
ಬೆಂಗಳೂರು, 26 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:
ನಗರದಲ್ಲಿ ಸೆಪ್ಟೆಂಬರ್ 27ರಂದು 13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಹಾಗೂ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ. ಮ್ಯಾರಥಾನ್ನಲ್ಲಿ 45 ಸಾವಿರಕ್ಕೂ ಹೆಚ್ಚು ಓಟಗಾರರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಶ್ರೀ ಕಂಠೀರವ ಕ್ರೀಡಾಂಗಣದಿಂದ ಪೂರ್ಣ ಮ್ಯಾರಥಾನ್ ಬೆಳಗಿನ ಜಾವ 3.50ಕ್ಕೆ ಆರಂಭವಾಗಲಿದ್ದು, ಹಾಫ್ ಮ್ಯಾರಥಾನ್ ಬೆಳಗ್ಗೆ 6ಕ್ಕೆ, 10ಕೆ ಓಟ 7.30ಕ್ಕೆ ಹಾಗೂ 5ಕೆ ಓಟ 8.15ಕ್ಕೆ ಆರಂಭವಾಗಲಿದೆ. ವಿಕಲಚೇತನರು ಮತ್ತು ದೃಷ್ಟಿದೋಷ ಹೊಂದಿರುವವರಿಗಾಗಿ ವಿಶೇಷ ಓಟ ಬೆಳಗ್ಗೆ 8.20ಕ್ಕೆ ನಡೆಯಲಿದೆ.
ಮ್ಯಾರಥಾನ್ನ ಮಾರ್ಗವು ವಿಧಾನಸೌಧ, ಕಬ್ಬನ್ ಪಾರ್ಕ್ ಹಾಗೂ ಉಲ್ಸೂರು ಕೆರೆ ಸೇರಿದಂತೆ ನಗರದ ಪ್ರಮುಖ ಪ್ರದೇಶಗಳ ಮೂಲಕ ಸಾಗಲಿದೆ. ಈ ಹಿನ್ನೆಲೆಯಲ್ಲಿ ಓಟ ಸಾಗುವ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಅಥವಾ ಮಾರ್ಗ ಬದಲಾವಣೆ ಜಾರಿಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ.
ಮ್ಯಾರಥಾನ್ ಆಯೋಜಕರು ರಸ್ತೆಗಳನ್ನು ಸಾಧ್ಯವಾದಷ್ಟು ಬೇಗ ಸಂಚಾರಕ್ಕೆ ಮುಕ್ತಗೊಳಿಸಲು ನಿಗದಿತ ಕಟ್ಆಫ್ ಸಮಯಗಳನ್ನು ಪಾಲಿಸುತ್ತಿದ್ದಾರೆ. ಓಟಗಾರರು ಹಾಗೂ ಸಾರ್ವಜನಿಕರು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R