
ಬೆಂಗಳೂರು, 26 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಗೃಹಲಕ್ಷ್ಮಿ’ ಯೋಜನೆಯ ಹಣ ಬಿಡುಗಡೆಗೆ ಹೊಸ ತಾಂತ್ರಿಕ ನಿಯಮಗಳನ್ನು ವಿಧಿಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನೆಪದಲ್ಲಿ ಹಣ ಪಾವತಿಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಉಚಿತ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಗೃಹಲಕ್ಷ್ಮಿ ಯೋಜನೆಗೆ ಹಲವು ಕಟ್ಟುಪಾಡುಗಳನ್ನು ವಿಧಿಸುತ್ತಿದೆ ಎಂದು ಟೀಕಿಸಿದ್ದಾರೆ.
ಫಲಾನುಭವಿ ಮಹಿಳೆಯ ಹೆಸರಿನಲ್ಲೇ ಸಿಮ್ ಕಾರ್ಡ್ ಇರಬೇಕು ಹಾಗೂ ಅದು ಬ್ಯಾಂಕ್ ಖಾತೆಗೆ ಸಂಪರ್ಕ ಹೊಂದಿರಬೇಕು ಎಂಬ ನಿಯಮಗಳಿಂದ ಗ್ರಾಮೀಣ ಮತ್ತು ಬಡ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸ್ವಂತ ಮೊಬೈಲ್ ಅಥವಾ ಸಿಮ್ ಕಾರ್ಡ್ ಇಲ್ಲದ ಮಹಿಳೆಯರು ಹೊಸ ಸಿಮ್ ಖರೀದಿಸುವುದು ಸೇರಿದಂತೆ ವಿವಿಧ ವೆಚ್ಚಗಳನ್ನು ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ.
ಮತದಾರರ ಪಟ್ಟಿ ಪರಿಶೀಲನೆ ಮತ್ತು ಎಸ್‌ಐಆರ್ ಪ್ರಕ್ರಿಯೆಯ ನೆಪವೊಡ್ಡಿ ಲಕ್ಷಾಂತರ ಮಹಿಳೆಯರಿಗೆ ನೀಡಬೇಕಾದ ಮಾಸಿಕ ಗ್ಯಾರಂಟಿ ಹಣವನ್ನು ವಿಳಂಬ ಮಾಡಲಾಗುತ್ತಿದೆ ಎಂದು ಅಶೋಕ ದೂರಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ, ತಾಂತ್ರಿಕ ನಿಯಮಗಳು ಮತ್ತು ಎಸ್‌ಐಆರ್ ನೆಪದಲ್ಲಿ ಬಡ ಮಹಿಳೆಯರನ್ನು ಅಲೆದಾಡಿಸಿ ಯೋಜನೆಯಿಂದ ವಂಚಿಸುವುದೇ ಸರ್ಕಾರದ ಗ್ಯಾರಂಟಿ ಮಾದರಿಯೇ ಎಂದು ಪ್ರಶ್ನಿಸಿದ್ದಾರೆ.
ಜಟಿಲ ನಿಯಮಗಳನ್ನು ಕೂಡಲೇ ಕೈಬಿಟ್ಟು, ಹಣ ಬಿಡುಗಡೆ ವಿಳಂಬವನ್ನು ನಿಲ್ಲಿಸಬೇಕು. ರಾಜ್ಯದ ಪ್ರತಿಯೊಬ್ಬ ಅರ್ಹ ಗೃಹಲಕ್ಷ್ಮಿ ಫಲಾನುಭವಿಗೆ ಬಾಕಿ ಇರುವ ಸಂಪೂರ್ಣ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಅಶೋಕ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.