
ನವದೆಹಲಿ, ಸೆಪ್ಟೆಂಬರ್ 28:
ವರ್ಷಕ್ಕೆ ಎರಡು ಬಾರಿ ನಡೆಯುವ ನೌಕಾಪಡೆ ಕಮಾಂಡರ್ಗಳ ಸಮ್ಮೇಳನ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 1ರವರೆಗೆ ಮೂರು ದಿನಗಳ ಕಾಲ ನವದೆಹಲಿಯ ನೌಕಾಪಡೆ ಭವನದಲ್ಲಿ ನಡೆಯಲಿದೆ. ನೌಕಾಪಡೆಯ ಉನ್ನತ ನಾಯಕತ್ವದ ಈ ಸಮ್ಮೇಳನದಲ್ಲಿ ಹಿರಿಯ ಅಧಿಕಾರಿಗಳು ಕಾರ್ಯತಂತ್ರದ ಮಟ್ಟದಲ್ಲಿ ಕಾರ್ಯಾಚರಣಾ ಸಿದ್ಧತೆಯನ್ನು ಪರಿಶೀಲಿಸಲಿದ್ದಾರೆ. ಹೊರ ರಾಜ್ಯಗಳಲ್ಲಿರುವ ಕಾರ್ಯಾಚರಣಾ ಹಾಗೂ ವಲಯ ಕಮಾಂಡರ್‌ಗಳು ಸೇರಿದಂತೆ ಹಿರಿಯ ನೌಕಾಪಡೆ ನಾಯಕತ್ವದ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷಗಳ ನಡುವೆಯೇ ಭಾರತದ ಸಮುದ್ರ ಹಿತಾಸಕ್ತಿಗಳ ರಕ್ಷಣೆಯಲ್ಲಿ ನೌಕಾಪಡೆಯ ಕೊಡುಗೆಯನ್ನು ಪ್ರದರ್ಶಿಸುವ ದೃಷ್ಟಿಯಿಂದ ಸಮ್ಮೇಳನ ಮಹತ್ವದ್ದಾಗಿದೆ ಎಂದು ನೌಕಾಪಡೆಯ ಕ್ಯಾಪ್ಟನ್ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ. ಇದರಲ್ಲಿ ಇಂಧನ ಭದ್ರತೆಯೂ ಸೇರಿದೆ. ಇಂಧನ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ನೌಕಾಪಡೆಯ ಕಾರ್ಯಾಚರಣೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವುದು ಹಾಗೂ ಹಿಂದೂ ಮಹಾಸಾಗರ ಪ್ರದೇಶ ಮತ್ತು ಅದರಾಚೆ ನೌಕಾಪಡೆಯನ್ನು ವಿಶ್ವಾಸಾರ್ಹ ಹಾಗೂ ಆದ್ಯತೆಯ ಭದ್ರತಾ ಪಾಲುದಾರನನ್ನಾಗಿ ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ ಎಂದರು.
ಸಮ್ಮೇಳನದ ಮೊದಲ ದಿನ ರಕ್ಷಣಾ ಸಚಿವರು ಭಾರತದ ಸಮುದ್ರ ಕಾರ್ಯತಂತ್ರ, ನೌಕಾಪಡೆಯಿಂದ ನಿರೀಕ್ಷೆಗಳು ಹಾಗೂ ಮುಂದಿನ ದೃಷ್ಟಿಕೋನದ ಕುರಿತು ತಮ್ಮ ಮಾರ್ಗದರ್ಶನ ನೀಡಲಿದ್ದಾರೆ. ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಮತ್ತು ಭೂಸೇನಾ ಮುಖ್ಯಸ್ಥರೂ ಮೂರು ಸೇನೆಗಳ ನಡುವಿನ ಸಮನ್ವಯ ಹಾಗೂ ಏಕೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ನೌಕಾಪಡೆ ಕಮಾಂಡರ್‌ಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಮುಂದಿನ ದಿನಗಳಲ್ಲಿ ನೌಕಾಪಡೆ ಮುಖ್ಯಸ್ಥರು ಕಮಾಂಡರ್‌ಗಳೊಂದಿಗೆ ಕಾರ್ಯಾಚರಣೆಗಳು, ಸಾಮಗ್ರಿ, ಸಾಗಣೆ ವ್ಯವಸ್ಥೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು, ತರಬೇತಿ ಸೇರಿದಂತೆ ವಿವಿಧ ವಿಷಯಗಳನ್ನು ಪರಿಶೀಲಿಸಲಿದ್ದಾರೆ. ಕೃತಕ ಬುದ್ಧಿಮತ್ತೆ, ದೊಡ್ಡ ದತ್ತಾಂಶ ವಿಶ್ಲೇಷಣೆ, ಸ್ವಯಂಚಾಲಿತ ಹಾಗೂ ಮಾನವರಹಿತ ವ್ಯವಸ್ಥೆಗಳು ಮತ್ತು ಸೈಬರ್ ಕಾರ್ಯಾಚರಣೆಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಗೂ ವಿಶೇಷ ಗಮನ ನೀಡಲಾಗುತ್ತದೆ. ಅತ್ಯಾಧುನಿಕ ಯುದ್ಧತಂತ್ರಗಳನ್ನು ಅಳವಡಿಸಿಕೊಳ್ಳುವ ಹಾಗೂ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸುವ ಅಗತ್ಯಕ್ಕೆ ಒತ್ತು ನೀಡಲಾಗುತ್ತದೆ.
ಆತ್ಮನಿರ್ಭರತೆ ಮತ್ತು ವಿಕಸಿತ ಭಾರತ-2047ರ ಕೇಂದ್ರ ಸರ್ಕಾರದ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ‘ಸೇನಾ ಸಮನ್ವಯ’, ಆತ್ಮನಿರ್ಭರತೆ ಮತ್ತು ನವೀನತೆಯನ್ನು ಮೂರು ಮೂಲ ಸ್ತಂಭಗಳಾಗಿ ಪರಿಗಣಿಸಿ, ಪಡೆಗಳ ಸಾಮರ್ಥ್ಯವನ್ನು ಹೊಂದಾಣಿಕೆ ಮಾಡುವ ಹಾಗೂ ಯುದ್ಧ ಸಿದ್ಧತೆಯನ್ನು ಹೆಚ್ಚಿಸುವ ಕ್ರಮಗಳ ಕುರಿತು ನೌಕಾಪಡೆಯ ಹಿರಿಯ ನಾಯಕತ್ವ ಸಮಗ್ರವಾಗಿ ಪರಿಶೀಲನೆ ನಡೆಸಲಿದೆ ಎಂದು ಕ್ಯಾಪ್ಟನ್ ವಿವೇಕ್ ಮಧ್ವಾಲ್ ತಿಳಿಸಿದರು.
ಭಾರತೀಯ ನೌಕಾಪಡೆಯು ದೇಶದ ಸೇವೆಯಲ್ಲಿ ಯುದ್ಧ ಸಿದ್ಧ, ವಿಶ್ವಾಸಾರ್ಹ, ಏಕೀಕೃತ ಹಾಗೂ ಭವಿಷ್ಯಕ್ಕೆ ಸಿದ್ಧವಾಗಿರುವ ಪಡೆಯಾಗಿ ಕಾರ್ಯನಿರ್ವಹಿಸುವ ತನ್ನ ಬದ್ಧತೆಯೊಂದಿಗೆ ಕಾರ್ಯಾಚರಣೆಗಳ ವೇಗವನ್ನು ಮುಂದುವರಿಸುತ್ತಿದೆ ಎಂದು ಅವರು ಹೇಳಿದರು.
-------
ಹಿಂದೂಸ್ತಾನ್ ಸಮಾಚಾರ್ / Rakesh.M.B.