
ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.):
ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಹಣಕಾಸು ಒದಗಿಸುವ ಉದ್ದೇಶದಿಂದ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ (ಐಆರ್‌ಎಫ್‌ಸಿ) ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ (ಡಿವಿಸಿ) ನಡುವೆ ₹4,200 ಕೋಟಿ ಮೊತ್ತದ ಅವಧಿ ಸಾಲ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಒಪ್ಪಂದದಡಿ ದೊರೆಯುವ ಸಾಲವನ್ನು ಡಿವಿಸಿಯ ತೇಲುವ ಸೌರ ವಿದ್ಯುತ್ ಯೋಜನೆಗಳು, ಭೂಮಿಯ ಮೇಲಿನ ಸೌರ ವಿದ್ಯುತ್ ಯೋಜನೆಗಳು, ಮೇಲ್ಛಾವಣಿ ಸೌರ ಯೋಜನೆಗಳು ಹಾಗೂ ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆ ಯೋಜನೆಗಳಿಗೆ ಬಳಸಲಾಗುತ್ತದೆ. ಈ ಯೋಜನೆಗಳಿಗೆ ಡಿವಿಸಿಯ ಅಸ್ತಿತ್ವದಲ್ಲಿರುವ ಭೂಮಿ, ಜಲಾಶಯಗಳು ಮತ್ತು ವಿದ್ಯುತ್ ಪ್ರಸರಣ ಮೂಲಸೌಕರ್ಯವನ್ನು ಬಳಸಿಕೊಳ್ಳಲಾಗುತ್ತದೆ.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿವಿಸಿ ಪರ ಸದಸ್ಯ (ಹಣಕಾಸು) ಮನೀಷ್ ಕುಮಾರ್ ಹಾಗೂ ಐಆರ್‌ಎಫ್‌ಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ದುಬೆ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ನವೀಕರಿಸಬಹುದಾದ ಇಂಧನವು ಭಾರತೀಯ ರೈಲ್ವೆಗೆ ಪ್ರಮುಖ ಕ್ಷೇತ್ರವಾಗಿ ಹೊರಹೊಮ್ಮಿದ್ದು, 2030ರ ವೇಳೆಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಗುರಿ ಸಾಧಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ಮನೋಜ್ ಕುಮಾರ್ ದುಬೆ ಹೇಳಿದರು.
ಡಿವಿಸಿಗೆ ನೀಡಲಾಗಿರುವ ₹4,200 ಕೋಟಿ ಹಣಕಾಸು ನೆರವು ಸ್ವಚ್ಛ ಇಂಧನ ಮೂಲಸೌಕರ್ಯಕ್ಕೆ ದೀರ್ಘಾವಧಿಯ ಹಣಕಾಸು ಒದಗಿಸುವ ಐಆರ್‌ಎಫ್‌ಸಿಯ ಸಾಮರ್ಥ್ಯದ ವಿಸ್ತರಣೆಯನ್ನು ತೋರಿಸುತ್ತದೆ ಎಂದರು.
ಡಿವಿಸಿಯೊಂದಿಗಿನ ಪಾಲುದಾರಿಕೆಯು ನವೀಕರಿಸಬಹುದಾದ ಇಂಧನ ಮೂಲಸೌಕರ್ಯಕ್ಕೆ ದೀರ್ಘಾವಧಿಯ ಬಂಡವಾಳ ಒದಗಿಸುವ ಐಆರ್‌ಎಫ್‌ಸಿಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ. ಇದರಿಂದ ರೈಲ್ವೆಯ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸುವುದರ ಜೊತೆಗೆ ಸ್ವಚ್ಛ ಇಂಧನ ವ್ಯವಸ್ಥೆ ಅಭಿವೃದ್ಧಿಪಡಿಸಲು ಸಹಾಯವಾಗಲಿದೆ ಎಂದು ಅವರು ಹೇಳಿದರು.
ಐಆರ್‌ಎಫ್‌ಸಿ ಇದೀಗ ರೈಲ್ವೆಯ ಸಾಂಪ್ರದಾಯಿಕ ಹಣಕಾಸು ನೆರವಿನ ಜತೆಗೆ ನವೀಕರಿಸಬಹುದಾದ ಇಂಧನ, ವಿದ್ಯುತ್, ಮೆಟ್ರೊ ರೈಲು, ಸರಕು ಸಾಗಣೆ ಮತ್ತು ಇತರ ಮೂಲಸೌಕರ್ಯ ಕ್ಷೇತ್ರಗಳಿಗೂ ಹಣಕಾಸು ನೆರವು ವಿಸ್ತರಿಸುತ್ತಿದೆ. ಡಿವಿಸಿಯೊಂದಿಗಿನ ಈ ಒಪ್ಪಂದವೂ ಇದೇ ವಿಸ್ತರಣೆಯ ಭಾಗವಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.