ಬಿಜೆಪಿ ಇತಿಹಾಸವನ್ನು ತಿರುಚಲು ಯತ್ನಿಸುತ್ತಿದೆ: ಅಶೋಕ
ಗದಗ, 27 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:- ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವಿಲ್ಲದ ಬಿಜೆಪಿ ಮತ್ತು ಆರೆಸ್ಸೆಸ್ ಇಂದು ರಾಷ್ಟ್ರಭಕ್ತಿಯ ಗುತ್ತಿಗೆ ಪಡೆದವರಂತೆ ಮಾತನಾಡುವುದು ಹಾಸ್ಯಾಸ್ಪದ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡ
ಫೋಟೋ


ಗದಗ, 27 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:- ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವಿಲ್ಲದ ಬಿಜೆಪಿ ಮತ್ತು ಆರೆಸ್ಸೆಸ್ ಇಂದು ರಾಷ್ಟ್ರಭಕ್ತಿಯ ಗುತ್ತಿಗೆ ಪಡೆದವರಂತೆ ಮಾತನಾಡುವುದು ಹಾಸ್ಯಾಸ್ಪದ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ 'ವಂದೇ ಮಾತರಂ' ಗೀತೆಯನ್ನು ಉದ್ದೇಶಪೂರ್ವಕವಾಗಿ ಮೊಟಕುಗೊಳಿಸಿತು ಎಂದು ಬಿಜೆಪಿ ಇತಿಹಾಸವನ್ನು ತಿರುಚಲು ಯತ್ನಿಸುತ್ತಿದೆ. ಆದರೆ, ಸತ್ಯವೆಂದರೆ ನೇತಾಜಿ ಸುಭಾಷ್ ಚಂದ್ರ ಬೋಸ್, ಪಂಡಿತ್ ಜವಾಹರಲಾಲ್ ನೆಹರು, ಮಹಾತ್ಮ ಗಾಂಧೀಜಿ ಹಾಗೂ ರವೀಂದ್ರನಾಥ ಟ್ಯಾಗೋರ್ ಅವರ ಒಮ್ಮತದ ನಿರ್ಧಾರದಿಂದಲೇ ಈ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

1937ರಲ್ಲಿ 'ವಂದೇ ಮಾತರಂ' ಗೀತೆಯ ನಂತರದ ಚರಣಗಳಲ್ಲಿದ್ದ ಧಾರ್ಮಿಕ ರೂಪಕಗಳ ಬಗ್ಗೆ ವಾದ-ವಿವಾದಗಳು ಎದ್ದಾಗ, ಸ್ವಾತಂತ್ರ್ಯ ಹೋರಾಟದಲ್ಲಿ ಒಡಕು ಮೂಡಬಾರದು ಎಂಬುದು ಮುಖಂಡರ ಆಶಯವಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೇ ಖುದ್ದಾಗಿ, ಈ ಸೂಕ್ಷ್ಮ ವಿಷಯದಲ್ಲಿ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಮಾರ್ಗದರ್ಶನ ಪಡೆಯೋಣ ಎಂದು ನೆಹರೂ ಅವರಿಗೆ ಸಲಹೆ ನೀಡಿದ್ದರು.

1896ರ ಕಾಂಗ್ರೆಸ್ ಅಧಿವೇಶನದಲ್ಲೇ ಮೊಟ್ಟಮೊದಲ ಬಾರಿಗೆ 'ವಂದೇ ಮಾತರಂ' ಗೀತೆಯನ್ನು ಸ್ವತಃ ರವೀಂದ್ರನಾಥ ಟ್ಯಾಗೋರ್ ಹಾಡಿದ್ದರು. “ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳು ಮಾತೃಭೂಮಿಯ ನೈಸರ್ಗಿಕ ಸೌಂದರ್ಯ, ಜಲ-ಫಲ ಮತ್ತು ತಾಯಿಯ ಮಮತೆಯನ್ನು ಕೊಂಡಾಡುವ ಜಾತ್ಯತೀತ ಹಾಗೂ ಸಾರ್ವತ್ರಿಕ ಭಾವನೆಯನ್ನು ಹೊಂದಿವೆ. ಆದರೆ, ನಂತರದ ಚರಣಗಳು ಬಂಕಿಮಚಂದ್ರರ 'ಆನಂದಮಠ' ಕಾದಂಬರಿಯ ನಿರ್ದಿಷ್ಟ ಧಾರ್ಮಿಕ ಸಂದರ್ಭಕ್ಕೆ ಸೀಮಿತವಾಗಿದ್ದು, ವಿಭಿನ್ನ ಧರ್ಮಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಲು ಮೊದಲ ಎರಡು ಚರಣಗಳೇ ಅತ್ಯಂತ ಪ್ರಸ್ತುತ ಎಂದು ಸ್ಪಷ್ಟಪಡಿಸಿದ್ದರು.

ಟ್ಯಾಗೋರ್ ಅವರ ಈ ರಾಷ್ಟ್ರೀಯ ಹಿತಾಸಕ್ತಿಯ ಸಲಹೆಯನ್ನು ಗೌರವಿಸಿ, 1937ರ ಅಕ್ಟೋಬರ್ 28-29ಎಂದು ಕೊಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧಿಕೃತ ನಿರ್ಣಯ ಅಂಗೀಕರಿಸಲಾಯಿತು. ಈ ಐತಿಹಾಸಿಕ ನಿರ್ಣಯವನ್ನು ಕೈಗೊಂಡ ಸಮಿತಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್, ಜವಾಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಮೌಲಾನಾ ಆಜಾದ್ ಮತ್ತು ಮಹಾತ್ಮ ಗಾಂಧೀಜಿ ಎಲ್ಲರೂ ಉಪಸ್ಥಿತರಿದ್ದು, ಸರ್ವಾನುಮತದಿಂದ ಅನುಮೋದಿಸಿದ್ದರು. ರಾಷ್ಟ್ರದ ಸಮಗ್ರತೆ ಮತ್ತು ಸರ್ವಧರ್ಮೀಯರ ಐಕ್ಯತೆಗಾಗಿ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಗೀತೆಯಾಗಿ ಸಾರ್ವಜನಿಕ ಸಮಾವೇಶಗಳಲ್ಲಿ ಹಾಡಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

ನೇತಾಜಿ ಮತ್ತು ಸರ್ದಾರ್ ಪಟೇಲರ ದೇಶಭಕ್ತಿಯನ್ನು ಬಿಜೆಪಿ ಪ್ರಶ್ನಿಸುತ್ತಿದೆ: 1937ರ ಸಿಡಬ್ಲ್ಯೂಸಿ ನಿರ್ಣಯಕ್ಕೆ ಸಹಿ ಹಾಕಿದವರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಇಬ್ಬರೂ ಇದ್ದರು. ಬಿಜೆಪಿಯ ಪ್ರಕಾರ ಈ ಮಹಾನ್ ನಾಯಕರು ದೇಶದ್ರೋಹಿಗಳೇ?, ಬಿಜೆಪಿಗರು ರವೀಂದ್ರನಾಥ ಟ್ಯಾಗೋರ್ ಅವರಿಗಿಂತ ದೊಡ್ಡ ದೇಶಪ್ರೇಮಿಗಳೇ?. ರಾಷ್ಟ್ರಗೀತೆ 'ಜನಗಣಮನ' ಬರೆದ, 'ವಂದೇ ಮಾತರಂ'ಗೆ ರಾಗ ಸಂಯೋಜಿಸಿ ಹಾಡಿದ ಗುರುದೇವ್ ಟ್ಯಾಗೋರ್ ಅವರ ಆಶಯವನ್ನು ತಿರಸ್ಕರಿಸುವ ಅಧಿಕಾರ ಬಿಜೆಪಿಗೆ ಕೊಟ್ಟವರು ಯಾರು?. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ನಿಮ್ಮ ಪಾತ್ರವೇನು?. ಕಾಂಗ್ರೆಸ್ ನಾಯಕರು ದೇಶದ ಸ್ವಾತಂತ್ರ್ಯ ಮತ್ತು ಒಗ್ಗಟ್ಟಿಗಾಗಿ ಹೋರಾಡುತ್ತಿದ್ದಾಗ ಬ್ರಿಟಿಷರ ಜತೆ ಕೈಜೋಡಿಸಿದ್ದ ಸಂಘಪರಿವಾರಕ್ಕೆ ಇಂದು ಕಾಂಗ್ರೆಸ್ನ ತ್ಯಾಗ ಮತ್ತು ನಿರ್ಧಾರಗಳನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ವಂದೇ ಮಾತರಂ' ಕೇವಲ ಒಂದು ಘೋಷಣೆಯಲ್ಲ, ಅದು ಭಾರತೀಯರೆಲ್ಲರ ಸ್ವಾಭಿಮಾನದ ಸಂಕೇತ. 1937ರಲ್ಲಿ ಟ್ಯಾಗೋರ್, ಬೋಸ್, ನೆಹರೂ ಮತ್ತು ಪಟೇಲರು ತೆಗೆದುಕೊಂಡ ನಿರ್ಧಾರವು ಭಾರತದ ಐಕ್ಯತೆಯನ್ನು ಕಾಪಾಡುವ ದೂರದೃಷ್ಟಿಯ ಹೆಜ್ಜೆಯಾಗಿತ್ತು. ಚುನಾವಣೆ ಹತ್ತಿರ ಬಂದಾಗಲೆಲ್ಲ ಇತಿಹಾಸ ತಿರುಚಿ ಜನರ ಭಾವನೆಗಳೊಂದಿಗೆ ಆಟವಾಡುವ ಬಿಜೆಪಿಯ ಕ್ಷುಲ್ಲಕ ರಾಜಕೀಯವನ್ನು ಕರ್ನಾಟಕದ ಜನತೆ ಎಂದಿಗೂ ಒಪ್ಪುವುದಿಲ್ಲ ಎಂದು ಗದಗ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande