
ವಿಜಯಪುರ, 26 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸಿದ್ದಸಿರಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ಗೆ ಸಂಬಂಧಿಸಿದಂತೆ ಕೇಳಿಬಂದಿರುವ ಹಣಕಾಸು ವ್ಯವಹಾರ ಹಾಗೂ ಸಿಬ್ಬಂದಿ ನೇಮಕಾತಿ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ರಾಘವೇಂದ್ರ ಅಣ್ಣಿಗೇರಿ ಆಗ್ರಹಿಸಿದ್ದಾರೆ.
ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಸಿದ್ದಸಿರಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ನಲ್ಲಿ ಉದ್ಯೋಗ ನೀಡುವ ಸಂಬಂಧ ಹಣ ಪಡೆದಿರುವ ಆರೋಪಗಳ ಕುರಿತು ತನಿಖೆ ನಡೆಸುವ ಅಗತ್ಯವಿದೆ. ‘ಇದುವರೆಗೆ ಎಷ್ಟು ಜನರಿಂದ ಹಣ ಪಡೆದು ನೌಕರಿ ನೀಡಲಾಗಿದೆ? ಹಣ ಪಡೆದು ನೌಕರಿ ನೀಡಲು ಸಾಧ್ಯವೇ? ಈ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಆಗ್ರಹಿಸಿದ್ದಾರೆ.
ತಮ್ಮ ವಿರುದ್ಧ ಮಾಡಲಾಗುತ್ತಿರುವ ಹಣ ದುರುಪಯೋಗದ ಆರೋಪಗಳನ್ನು ಅವರು ನಿರಾಕರಿಸಿದರು. ‘ನಾನು ಯಾವುದೇ ಹಣ ದುರುಪಯೋಗ ಮಾಡಿಕೊಂಡಿಲ್ಲ. ಬ್ಯಾಂಕ್ನವರು ಏನು ಹೇಳುತ್ತಿದ್ದರೋ ಅದರಂತೆ ಕಾರ್ಯನಿರ್ವಹಿಸಿದ್ದೇನೆ. ನೀವು ಹಣ ಇಟ್ಟುಕೊಳ್ಳಿ, ನಾವು ಕೇಳಿದಾಗ ವಾಪಸ್ ಕೊಡಿ ಎಂದು ತಿಳಿಸಿದ್ದರು. ಅವರು ಕೇಳಿದಾಗ ಹಣವನ್ನು ಮರಳಿ ನೀಡಿದ್ದೇನೆ’ ಎಂದು ಅಣ್ಣಿಗೇರಿ ಸ್ಪಷ್ಟಪಡಿಸಿದರು.
2025ರಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರು ಬ್ಯಾಂಕ್ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಾವು ರಾಜೀನಾಮೆ ನೀಡಿರುವುದಾಗಿ ತಿಳಿಸಿದ ಅವರು, ‘ನಾನು ಯತ್ನಾಳ ಅವರ ಮನೆಗೆ ತೆರಳಿ ರಾಜೀನಾಮೆ ನೀಡಿ ಬಂದಿದ್ದೇನೆ. ಬ್ಯಾಂಕ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ 14 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ನನ್ನ ಠೇವಣಿ ಹಣ ಹಾಗೂ ಚೆಕ್ಗಳನ್ನು ಮರಳಿಸಿ ಎನ್ಒಸಿ ಕೂಡ ನೀಡಿದ್ದಾರೆ. ಇದೀಗ ನನ್ನ ವಿರುದ್ಧ ಅಪಪ್ರಚಾರ ಹಾಗೂ ತೇಜೋವಧೆ ಮಾಡುವ ಉದ್ದೇಶದಿಂದ ದೂರು ದಾಖಲಿಸಲಾಗಿದೆ’ ಎಂದು ಆರೋಪಿಸಿದರು.
ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ಒಬ್ಬ ವ್ಯಕ್ತಿಯಿಂದ ಮಾತ್ರ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದ ಅಣ್ಣಿಗೇರಿ, ನೇಮಕಾತಿಯಲ್ಲಿ ಆಡಳಿತ ಮಂಡಳಿ ಹಾಗೂ ಸಹಕಾರಿ ಇಲಾಖೆಯ ಅಧಿಕಾರಿಗಳ ಪಾತ್ರವೂ ಇರುತ್ತದೆ. ಹೀಗಾಗಿ ನೇಮಕಾತಿ ಮತ್ತು ಹಣಕಾಸು ವ್ಯವಹಾರಗಳ ಕುರಿತು ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸೆಪ್ಟೆಂಬರ್ 27ರಂದು ನಡೆಯಲಿರುವ ಸಿದ್ದಸಿರಿ ಸಾಮಾನ್ಯ ಸಭೆಗೆ ತಮ್ಮನ್ನು ಆಹ್ವಾನಿಸಬೇಕು ಎಂದು ಅವರು ಆಗ್ರಹಿಸಿದರು. ‘ಸಭೆಗೆ ನನಗೆ ಕರೆಯಿರಿ. ನನ್ನ ಬಳಿ ಇರುವ ದಾಖಲೆಗಳನ್ನು ಹಾಜರುಪಡಿಸಿ ಎಲ್ಲವನ್ನೂ ಸಾಬೀತುಪಡಿಸುತ್ತೇನೆ. ಯಾರದ್ದು ಸರಿ, ಯಾರದ್ದು ತಪ್ಪು ಎಂಬುದು ದಾಖಲೆಗಳ ಆಧಾರದಲ್ಲಿ ತೀರ್ಮಾನವಾಗಲಿ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಸವಾಲು ಹಾಕಿದರು.
ಸಿದ್ದಸಿರಿ ಸಂಸ್ಥೆಯಲ್ಲಿ 28 ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದ ಭದ್ರತಾ ಠೇವಣಿ ಹಣವನ್ನು ಎಂ.ಡಿ. ಜ್ಯೋತಿಬಾ ಖಂಡಾಗಳೆ ಅವರಿಗೆ ನೀಡಿರುವುದಾಗಿ ಅಣ್ಣಿಗೇರಿ ಆರೋಪಿಸಿದರು. ಈ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ತಿಳಿಸಿದರು.
‘ಹಣವನ್ನು ಮುಟ್ಟಿಸಿದ ಬಳಿಕ ನನ್ನ ವಿರುದ್ಧ ದೂರು ನೀಡಿದ್ದಾರೆ’ ಎಂದು ಆರೋಪಿಸಿದ ಅವರು, ಈ ಪ್ರಕರಣದಲ್ಲಿ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಿಗಿಂತ ದಾಖಲೆಗಳ ಆಧಾರದ ಮೇಲೆ ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಸಿದ್ದಸಿರಿ ಮಲ್ಟಿಸ್ಟೇಟ್ ಕೋ-ಆಪರೇಟಿವ್ನ ಹಣಕಾಸು ವ್ಯವಹಾರ, ಸಿಬ್ಬಂದಿ ನೇಮಕಾತಿ, ಭದ್ರತಾ ಠೇವಣಿ ಹಾಗೂ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿ ಸತ್ಯಾಸತ್ಯತೆ ಹೊರಬರಬೇಕು. ತನಿಖೆಯಿಂದ ತಪ್ಪಿತಸ್ಥರು ಯಾರು ಎಂಬುದು ಸ್ಪಷ್ಟವಾಗಲಿ ಎಂದು ರಾಘವೇಂದ್ರ ಅಣ್ಣಿಗೇರಿ ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande