ಬ್ಯಾಂಕ್ ನೌಕರರ ಮುಷ್ಕರ ರದ್ದು: ಇಂದು ಎಂದಿನಂತೆ ಬ್ಯಾಂಕಿಂಗ್ ಸೇವೆ
ಐಬಿಎ ಜೊತೆಗಿನ ಮಾತುಕತೆ ಬಳಿಕ ಬ್ಯಾಂಕ್ಗಳ ಮೂರು ದಿನಗಳ ಮುಷ್ಕರ ಮುಂದೂಡಿಕೆ: ಇಂದು ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಣೆ
बैंक के लोगो का प्रतीकात्मक चित्र


ನವದೆಹಲಿ, 28 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್‌ (ಐಬಿಎ) ಜೊತೆ ನಡೆದ ಮಾತುಕತೆಯ ಬಳಿಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧಿಕಾರಿಗಳು ಮತ್ತು ನೌಕರರ ಸಂಘಟನೆಗಳು ಕರೆ ನೀಡಿದ್ದ ಮೂರು ದಿನಗಳ ದೇಶವ್ಯಾಪಿ ಮುಷ್ಕರವನ್ನು ಮುಂದೂಡಿವೆ. ಹೀಗಾಗಿ ಸೋಮವಾರ ಬ್ಯಾಂಕ್‌ಗಳು ಎಂದಿನಂತೆ ತೆರೆದು ಸಾಮಾನ್ಯ ಬ್ಯಾಂಕಿಂಗ್ ಸೇವೆಗಳು ಮುಂದುವರಿಯಲಿವೆ.

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್‌ (ಯುಎಫ್‌ಬಿಯು) ಸೋಮವಾರದಿಂದ ಮೂರು ದಿನಗಳ ಮುಷ್ಕರಕ್ಕೆ ಕರೆ ನೀಡಿತ್ತು. ಬ್ಯಾಂಕ್‌ಗಳ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಅವಧಿಯಲ್ಲೇ ಮುಷ್ಕರ ನಡೆಸಲು ಉದ್ದೇಶಿಸಲಾಗಿತ್ತು. ವಾರದಲ್ಲಿ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಬ್ಯಾಂಕ್‌ ನೌಕರರ ಸಂಘಟನೆಗಳ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.

ಅಧಿಕೃತ ಮೂಲಗಳ ಪ್ರಕಾರ, ಭಾನುವಾರ ತಡರಾತ್ರಿ ಐಬಿಎ ಜೊತೆ ನಡೆದ ಮಾತುಕತೆಯಲ್ಲಿ ಬ್ಯಾಂಕ್‌ ನೌಕರರ ಸಂಘಟನೆಗಳ ಬೇಡಿಕೆಗಳ ಕುರಿತು ಭರವಸೆ ದೊರೆತ ಹಿನ್ನೆಲೆಯಲ್ಲಿ ಮುಷ್ಕರವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ.

ಉಳಿದ ಶನಿವಾರಗಳನ್ನು ರಜಾದಿನಗಳನ್ನಾಗಿ ಘೋಷಿಸುವ ವಿಚಾರದಲ್ಲಿ ಚರ್ಚೆ ನಡೆಸಲು ಐಬಿಎ ಮತ್ತು ಯುಎಫ್‌ಬಿಯು ವತಿಯಿಂದ ಉನ್ನತ ಮಟ್ಟದ ಸಮಿತಿಯನ್ನು ತಕ್ಷಣ ರಚಿಸಲಾಗುವುದು ಎಂದು ಯುಎಫ್‌ಬಿಯು ಪ್ರಕಟಣೆಯಲ್ಲಿ ತಿಳಿಸಿದೆ. ಸಮಿತಿಯು ಸಾಧ್ಯವಿರುವ ಎಲ್ಲ ಆಯ್ಕೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಎಲ್ಲರೊಂದಿಗೆ ಚರ್ಚೆ ನಡೆಸಲಿದೆ. ಗ್ರಾಹಕರು ಸೇರಿದಂತೆ ಎಲ್ಲ ಪಾಲುದಾರರಿಗೆ ಒಪ್ಪಿಗೆಯಾಗುವ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ.

ಮುಷ್ಕರ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಬ್ಯಾಂಕ್‌ಗಳು ತೆರೆದಿರಲಿದ್ದು, ನಿಯಮಿತ ಬ್ಯಾಂಕಿಂಗ್ ಸೇವೆಗಳು ಮುಂದುವರಿಯಲಿವೆ ಎಂದು ಬ್ಯಾಂಕ್‌ ನೌಕರರ ಸಂಘಟನೆಗಳು ತಿಳಿಸಿವೆ.

-------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande