ಭಾಷಾ ವೈವಿಧ್ಯತೆ ದೇಶದ ದೊಡ್ಡ ಶಕ್ತಿ, ಸಾಂಸ್ಕೃತಿಕ ಬಂಡವಾಳ: ಅಮಿತ್ ಶಾ
ನವದೆಹಲಿ, ಸೆಪ್ಟೆಂಬರ್ 28: ಭಾರತದ ಭಾಷಾ ವೈವಿಧ್ಯತೆ ದೌರ್ಬಲ್ಯವಲ್ಲ, ದೇಶದ ಅತ್ಯಂತ ದೊಡ್ಡ ಶಕ್ತಿ ಹಾಗೂ ಸಾಂಸ್ಕೃತಿಕ ಬಂಡವಾಳವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು. ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧ ಮಂಡಳಿಯಲ್ಲಿ ಆಯೋಜಿಸಿದ್ದ ‘ಹಿಂದಿ ಪಾಕ್ಷಿಕ ಸಮಾರೋಪ ಸಮಾರಂ
केन्द्रीय मंत्री अमित शाह संबोधित करते हुए।


ನವದೆಹಲಿ, ಸೆಪ್ಟೆಂಬರ್ 28:

ಭಾರತದ ಭಾಷಾ ವೈವಿಧ್ಯತೆ ದೌರ್ಬಲ್ಯವಲ್ಲ, ದೇಶದ ಅತ್ಯಂತ ದೊಡ್ಡ ಶಕ್ತಿ ಹಾಗೂ ಸಾಂಸ್ಕೃತಿಕ ಬಂಡವಾಳವಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದರು.

ನವದೆಹಲಿಯ ಭಾರತೀಯ ಸಾಂಸ್ಕೃತಿಕ ಸಂಬಂಧ ಮಂಡಳಿಯಲ್ಲಿ ಆಯೋಜಿಸಿದ್ದ ‘ಹಿಂದಿ ಪಾಕ್ಷಿಕ ಸಮಾರೋಪ ಸಮಾರಂಭ’ಕ್ಕೆ ಸೋಮವಾರ ವರ್ಚುವಲ್ ಮೂಲಕ ಸಂದೇಶ ನೀಡಿದ ಅವರು, ಯೋಗ, ಆಯುರ್ವೇದ ಮತ್ತು ಭಾರತೀಯ ಸಂಸ್ಕೃತಿಯ ಜಾಗತಿಕ ಪ್ರಸಾರ ನಮ್ಮ ಭಾಷೆಗಳ ಮೂಲಕವೇ ಸಾಧ್ಯವಾಗಿದೆ ಎಂದರು. ‘ಭಾರತ ನನ್ನ ಹೃದಯದಲ್ಲಿ ನೆಲೆಸಿದೆ’ ಎಂಬ ವಿಷಯದಡಿ ಕಾರ್ಯಕ್ರಮ ನಡೆಯಿತು.

ಹಿಂದಿ ಯಾವುದೇ ಪ್ರಾದೇಶಿಕ ಭಾಷೆಯ ಪ್ರತಿಸ್ಪರ್ಧಿಯಲ್ಲ. ಬದಲಾಗಿ ಎಲ್ಲ ಭಾರತೀಯ ಭಾಷೆಗಳ ನಡುವೆ ಆತ್ಮೀಯ ಸಂವಹನ, ಸಂಪರ್ಕ ಮತ್ತು ಸಮನ್ವಯಕ್ಕೆ ಪ್ರಮುಖ ಕೊಂಡಿಯಾಗಿದೆ ಎಂದು ಅಮಿತ್ ಶಾ ಹೇಳಿದರು. ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ಸಮಾಜದ ಸ್ಮರಣೆ ಹಾಗೂ ಆತ್ಮಪ್ರಜ್ಞೆಯಾಗಿದೆ. ದೇಶದ ಎಲ್ಲ ಭಾಷೆಗಳ ಗೌರವ, ಸಂರಕ್ಷಣೆ ಮತ್ತು ಅಭಿವೃದ್ಧಿಯೊಂದಿಗೆ ಹಿಂದಿಯ ಸಮಗ್ರ ಬೆಳವಣಿಗೆ ಸಾಗಬೇಕು ಎಂದರು.

ಯುವಕರು ಮತ್ತು ಪೋಷಕರು ಜಗತ್ತಿನ ವಿವಿಧ ಭಾಷೆಗಳನ್ನು ಕಲಿಯಬೇಕು. ಆದರೆ ಮಾತೃಭಾಷೆಯನ್ನು ಎಂದಿಗೂ ತೊರೆಯಬಾರದು ಎಂದು ಅವರು ಕರೆ ನೀಡಿದರು. ಭಾಷೆ ಮಾತನಾಡುವುದರಲ್ಲಿ ಕೀಳರಿಮೆ ಅಥವಾ ಕೀಳುಭಾವನೆ ಹೊಂದುವುದು ದೊಡ್ಡ ತಪ್ಪು. ಭಾಷೆಯೇ ವ್ಯಕ್ತಿಯನ್ನು ತನ್ನ ಬೇರುಗಳು, ಇತಿಹಾಸ ಮತ್ತು ಸಂಸ್ಕೃತಿಯೊಂದಿಗೆ ಸಂಪರ್ಕಿಸುತ್ತದೆ ಎಂದು ಹೇಳಿದರು.

ಹಿಂದಿಯನ್ನು ಜನಸಂವಹನದ ಮಾಧ್ಯಮವಾಗಿ ಬೆಳೆಸುವಲ್ಲಿ ಮಾತೃಭಾಷೆ ಹಿಂದಿಯಲ್ಲದ ಹಲವು ಗಣ್ಯರ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಉಲ್ಲೇಖಿಸಿದರು. ಗುಜರಾತಿ ಭಾಷಿಕರಾಗಿದ್ದ ಸ್ವಾಮಿ ದಯಾನಂದ ಸರಸ್ವತಿ ಅವರು ‘ಸತ್ಯಾರ್ಥ ಪ್ರಕಾಶ’ ಕೃತಿಯನ್ನು ಹಿಂದಿಯಲ್ಲಿ ರಚಿಸಿದರು. ಮಹಾತ್ಮ ಗಾಂಧೀಜಿ 1918ರಲ್ಲಿ ಮದ್ರಾಸ್‌ನಲ್ಲಿ ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆ’ಗೆ ಅಡಿಗಲ್ಲು ಹಾಕಿದರು. ಬಂಗಾಳಿ ಭಾಷಿಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ‘ಆಜಾದ್ ಹಿಂದ್ ಫೌಜ್’ನ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬಳಸಿದರು ಮತ್ತು ‘ಜೈ ಹಿಂದ್’ ಎಂಬ ಘೋಷಣೆಯನ್ನು ದೇಶಕ್ಕೆ ನೀಡಿದರು ಎಂದು ಹೇಳಿದರು.

ಸ್ವಾತಂತ್ರ್ಯದ ಬಳಿಕ ದೀರ್ಘಕಾಲ ಸ್ವಭಾಷೆ, ಸ್ವಸಂಸ್ಕೃತಿ ಮತ್ತು ಸ್ವಾಭಿಮಾನದ ವಿಚಾರಗಳು ನಿರ್ಲಕ್ಷ್ಯಕ್ಕೊಳಗಾಗಿದ್ದವು ಎಂದು ಅಮಿತ್ ಶಾ ಹೇಳಿದರು.

ಬ್ರಿಟಿಷರ ಕಾಲದ ಹಳೆಯ ಕಾನೂನುಗಳ ಬದಲಿಗೆ ಜನಕೇಂದ್ರಿತ ಮೂರು ಹೊಸ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಜಾರಿಗೆ ತರಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಭಾರತೀಯ ಭಾಷೆಗಳಲ್ಲಿಯೂ ನಡೆಸಲಾಗುತ್ತಿದೆ ಎಂದರು.

78ನೇ ಸ್ವಾತಂತ್ರ್ಯೋತ್ಸವದಂದು ಘೋಷಿಸಲಾದ ‘ಶಕ್ತಿಯ ಸಪ್ತಧಾರೆ’ಯಲ್ಲಿ ಭಾಷೆ ಭಾರತದ ‘ಮೃದು ಶಕ್ತಿ’ಯ ಪ್ರಮುಖ ಆಧಾರವಾಗಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ನೆರವಿನಿಂದ ಭಾರತೀಯ ಭಾಷೆಗಳು ಸುವರ್ಣ ಯುಗವನ್ನು ಪ್ರವೇಶಿಸಿವೆ ಎಂದು ಅಮಿತ್ ಶಾ ಹೇಳಿದರು. ರಾಜಭಾಷಾ ಇಲಾಖೆಯು ಅಭಿವೃದ್ಧಿಪಡಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ಸಾಧನಗಳು ವಿವಿಧ ಭಾಷೆಗಳ ನಡುವಿನ ಸಂವಹನವನ್ನು ಸುಲಭಗೊಳಿಸುತ್ತಿವೆ. 8.27 ಲಕ್ಷಕ್ಕೂ ಅಧಿಕ ನಮೂದುಗಳನ್ನು ಹೊಂದಿರುವ ಡಿಜಿಟಲ್ ನಿಘಂಟು ‘ಹಿಂದಿ ಶಬ್ದ ಸಿಂಧು’ ಜ್ಞಾನ ಹಂಚಿಕೆಯ ಪ್ರಮುಖ ಮಾಧ್ಯಮವಾಗಿದೆ ಎಂದರು.

2024ರಲ್ಲಿ ಸ್ಥಾಪಿಸಲಾದ ಭಾರತೀಯ ಭಾಷಾ ವಿಭಾಗವು ಆಡಳಿತಾತ್ಮಕ ಕಾರ್ಯಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಸುಲಭಗೊಳಿಸುತ್ತಿದೆ. ಸಂಸದೀಯ ರಾಜಭಾಷಾ ಸಮಿತಿಯು ತನ್ನ ವರದಿಯ ನಾಲ್ಕು ಹೊಸ ಸಂಪುಟಗಳನ್ನು ರಾಷ್ಟ್ರಪತಿಗೆ ಸಲ್ಲಿಸಿದೆ ಎಂದು ಅವರು ತಿಳಿಸಿದರು.

ರಾಷ್ಟ್ರಗೀತೆ ‘ವಂದೇ ಮಾತರಂ’ ರಚನೆಯ 150ನೇ ವರ್ಷವನ್ನು ಉಲ್ಲೇಖಿಸಿದ ಅಮಿತ್ ಶಾ, 2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣಕ್ಕೆ ಹಿಂದಿ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳನ್ನು ಬಲಿಷ್ಠ ಮಾಧ್ಯಮಗಳನ್ನಾಗಿ ಮಾಡುವ ಸಂಕಲ್ಪವನ್ನು ಎಲ್ಲ ನಾಗರಿಕರು ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಹಿತ್ಯ, ಕಲೆ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಪದ್ಮಶ್ರೀ ಪುರಸ್ಕೃತರು ಸೇರಿದಂತೆ 10 ಗಣ್ಯರನ್ನು ಸನ್ಮಾನಿಸಲಾಯಿತು. ಪದ್ಮಶ್ರೀ ಪ್ರೊ. ಅಶೋಕ ಚಕ್ರಧರ್, ಪದ್ಮಶ್ರೀ ಡಾ. ರಂಜನಾ ಗೌಹರ್, ಪದ್ಮಶ್ರೀ ಡಾ. ಜತಿನ್ ದಾಸ್, ಪದ್ಮಶ್ರೀ ಡಾ. ಮೊಹ್ಸಿನ್ ವಲಿ, ಪದ್ಮಶ್ರೀ ವಿ.ಎಸ್. ಮೆಹ್ತಾ, ಪದ್ಮಶ್ರೀ ಡಾ. ದಿನೇಶ್ ಭಾರ್ಗವ, ಪದ್ಮಶ್ರೀ ಡಾ. ಪುರುಷೋತ್ತಮ ದಧೀಚ್ (ಪುರು), ಪದ್ಮಶ್ರೀ ಭೇರು ಸಿಂಗ್ ಚೌಹಾಣ್, ಪ್ರೊ. ವಿಮಲೇಶ್ ಕಾಂತಿ ವರ್ಮಾ ಮತ್ತು ಅನಿತಾ ವರ್ಮಾ ಅವರು ಸನ್ಮಾನಿತರಾದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande