
ವಿಜಯಪುರ, 28 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಸವನಾಡಿನ ಯುವ ಕ್ರೀಡಾಪಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ವಿಜಯಪುರ ಜಿಲ್ಲೆಯ ಕ್ರೀಡಾ ಕ್ಷೇತ್ರದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ತಿಳಿಸಿದ್ದಾರೆ
ಬಬಲೇಶ್ವರ ವಿಧಾನಸಭಾ ಕ್ಷೇತ್ರದ ತಿಗಣಿ ಬಿದರಿ ಗ್ರಾಮದ ಯುವಕ ಸಚಿನ್ ಸಾಳುಂಕೆ ಅವರು ಕೆನಡಾದಲ್ಲಿ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ.
105 ಕೆ.ಜಿ. ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ ಸಚಿನ್ ಸಾಳುಂಕೆ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದು, 310 ಕೆ.ಜಿ. ಸ್ಕ್ವಾಟ್, 180 ಕೆ.ಜಿ. ಬೆಂಚ್ ಪ್ರೆಸ್ ಹಾಗೂ 270 ಕೆ.ಜಿ. ಡೆಡ್ಲಿಫ್ಟ್ ಮೂಲಕ ಒಟ್ಟು 760 ಕೆ.ಜಿ. ಭಾರ ಎತ್ತುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಸ್ಪರ್ಧೆಯಲ್ಲಿ ಇಂಗ್ಲೆಂಡ್ನ ಎದುರಾಳಿಯೊಂದಿಗೆ ತೀವ್ರ ಪೈಪೋಟಿ ನಡೆಸಿದ ಅವರು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಸಚಿನ್ ಸಾಳುಂಕೆ ಅವರು ಕಳೆದ ಐದು ವರ್ಷಗಳಿಂದ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ನಿರಂತರವಾಗಿ ಕಠಿಣ ಪರಿಶ್ರಮ ಹಾಗೂ ಶಿಸ್ತುಬದ್ಧ ತರಬೇತಿಯೊಂದಿಗೆ ಮುನ್ನಡೆಯುತ್ತಿದ್ದಾರೆ. ಒಟ್ಟು ಹತ್ತು ವರ್ಷಗಳಿಂದ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು, ವಿವಿಧ ಹಂತಗಳಲ್ಲಿ ತರಬೇತಿ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಕ್ರೀಡಾ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಸಚಿನ್ ಅವರು ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಗೆದ್ದಿರುವುದು ವಿಜಯಪುರ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ. ಸೀಮಿತ ಸೌಲಭ್ಯಗಳ ನಡುವೆಯೂ ನಿರಂತರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಕ್ರೀಡಾ ಶಿಸ್ತಿನ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂಬುದಕ್ಕೆ ಅವರ ಸಾಧನೆ ಉದಾಹರಣೆಯಾಗಿದೆ.
ಸಚಿನ್ ಸಾಳುಂಕೆ ಅವರ ಸಾಧನೆಯನ್ನು ಅಭಿನಂದಿಸಿರುವ ಸಚಿವ ಎಂ.ಬಿ. ಪಾಟೀಲ, “ಬಸವನಾಡಿನ ಹೆಮ್ಮೆ, ದೇಶದ ಕೀರ್ತಿಯಾದ ಸಚಿನ್ ಸಾಳುಂಕೆ ಅವರು ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿರುವುದು ವಿಜಯಪುರ ಜಿಲ್ಲೆಗೆ ಹೆಮ್ಮೆಯ ಕ್ಷಣ. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕೀರ್ತಿ ಹೆಚ್ಚಿಸಿರುವ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಸಚಿನ್ ಅವರು ಇನ್ನಷ್ಟು ಎತ್ತರದ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿರುವ ಅವರು, “ವಿಜಯಪುರದ ಮಣ್ಣಿನ ಶಕ್ತಿ ಜಗತ್ತಿನ ವೇದಿಕೆಯಲ್ಲಿ ಮತ್ತೊಮ್ಮೆ ಮೊಳಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ತಿಗಣಿ ಬಿದರಿಯಂತಹ ಗ್ರಾಮೀಣ ಪ್ರದೇಶದಿಂದ ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆಯವರೆಗೆ ಸಚಿನ್ ಸಾಳುಂಕೆ ಅವರು ತಲುಪಿರುವುದು ಸ್ಥಳೀಯ ಕ್ರೀಡಾಭಿಮಾನಿಗಳಲ್ಲಿಯೂ ಸಂತಸ ಮೂಡಿಸಿದೆ. ಅವರ ಸಾಧನೆಗೆ ಗ್ರಾಮಸ್ಥರು, ಕ್ರೀಡಾಪಟುಗಳು, ಅಭಿಮಾನಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಸಚಿನ್ ಅವರ ಮುಂದಿನ ಕ್ರೀಡಾ ಪಯಣದಲ್ಲಿಯೂ ಇದೇ ರೀತಿಯ ಯಶಸ್ಸು ಮುಂದುವರಿಯಲಿ, ದೇಶಕ್ಕಾಗಿ ಮತ್ತಷ್ಟು ಪದಕಗಳನ್ನು ಗೆದ್ದು ವಿಜಯಪುರ ಹಾಗೂ ಕರ್ನಾಟಕದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಲಿ ಎಂಬ ಆಶಯ ವ್ಯಕ್ತವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande