ರಾಜ್ಯ ರಾಜಕಾರಣಕ್ಕೆ: ಸೂಕ್ತ ಸಮಯದಲ್ಲಿ ನಿರ್ಧಾರ; ಕುಮಾರಸ್ವಾಮಿ
ಸೂಕ್ತ ಸಮಯದಲ್ಲಿ ನಿರ್ಧಾರ ಎಂದ ಕುಮಾರಸ್ವಾಮಿ
HD-Kumaraswamy-hints-at-return-to-Karnataka-politics-NICE-toll-row-CM-statement


ಶ್ರೀರಂಗಪಟ್ಟಣ, 28 ಸೆಪ್ಟೆಂಬರ್ (ಹಿ.ಸ.):

ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸೋಮವಾರ ಸುಳಿವು ನೀಡಿದರು.

ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಜನ ಗಮನಿಸುತ್ತಿದ್ದಾರೆ. “ನಮ್ಮ ಕುಮಾರಣ್ಣ ರಾಜ್ಯಕ್ಕೆ ಬರಬೇಕು ಎಂಬುದು ದೊಡ್ಡ ಮಟ್ಟದ ಕೂಗಾಗಿದೆ. ನಮ್ಮ ಪಕ್ಷದ ಅಭಿಮಾನಿಗಳಷ್ಟೇ ಅಲ್ಲದೆ, ಬೇರೆ ಪಕ್ಷಗಳವರಲ್ಲೂ ಇದೇ ಭಾವನೆ ಇದೆ. ಸೂಕ್ತ ಸಮಯದಲ್ಲಿ ಈ ಬಗ್ಗೆ ನಿರ್ಧಾರ ಮಾಡುತ್ತೇನೆ” ಎಂದು ಹೇಳಿದರು.

ಕೇಂದ್ರದಲ್ಲಿ ಸಚಿವನಾಗಿದ್ದರೂ ರಾಜ್ಯದ ವಿಚಾರಗಳಿಂದ ಹಿಂದೆ ಸರಿಯುವುದಿಲ್ಲ. ರೈತರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತೇನೆ. ರಾಜ್ಯದಲ್ಲಿ ಸಾಕಷ್ಟು ಅಕ್ರಮಗಳು ನಡೆಯುತ್ತಿದ್ದು, ದಾಖಲೆಗಳ ಸಮೇತ ಭ್ರಷ್ಟಾಚಾರದ ಬಗ್ಗೆ ಮಾತನಾಡಬಲ್ಲೆ ಎಂದು ಅವರು ಹೇಳಿದರು.

“ನಾನು ಟೀಕೆ ಮಾಡುವುದಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲವೂ ನಾಡಿನ ಜನರಿಗೆ ಗೊತ್ತಿದೆ. ಈ ನಾಡಿನ ಉಳಿವಿಗಾಗಿ ಏನು ನಿರ್ಧಾರ ಮಾಡಬೇಕೋ ಅದನ್ನು ಮಾಡುತ್ತೇನೆ. ಅಂತಿಮವಾಗಿ ಜನರ ತೀರ್ಮಾನಕ್ಕೆ ತಲೆಬಾಗುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದರು.

ನೈಸ್ ಟೋಲ್ ವಿಚಾರದಲ್ಲೂ ಸಿಎಂಗೆ ತಿರುಗೇಟುನೈಸ್ ಟೋಲ್ ವಿಚಾರವಾಗಿ ಮುಖ್ಯಮಂತ್ರಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ನೈಸ್ ಟೋಲ್ ವಿಚಾರದಲ್ಲಿ ನಾನ್ಯಾಕೆ ಬ್ಲ್ಯಾಕ್ಮೇಲ್ ಮಾಡಲಿ?” ಎಂದು ಪ್ರಶ್ನಿಸಿದರು.

“ನೈಸ್ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಏನು ಬಂದಿದೆ ಎಂಬುದನ್ನು ಮುಖ್ಯಮಂತ್ರಿ ಗಮನಿಸಲಿ. ನಾಡಿನ ಜನರ ಮೇಲೆ ಗೌರವ ಇದ್ದರೆ ನಾಡಿನ ಸಂಪತ್ತನ್ನು ಉಳಿಸುವ ಕೆಲಸ ಮಾಡಲಿ. ಕಾನೂನುಬಾಹಿರವಾಗಿ, ಅಕ್ರಮವಾಗಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಈ ವಿಚಾರವನ್ನು ಮರೆಮಾಚುವ ಕೆಲಸ ಮುಖ್ಯಮಂತ್ರಿಯಿಂದ ಆಗುತ್ತಿದೆ” ಎಂದು ಆರೋಪಿಸಿದರು.

ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ಮತ್ತಷ್ಟು ಮಾಹಿತಿ ನೀಡುವುದಾಗಿ ಕುಮಾರಸ್ವಾಮಿ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande