ಅಫ್ಘಾನಿಸ್ತಾನದ ನೂರಿಸ್ತಾನದಲ್ಲಿ 28 ಉಗ್ರರು ಹತ: ಪಾಕಿಸ್ತಾನದಿಂದ ನುಸುಳುವಿಕೆಗೆ ನೆರವು ಆರೋಪ
ಕಾಬೂಲ್, 28 ಸೆಪ್ಟೆಂಬರ್(ಹಿ.ಸ.): ಆ್ಯಂಕರ್: ಅಫ್ಘಾನಿಸ್ತಾನದ ನೂರಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ 28 ಉಗ್ರರು ಹತರಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಹೇಳಿದೆ. ಪಾಕಿಸ್ತಾನದಿಂದ ಬಂದ ಶಸ್ತ್ರಸಜ್ಜಿತ ಗುಂಪ
अफगान रक्षा मंत्रालय द्वारा साेशल मीडिया प्लेटफार्म एक्स पर जारी पाेस्ट


ಕಾಬೂಲ್, 28 ಸೆಪ್ಟೆಂಬರ್(ಹಿ.ಸ.):

ಆ್ಯಂಕರ್:

ಅಫ್ಘಾನಿಸ್ತಾನದ ನೂರಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಭಾನುವಾರ ನಡೆಸಿದ ಕಾರ್ಯಾಚರಣೆಯಲ್ಲಿ 28 ಉಗ್ರರು ಹತರಾಗಿದ್ದು, 32 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಹೇಳಿದೆ.

ಪಾಕಿಸ್ತಾನದಿಂದ ಬಂದ ಶಸ್ತ್ರಸಜ್ಜಿತ ಗುಂಪೊಂದು ಗಡಿ ದಾಟಿ ಅಫ್ಘಾನಿಸ್ತಾನಕ್ಕೆ ನುಸುಳಲು ಯತ್ನಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ನುಸುಳುವಿಕೆಗೆ ಪಾಕಿಸ್ತಾನದ ಶಸ್ತ್ರಸಜ್ಜಿತ ಪಡೆಗಳು ನೆರವು ನೀಡಿವೆ ಎಂದು ಅಫ್ಘಾನ್‌ ಅಧಿಕಾರಿಗಳು ಆರೋಪಿಸಿದ್ದಾರೆ.

ಬಲೂಚಿಸ್ತಾನದ ಆನ್‌ಲೈನ್‌ ಸುದ್ದಿ ಜಾಲತಾಣ ‘ದಿ ಬಲೂಚಿಸ್ತಾನ್ ಪೋಸ್ಟ್‌’ ವರದಿ ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ನೆರವಿನ ಹೆಸರಿನಲ್ಲಿ ಅಫ್ಘಾನ್‌ ಸೇನೆಯ ಮಾಜಿ ಸೈನಿಕರನ್ನು ನೇಮಕ ಮಾಡಿಕೊಂಡು, ಅವರಿಗೆ ತರಬೇತಿ ನೀಡಿ ಬಳಿಕ ನೂರಿಸ್ತಾನದತ್ತ ಕಳುಹಿಸಲಾಗುತ್ತಿದೆ ಎಂದು ಅಫ್ಘಾನ್‌ ರಕ್ಷಣಾ ಸಚಿವಾಲಯ ಆರೋಪಿಸಿದೆ. ಆದರೆ ಈ ಆರೋಪಗಳಿಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.

ಇದಕ್ಕೂ ಒಂದು ದಿನ ಮೊದಲು, ಶನಿವಾರ ಅಫ್ಘಾನ್‌ ಅಧಿಕಾರಿಗಳು ಕಮದೇಶ್‌ ಜಿಲ್ಲೆಯಲ್ಲಿ ಡ್ಯುರಂಡ್‌ ಗಡಿಯ ಸಮೀಪ ನುಸುಳುವಿಕೆಯ ಪ್ರಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಹೇಳಿದ್ದರು. ಕಾರ್ಯಾಚರಣೆಯಲ್ಲಿ 10 ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಅಫ್ಘಾನಿಸ್ತಾನ್‌ ಫ್ರೀಡಂ ಫ್ರಂಟ್‌ನ ಕೆಲವು ಸದಸ್ಯರು ಇಸ್ಲಾಮಿಕ್‌ ಸ್ಟೇಟ್‌ ಜತೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಆರೋಪಿಸಲಾಗಿತ್ತು.

ಆದರೆ, ಅಫ್ಘಾನಿಸ್ತಾನ್‌ ಫ್ರೀಡಂ ಫ್ರಂಟ್‌ ಈ ಘಟನೆಗೆ ಭಿನ್ನವಾದ ವಿವರಣೆ ನೀಡಿದೆ. ಶನಿವಾರ ಬೆಳಗ್ಗೆ ತಾಲಿಬಾನ್‌ ಪಡೆಗಳು ಡ್ರೋನ್‌ ಮೂಲಕ ತಮ್ಮ ನೆಲೆಗಳ ಮೇಲೆ ದಾಳಿ ನಡೆಸಿದವು. ಇದಕ್ಕೆ ಪ್ರತಿಯಾಗಿ ತಮ್ಮ ಹೋರಾಟಗಾರರು ದಾಳಿ ನಡೆಸಿ ಹಲವು ಭದ್ರತಾ ಠಾಣೆಗಳನ್ನು ವಶಕ್ಕೆ ಪಡೆದರು ಎಂದು ಸಂಘಟನೆ ಹೇಳಿದೆ.

ತಾಲಿಬಾನ್‌ ಪಡೆಗಳು ಅರಂಡು ಮತ್ತು ಕಮದೇಶ್‌ನ ಕೆಲವು ಭಾಗಗಳಿಂದ ಹಿಂದೆ ಸರಿದು ನೆರೆಯ ಕುನಾರ್‌ ಪ್ರಾಂತ್ಯದ ನಾರಿ ಜಿಲ್ಲೆಯತ್ತ ತೆರಳಿವೆ ಎಂದು ಅಫ್ಘಾನಿಸ್ತಾನ್‌ ಫ್ರೀಡಂ ಫ್ರಂಟ್‌ ಹೇಳಿಕೊಂಡಿದೆ.

ಕಾಳಗದ ಬಳಿಕ ಬಿಡುಗಡೆಯಾದ ಕೆಲವು ವಿಡಿಯೊಗಳಲ್ಲಿ ಬಂಧಿತರಾಗಿರುವವರು, ತಮ್ಮನ್ನು ಇರಾನ್‌ನಿಂದ ಪಾಕಿಸ್ತಾನದ ಚಿತ್ರಾಲ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪಾಕಿಸ್ತಾನದ ಸೇನಾ ಶಿಬಿರಗಳಲ್ಲಿ ತರಬೇತಿ ನೀಡಲಾಗಿತ್ತು ಎಂದು ಹೇಳಿರುವುದು ಕಂಡುಬಂದಿದೆ. ಈ ಹೇಳಿಕೆಗಳಿಗೂ ಸ್ವತಂತ್ರ ದೃಢೀಕರಣ ಲಭ್ಯವಾಗಿಲ್ಲ.

ಸೆ.21ರಂದು ಪಾಕಿಸ್ತಾನವು ಅಫ್ಘಾನಿಸ್ತಾನದೊಳಗೆ ನಡೆಸಿದ ವಾಯುದಾಳಿಗಳ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಆ ದಾಳಿಯಲ್ಲಿ 28 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ, ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಫ್ಘಾನ್‌ ಅಧಿಕಾರಿಗಳು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿನ ವಿಶ್ವಸಂಸ್ಥೆಯ ನೆರವು ಮಿಷನ್‌ ಒಬ್ಬ ಪುರುಷ, ಒಬ್ಬ ಮಹಿಳೆ ಹಾಗೂ ಒಬ್ಬ ಬಾಲಕಿ ಮೃತಪಟ್ಟಿರುವುದನ್ನು ದೃಢಪಡಿಸಿತ್ತು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande