್ಪಂದಿಸಬೇಕು ಎಂದು ಅವರು ಮನವಿ ಮಾಡಿದರು

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande