
ಕೋಲಾರ,26 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್ : ಬಂಗಾರಪೇಟೆ ಶಾಸಕ ಕೆ.ಎಂ. ನಾರಾಯಣಸ್ವಾಮಿ ಅವರು ಕಳೆದ 13 ವರ್ಷಗಳಿಂದ ಶಾಸಕರಾಗಿ, ಮೂರು ವರ್ಷಗಳಿಂದ ಕೆಯುಐಡಿಎಫ್‌ಸಿ ಅಧ್ಯಕ್ಷರಾಗಿ ಹಾಗೂ ಕೋಮುಲ್ ನಿರ್ದೇಶಕರಾಗಿ ಅಧಿಕಾರದಲ್ಲಿದ್ದಾರೆ. ಇದೀಗ ಮತ್ತೊಮ್ಮೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದು, ಇಷ್ಟೆಲ್ಲ ಅಧಿಕಾರದ ಹುದ್ದೆಗಳನ್ನು ಹೊಂದಿದ್ದರೂ ಸಚಿವ ಸ್ಥಾನ ಸಿಗಲಿಲ್ಲವೆಂದು ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಿರುವುದು ಯಾವ ಪುರುಷಾರ್ಥಕ್ಕಾಗಿ ಎಂದು ದ್ರಾವಿಡ ವಿಮೋಚನಾ ಸಂಘದ ರಾಜ್ಯಾಧ್ಯಕ್ಷ ಅನಂತಕೀರ್ತಿ ಕೆ.ಎಂ. ಪ್ರಶ್ನಿಸಿದ್ದಾರೆ.
ಸಂವಿಧಾನದ ಪ್ರಕಾರ ಮುಳಬಾಗಿಲು ಕ್ಷೇತ್ರವನ್ನು ಪರಿಶಿಷ್ಟ ಜಾತಿಗೆ ಮೀಸಲಿಡಲಾಗಿದೆ. ಆದರೆ ನಿಮ್ಮ ಪಕ್ಷದ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ಜಾತಿ ಪ್ರಮಾಣಪತ್ರದ ವಿಚಾರದಲ್ಲಿ ವಿವಾದದ ನಡುವೆಯೂ ಶಾಸನಸಭೆ ಪ್ರವೇಶಿಸಿದಾಗ, ಬಲಗೈ ಸಮುದಾಯಕ್ಕೆ ಸೇರಿದ ಮುನಿ ಆಂಜಿ ಪರಾಭವಗೊಂಡರೂ ಈ ಬಗ್ಗೆ ನಾರಾಯಣಸ್ವಾಮಿ ಅವರು ಯಾವುದೇ ಧ್ವನಿ ಎತ್ತಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಾರಾಯಣಸ್ವಾಮಿ ಅವರು 13 ವರ್ಷಗಳಿಂದ ಶಾಸಕರಾಗಿದ್ದು, ಅದಕ್ಕೂ ಮುನ್ನ ಪುರಸಭೆ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇಷ್ಟೆಲ್ಲ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಲಗೈ ಸಮುದಾಯಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ಅವರು ಬಹಿರಂಗಪಡಿಸಬೇಕು ಎಂದು ಅನಂತಕೀರ್ತಿ ಆಗ್ರಹಿಸಿದ್ದಾರೆ.
ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಾಲ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಆರೋಪಗಳನ್ನು ಬಲಗೈ ಸಮುದಾಯ ಹಾಗೂ ಪರಿಶಿಷ್ಟ ಜಾತಿಯ ಜನರು ಇನ್ನೂ ಮರೆತಿಲ್ಲ ಎಂದು ಅವರು ಹೇಳಿದ್ದಾರೆ.
ಬಲಗೈ ಸಮುದಾಯದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿರುವುದನ್ನು ಹೊರತುಪಡಿಸಿ, ಸ್ವಂತ ಹಣದಲ್ಲಿ ಎಷ್ಟು ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದೀರಿ? ಎಷ್ಟು ಕುಟುಂಬಗಳಿಗೆ ಉದ್ಯೋಗ ಕೊಡಿಸಿದ್ದೀರಿ? ಎಷ್ಟು ಕುಟುಂಬಗಳನ್ನು ದತ್ತು ಪಡೆದು ಶಿಕ್ಷಣ ಕೊಡಿಸಿದ್ದೀರಿ? ಎಂದು ಪ್ರಶ್ನಿಸಿರುವ ಅವರು, ತಮ್ಮನ್ನು ಗೆಲ್ಲಿಸಲು ದುಡಿದ ಕಾರ್ಯಕರ್ತರು ಹಾಗೂ ಮುಖಂಡರು ಇದೀಗ ತಮ್ಮಿಂದ ದೂರವಾಗಿರುವುದಕ್ಕೆ ಕಾರಣವೇನು ಎಂಬುದನ್ನೂ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಬ್ಬ ಹಾಲು ಡೇರಿ ನಿರ್ದೇಶಕರಿಂದ ಹಿಡಿದು ಎಲ್ಲ ಅಧಿಕಾರದ ಹುದ್ದೆಗಳೂ ತಮಗೇ ಬೇಕೆಂಬ ಧೋರಣೆ ಸರಿಯಲ್ಲ. ತಮ್ಮ ಸುತ್ತ ಜೈಕಾರ ಹಾಕುವ ಕೆಲವರನ್ನು ಹೊರತುಪಡಿಸಿ ಬೇರೆ ಯಾರ ಉದ್ಧಾರ ಮಾಡಿದ್ದೀರಿ ಎಂಬುದನ್ನು ತಿಳಿಸಬೇಕು. ಕಳೆದ 13 ವರ್ಷಗಳಲ್ಲಿ ಕ್ಷೇತ್ರಕ್ಕೆ ಬಂದಿರುವ ಸರ್ಕಾರಿ ಅನುದಾನವನ್ನು ಯಾರಿಗೆ ನೀಡಲಾಗಿದೆ ಎಂಬುದರ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಅನಂತಕೀರ್ತಿ ಹೇಳಿದ್ದಾರೆ.
ತಾಲೂಕಿಗೆ ಬರುವ ಎಲ್ಲ ಅನುದಾನಗಳಲ್ಲೂ ತಾವೇ ಗುತ್ತಿಗೆದಾರರಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಮತ ಹಾಕಿದ ಬಳಿಕ ಮುಂದಿನ ಚುನಾವಣೆ ಬರುವವರೆಗೂ ಮತದಾರರು ಪ್ರಶ್ನೆ ಮಾಡಬಾರದು ಎಂಬ ಮನೋಭಾವ ಸರಿಯಲ್ಲ. ಪ್ರಶ್ನಿಸುವವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗುತ್ತಿದೆ ಎಂಬ ಆರೋಪಗಳೂ ಜನರಿಗೆ ತಿಳಿದಿವೆ ಎಂದು ಅವರು ಹೇಳಿದ್ದಾರೆ.
ಬಲಗೈ ಸಮುದಾಯಕ್ಕೆ ತಾವೊಬ್ಬರೇ ನಾಯಕರಲ್ಲ
ಬಲಗೈ ಸಮುದಾಯಕ್ಕೆ ತಾವೊಬ್ಬರೇ ನಾಯಕರಲ್ಲ. ವೆಂಕಟಮುನಿಯಪ್ಪ, ಸಂಪಂಗಿ, ಮುನಿಸ್ವಾಮಿ, ಬಿ.ವಿ. ಮಹೇಶ್, ರಾಮಚಂದ್ರಪ್ಪ, ಕಪಾಲಿ ಶಂಕರ ಸೇರಿದಂತೆ ನೂರಾರು ನಾಯಕರು ಸಮುದಾಯದಲ್ಲಿದ್ದಾರೆ ಎಂದು ಅನಂತಕೀರ್ತಿ ಹೇಳಿದ್ದಾರೆ.
ತಮ್ಮ ವಿರುದ್ಧ ಆರೋಪಗಳು ಬಂದಾಗ ‘ನಾನು ದಲಿತನಾಗಿರುವುದರಿಂದ ಆರೋಪ ಮಾಡಲಾಗುತ್ತಿದೆ’ ಎಂದು ಹೇಳುವ ನಾರಾಯಣಸ್ವಾಮಿ ಅವರು ಅಧಿಕಾರ ಬೇಕಾದಾಗ ಮಾತ್ರ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುತ್ತಾರೆ ಎಂದು ಅವರು ಟೀಕಿಸಿದ್ದಾರೆ.
ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರು ಬಲಗೈ ಸಮುದಾಯದ ಗೋವಿಂದರಾಜು ಅವರನ್ನು ಕೆಡಿಎ ಅಧ್ಯಕ್ಷರನ್ನಾಗಿ ಮಾಡಲು ಮುಂದಾದ ಸಂದರ್ಭದಲ್ಲಿ ನಾರಾಯಣಸ್ವಾಮಿ ಅವರು ಏನು ಮಾಡಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಬಲಗೈ ಸಮುದಾಯದ ಕಪಾಲಿ ಶಂಕರ ಅವರಿಗೆ ಬಿ-ಫಾರಂ ನೀಡುವುದಾಗಿ ಕೊನೆಯವರೆಗೂ ಸತಾಯಿಸಿ ಕೈಕೊಟ್ಟರೂ, ಅವರು ಸ್ವಂತ ಶಕ್ತಿಯಿಂದ ಗೆದ್ದು ಬಂದರು ಎಂದು ತಿಳಿಸಿದ್ದಾರೆ.
ಯಾವ ಪಂಚಾಯಿತಿಯಲ್ಲಿ ಬಲಗೈ ಸಮುದಾಯಕ್ಕೆ ಏನು ಮಾಡಲಾಗಿದೆ ಎಂಬುದು ಸಮುದಾಯಕ್ಕೆ ತಿಳಿದಿದೆ. ಅಧಿಕಾರ ಬೇಕಾದಾಗಲೆಲ್ಲ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳುವ ನಾರಾಯಣಸ್ವಾಮಿ ಅವರು, ತಾವು ಬೆಳೆಸಿದ ಹತ್ತು ಮಂದಿ ಬಲಗೈ ಸಮುದಾಯದ ನಾಯಕರ ಹೆಸರುಗಳನ್ನು ಹೇಳಲಿ ಎಂದು ಸವಾಲು ಹಾಕಿದ್ದಾರೆ.
ತಮ್ಮ ಪಕ್ಷದ ಶಾಸಕ ಕೊತ್ತೂರು ಜಿ. ಮಂಜುನಾಥ್ ಅವರು ಪರಿಶಿಷ್ಟ ಜಾತಿಯ ಸಂವಿಧಾನಬದ್ಧ ಮೀಸಲಾತಿ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂಬ ಆರೋಪದ ಕುರಿತು ನಾರಾಯಣಸ್ವಾಮಿ ಅವರು ಎಂದಾದರೂ ಧ್ವನಿ ಎತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಇದೀಗ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯಲ್ಲಿ ಕೊತ್ತೂರು ಮಂಜುನಾಥ್ ಅವರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಿರುವುದು ಏಕೆ ಎಂದು ಅನಂತಕೀರ್ತಿ ಪ್ರಶ್ನಿಸಿದ್ದಾರೆ.
ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿದವರನ್ನೇ ಅಪ್ಪಿಕೊಂಡಿರುವ ನಾರಾಯಣಸ್ವಾಮಿ ಅವರಿಗೆ ದಲಿತರು ಹಾಗೂ ಬಲಗೈ ಸಮುದಾಯದ ಪರವಾಗಿ ಮಾತನಾಡುವ ನೈತಿಕತೆ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದಾಗ ಸಮುದಾಯದವರನ್ನೇ ಮುಂದೆ ಬಿಟ್ಟು ಪ್ರತಿಕ್ರಿಯೆ ಕೊಡಿಸಲಾಗುತ್ತಿದೆ. ಅದು ತಮ್ಮ ಮೇಲಿನ ಪ್ರೀತಿಯಿಂದಲ್ಲ, ಬದಲಾಗಿ ಭಯದಿಂದ ಎಂದು ಅನಂತಕೀರ್ತಿ ಹೇಳಿದ್ದಾರೆ.
ಮುಂದಿನ ಬಾರಿ ಅಂಕಿ-ಅಂಶಗಳೊಂದಿಗೆ ಬರುತ್ತೇವೆ
ಕ್ಷೇತ್ರದ ಜನರು ಹಾಗೂ ಪರಿಶಿಷ್ಟ ಜಾತಿ ಸೇರಿದಂತೆ ವಿವಿಧ ಸಮುದಾಯಗಳ ಜನರಿಗೆ ಎಲ್ಲ ವಿಚಾರಗಳೂ ತಿಳಿದಿವೆ. ಮೊದಲು ಸಮುದಾಯದ ಬಗ್ಗೆ ಕಾಳಜಿ ವಹಿಸಿ, ಕ್ಷೇತ್ರದ ಹಿತ ಕಾಪಾಡುವ ಕಾರ್ಯದಲ್ಲಿ ಭಾಗವಹಿಸಬೇಕು. ಮುಂದಿನ ಬಾರಿ ಅಂಕಿ-ಅಂಶಗಳೊಂದಿಗೆ ತಮ್ಮ ಮುಂದೆ ಬರುತ್ತೇವೆ ಎಂದು ಅನಂತಕೀರ್ತಿ ಕೆ.ಎಂ. ಎಚ್ಚರಿಕೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್