
ಬೆಂಗಳೂರು, 26 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿಲ್ಲ ಎಂದು ಕಾಂಗ್ರೆಸ್ನ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಮೂಲ ಸ್ವರೂಪವನ್ನು ಮರುಸ್ಥಾಪಿಸುವ ಭರವಸೆ ಇನ್ನೂ ಜಾರಿಯಾಗದಿರುವುದಕ್ಕೆ ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
2020ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಮತ್ತು 79ಸಿ ಕಲಂಗಳನ್ನು ಕೈಬಿಟ್ಟಿತ್ತು. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬದಲಾವಣೆಗಳನ್ನು ಸರಿಪಡಿಸಿ ಕಾಯ್ದೆಯ ಮೂಲ ಸ್ವರೂಪವನ್ನು ಮರುಸ್ಥಾಪಿಸುವುದಾಗಿ ಭರವಸೆ ನೀಡಿತ್ತು.
ಆದರೆ ಸರ್ಕಾರ ಅಧಿಕಾರಕ್ಕೆ ಬಂದು ಹಲವು ವರ್ಷಗಳಾದರೂ ಈ ಕುರಿತು ಯಾವುದೇ ತಿದ್ದುಪಡಿ ಪ್ರಸ್ತಾವನೆ ಮುಂದಿಟ್ಟಿಲ್ಲ ಎಂದು ಬಿ.ಆರ್. ಪಾಟೀಲ್ ಆರೋಪಿಸಿದ್ದಾರೆ.
“ನಾನು ಸದನದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದೇನೆ. ಆದರೆ ತಿದ್ದುಪಡಿ ಪ್ರಸ್ತಾವನೆ ಇಲ್ಲ ಎಂದು ಉತ್ತರಿಸಲಾಗಿದೆ. ಹಾಗಾದರೆ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆ ಏಕೆ ನೀಡಲಾಗಿತ್ತು?” ಎಂದು ಬಿ.ಆರ್. ಪಾಟೀಲ್ ಪ್ರಶ್ನಿಸಿದ್ದಾರೆ.
ಈ ವಿಚಾರವನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಈ ಹಿಂದೆ ತರಲಾಗಿತ್ತು ಎಂದು ತಿಳಿಸಿದ್ದಾರೆ. ಬಜೆಟ್ನಲ್ಲಿ ಈ ಬಗ್ಗೆ ಘೋಷಣೆ ಮಾಡುವ ನಿರ್ಧಾರವಾಗಿತ್ತು.
ಆದರೆ ಅಂತಿಮ ಹಂತದಲ್ಲಿ ಬಜೆಟ್ ದಾಖಲೆಯಿಂದ ವಿಷಯವನ್ನು ಕೈಬಿಡಲಾಯಿತು ಎಂದು ಅವರು ಆರೋಪಿಸಿದ್ದಾರೆ. ಪಕ್ಷದ ಹಿರಿಯ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾದ ಸಂದರ್ಭದಲ್ಲೂ ಈ ವಿಚಾರ ಪ್ರಸ್ತಾಪಿಸಿರುವುದಾಗಿ ಹೇಳಿದ್ದಾರೆ.
ಇದೇ ವೇಳೆ, “ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸದಿದ್ದರೆ ಹಿಂದಿನ ಸರ್ಕಾರದ ತಿದ್ದುಪಡಿಗೆ ಬೆಂಬಲ ನೀಡಿದಂತಾಗುತ್ತದೆ. ಹಾಗಾದರೆ ನಮಗೂ ಬಿಜೆಪಿಗೂ ವ್ಯತ್ಯಾಸವೇನು?” ಎಂಬ ಪ್ರಶ್ನೆಯನ್ನು ಬಿ.ಆರ್. ಪಾಟೀಲ್ ಮುಂದಿಟ್ಟಿದ್ದಾರೆ.
ಭೂ ಸುಧಾರಣಾ ಕಾಯ್ದೆಯ ಮೂಲ ಸ್ವರೂಪವನ್ನು ಮರುಸ್ಥಾಪಿಸುವಂತೆ ಒತ್ತಾಯಿಸಿರುವ ಅವರು, ಈ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯುವುದಾಗಿಯೂ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R