ಅಜರ್ಬೈಜಾನ್ನಿಂದ ವಾಪಸ್: ನಕಲಿ ಔಷಧಿ ಜಾಲದ ಪ್ರಮುಖ ಆರೋಪಿ ಎಸ್ಐಟಿ ವಶಕ್ಕೆ
ನಕಲಿ ಔಷಧಿ ಜಾಲದ ಪ್ರಮುಖ ಆರೋಪಿ ಎಸ್ಐಟಿ ವಶಕ್ಕೆ
fake-drug-racket-prime-accused-prashanth-ranjan-babu-arrested-in-bengaluru


ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):

ಬೆಂಗಳೂರಿನಲ್ಲಿ ಪತ್ತೆಯಾದ ನಕಲಿ ಔಷಧಿ ತಯಾರಿಕೆ ಮತ್ತು ವಿತರಣಾ ಜಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪ್ರಶಾಂತ್ ರಂಜನ್ ಬಾಬುವನ್ನು ವಿಶೇಷ ತನಿಖಾ ತಂಡ ಸೋಮವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ.

ನಕಲಿ ಔಷಧಿಗಳ ಜಾಲ ಬಯಲಾದ ಬಳಿಕ ಪ್ರಶಾಂತ್ ರಂಜನ್ ಬಾಬು ಅಜರ್ಬೈಜಾನ್ಗೆ ಪರಾರಿಯಾಗಿದ್ದ ಎನ್ನಲಾಗಿದೆ. ತನಿಖಾ ತಂಡ ಆತನ ಸ್ಥಳವನ್ನು ಪತ್ತೆಹಚ್ಚಿ ಭಾರತಕ್ಕೆ ಮರಳುವಂತೆ ಒತ್ತಡ ಹೇರಿತ್ತು. ಇದರ ಬೆನ್ನಲ್ಲೇ ಸೋಮವಾರ ಬೆಳಗಿನ ಜಾವ ಭಾರತಕ್ಕೆ ಮರಳಿದ ಆತನನ್ನು ವಿಮಾನ ನಿಲ್ದಾಣದಲ್ಲೇ ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲು ಎಸ್ಐಟಿ ಮನವಿ ಮಾಡುವ ಸಾಧ್ಯತೆ ಇದೆ.

ನಕಲಿ ಔಷಧಿ ಜಾಲದ ವ್ಯಾಪ್ತಿ, ಔಷಧಿಗಳ ತಯಾರಿಕೆ ಹಾಗೂ ವಿತರಣೆ ನಡೆದ ಸ್ಥಳಗಳು ಮತ್ತು ಈ ಅಕ್ರಮ ದಂಧೆ ಎಷ್ಟು ಕಾಲದಿಂದ ನಡೆಯುತ್ತಿತ್ತು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಪ್ರಶಾಂತ್ ರಂಜನ್ ಬಾಬು ವಿಚಾರಣೆಯಿಂದ ಜಾಲದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳು ಹಾಗೂ ನಕಲಿ ಔಷಧಿಗಳ ತಯಾರಿಕೆ ಮತ್ತು ವಿತರಣೆಯ ಕುರಿತಂತೆ ಹೆಚ್ಚಿನ ಮಾಹಿತಿ ಲಭ್ಯವಾಗುವ ನಿರೀಕ್ಷೆಯಿದೆ.

₹5 ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಿ ವಶ: ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ನಡೆದಿದ್ದ ಎನ್ನಲಾದ ನಕಲಿ ಔಷಧಿ ದಂಧೆಯಲ್ಲಿ ₹5 ಕೋಟಿಗೂ ಅಧಿಕ ಮೌಲ್ಯದ ನಕಲಿ, ಅವಧಿ ಮೀರಿದ ಹಾಗೂ ಮರುಲೇಬಲ್ ಮಾಡಲಾದ ಜೀವ ರಕ್ಷಕ, ಐಸಿಯು ಮತ್ತು ಕ್ಯಾನ್ಸರ್ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಎಸ್ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ಕ್ರುಪಾ ಹೆಲ್ತ್ಕೇರ್ ಮಾಲೀಕ ವೀರೇಶ್ ಕುಮಾರ್ ಜೈನ್ನನ್ನು ಬಂಧಿಸಲಾಗಿತ್ತು.

ಈ ಜಾಲದ ಮೂಲಕ 90ಕ್ಕೂ ಹೆಚ್ಚು ಆಸ್ಪತ್ರೆ ಮತ್ತು ಕ್ಲಿನಿಕ್ಗಳಿಗೆ ಔಷಧಿ ಪೂರೈಕೆಯಾಗಿದ್ದ ಆರೋಪ ಕೇಳಿಬಂದಿತ್ತು.

ಪ್ರಕರಣದ ತನಿಖೆ ಕರ್ನಾಟಕದ ವಿವಿಧೆಡೆ ಮಾತ್ರವಲ್ಲದೆ ಹರಿಯಾಣ, ಹಿಮಾಚಲ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೂ ವಿಸ್ತರಿಸಿತ್ತು.

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪ್ರಕರಣಕ್ಕೆ ಸಂಬಂಧಿಸಿದ ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಹಾಗೂ ವಿತರಕರ 16 ಔಷಧ ಪರವಾನಗಿಗಳನ್ನು ರದ್ದುಗೊಳಿಸಿ, ಎಂಟು ಪರವಾನಗಿಗಳನ್ನು ಅಮಾನತುಗೊಳಿಸಿದೆ.ಅಮಾನತುಗೊಂಡ ಪರವಾನಗಿಗಳಲ್ಲಿ ಫೈಜರ್ C&F ಡಿಪೋ ಕೂಡ ಸೇರಿದೆ.

ತನಿಖೆಗೆ ಸಹಕರಿಸದಿರುವುದು ಹಾಗೂ ವಶಪಡಿಸಿಕೊಂಡ ನಕಲಿ ಔಷಧಿಗಳಲ್ಲಿರುವ ರಾಸಾಯನಿಕ ಅಂಶಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲು ಅಗತ್ಯವಿರುವ ಉಲ್ಲೇಖ ಮಾದರಿಗಳನ್ನು ನೀಡದಿರುವ ಆರೋಪವೂ ಸಂಸ್ಥೆಯ ವಿರುದ್ಧ ಕೇಳಿಬಂದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ರೋಗಿಗಳ ಆರೋಗ್ಯದ ಮೇಲೂ ನಿಗಾ: ನಕಲಿ ಕ್ಯಾನ್ಸರ್ ಹಾಗೂ ತುರ್ತು ಚಿಕಿತ್ಸಾ ಔಷಧಿಗಳು ವಿತರಿಸಲ್ಪಟ್ಟಿರುವ ಹಿನ್ನೆಲೆಯಲ್ಲಿ ಅವುಗಳನ್ನು ಬಳಸಿರುವ ಸಾಧ್ಯತೆಯಿರುವ ರೋಗಿಗಳನ್ನು ಪತ್ತೆಹಚ್ಚಿ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ನಕಲಿ ಔಷಧಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಔಷಧಿಗಳ ಲೇಬಲ್, ಪ್ಯಾಕೇಜಿಂಗ್ ಹಾಗೂ QR ಕೋಡ್ಗಳನ್ನು ಪರಿಶೀಲಿಸಬೇಕು.

QR ಕೋಡ್ ಸ್ಕ್ಯಾನ್ ಆಗದಿರುವುದು ಸೇರಿದಂತೆ ಅನುಮಾನಾಸ್ಪದ ಅಂಶಗಳು ಕಂಡುಬಂದರೆ ಔಷಧ ನಿಯಂತ್ರಣ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಇಲಾಖೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande