ಮೊದಲ ಹಂತದ ಬರ ಪರಿಹಾರ ಕಾರ್ಯ ತಕ್ಷಣದಿಂದಲೇ ಆರಂಭ: ಡಾ.ಜಿ.ಪರಮೇಶ್ವರ
ಬೆಂಗಳೂರು, 26 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಬರ ಪರಿಹಾರ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸಲಾಗುವುದು. ಕೃಷಿ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಜಂಟಿಯಾಗಿ ಪರಿಹಾರ ಕಾರ್ಯಗಳ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಕೂಡಲೇ ಕಾರ್ಯಾರಂಭಿಸುವಂತೆ ಸೂಚಿಸಲಾಗಿದೆ ಎಂದು
ಡಿಸಿಎಂ ಪರಮೇಶ್ವರ ಸಂಗ್ರಹ ಚಿತ್ರ


ಬೆಂಗಳೂರು, 26 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಬರ ಪರಿಹಾರ ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸಲಾಗುವುದು. ಕೃಷಿ, ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಜಂಟಿಯಾಗಿ ಪರಿಹಾರ ಕಾರ್ಯಗಳ ರೂಪುರೇಷೆ ಸಿದ್ಧಪಡಿಸುತ್ತಿದ್ದು, ಕೂಡಲೇ ಕಾರ್ಯಾರಂಭಿಸುವಂತೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬರ ಪರಿಹಾರದ ಮೊದಲ ಕಂತಿನ ರೂಪದಲ್ಲಿ ಸದ್ಯಕ್ಕೆ ನೆರವು ನೀಡಲಾಗುತ್ತಿದೆ. ಇದು ಅಂತಿಮ ಪರಿಹಾರವಲ್ಲ. ರೈತರಿಗೆ ಹಾಗೂ ಬರಪೀಡಿತ ಪ್ರದೇಶಗಳಿಗೆ ತಕ್ಷಣ ಯಾವುದಾದರೂ ಪರಿಹಾರ ಒದಗಿಸಬೇಕು ಎಂಬ ಉದ್ದೇಶದಿಂದ ಮೊದಲ ಕಂತು ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮೊದಲ ಕಂತಿನ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ. 101 ಬರಪೀಡಿತ ತಾಲೂಕುಗಳನ್ನು ಆಧರಿಸಿ ಸುಮಾರು 18 ಸಾವಿರ ಕೋಟಿ ರೂಪಾಯಿ ನಷ್ಟವಾಗಿದ್ದು, ಮೊದಲ ಹಂತದಲ್ಲಿ ಸುಮಾರು 3,500 ಕೋಟಿ ರೂಪಾಯಿ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರ ಸರ್ಕಾರ ಎಷ್ಟು ನೆರವು ನೀಡುತ್ತದೆ ಎಂಬುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು.

ಎರಡನೇ ಹಾಗೂ ಮೂರನೇ ಹಂತದ ಪರಿಹಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮನವಿಪತ್ರಗಳನ್ನು ಕೂಡಲೇ ಸಲ್ಲಿಸಲಾಗುವುದು. ಈಗಾಗಲೇ ಹೆಚ್ಚುವರಿಯಾಗಿ 77 ಅಂಶಗಳ ವರದಿ ಸಿದ್ಧವಾಗಿದ್ದು, ಅದನ್ನೂ ಕೇಂದ್ರಕ್ಕೆ ಸಲ್ಲಿಸಲಾಗುವುದು. ಮುಂದಿನ ಹಂತದಲ್ಲಿ ಮತ್ತೊಂದು 50 ಅಂಶಗಳ ವರದಿ ಸಿದ್ಧವಾಗಲಿದ್ದು, ಎಲ್ಲ ವರದಿಗಳನ್ನು ಒಟ್ಟುಗೂಡಿಸಿ ರಾಜ್ಯದ ನಷ್ಟ ಹಾಗೂ ಪರಿಹಾರದ ಅಗತ್ಯವನ್ನು ಕೇಂದ್ರದ ಮುಂದೆ ಸಮಗ್ರವಾಗಿ ಮಂಡಿಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ತಮ್ಮನ್ನು ಒಳಗೊಂಡಂತೆ ರಾಜ್ಯದ ಪ್ರಮುಖ ನಾಯಕರು ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಪ್ರಧಾನಮಂತ್ರಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು. ವಿಪತ್ತು ನಿರ್ವಹಣೆಯ ಜವಾಬ್ದಾರಿ ಕೇಂದ್ರ ಗೃಹ ಸಚಿವಾಲಯದ ವ್ಯಾಪ್ತಿಯಲ್ಲಿರುವುದರಿಂದ ಕೇಂದ್ರ ಗೃಹ ಸಚಿವರನ್ನೂ ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯನ್ನು ವಿವರಿಸಲಾಗುವುದು ಎಂದು ಹೇಳಿದರು.

ಕೇಂದ್ರದಿಂದ ಎಷ್ಟು ನೆರವು ದೊರೆಯುತ್ತದೆ ಎಂಬುದರ ಮೇಲೆ ಮುಂದಿನ ಪರಿಹಾರ ಕ್ರಮಗಳು ಅವಲಂಬಿತವಾಗಿರುತ್ತವೆ ಎಂದು ಡಾ.ಜಿ.ಪರಮೇಶ್ವರ ತಿಳಿಸಿದರು.

ಎನ್‌ಡಿಆರ್‌ಎಫ್ ಮಾರ್ಗಸೂಚಿ ಸಡಿಲಿಕೆಗೆ ನಿರಂತರ ಒತ್ತಡ

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ನು ಬದಲಾಯಿಸಬೇಕು ಎಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ನಿರಂತರವಾಗಿ ಕೇಂದ್ರದ ಮುಂದೆ ಇಡುತ್ತಿದೆ. ಈ ಸಂಬಂಧ ಈಗಾಗಲೇ ಸುಮಾರು 10ರಿಂದ 11 ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಬರೆಯಲಾಗಿದೆ ಎಂದು ಪರಮೇಶ್ವರ ಹೇಳಿದರು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ, ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ ಹಾಗೂ ತಾವು ಕೂಡ ಮಾರ್ಗಸೂಚಿಗಳನ್ನು ಬದಲಾಯಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಪ್ರಸ್ತುತ ಇರುವ ಮಾರ್ಗಸೂಚಿಗಳನ್ನು ಬದಲಾಯಿಸಿದರೆ ರಾಜ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಬರ ಘೋಷಿಸಿ ಪರಿಹಾರ ಕೇಳಬಹುದು ಹಾಗೂ ಕೇಂದ್ರ ಸರ್ಕಾರ ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂಬ ಕಾರಣದಿಂದ ಕೇಂದ್ರ ಸರ್ಕಾರ ಮಾರ್ಗಸೂಚಿ ಬದಲಾವಣೆಗೆ ಹಿಂದೇಟು ಹಾಕುತ್ತಿರಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಆದರೆ ರಾಜ್ಯದ ರೈತರು ಹಾಗೂ ಬರಪೀಡಿತ ಜನರಿಗೆ ತಕ್ಷಣ ಪರಿಹಾರ ದೊರೆಯಬೇಕಿರುವುದರಿಂದ ಕೇಂದ್ರ ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರುವುದಾಗಿ ಡಾ.ಜಿ.ಪರಮೇಶ್ವರ ತಿಳಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande