ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ, ಅನ್ನದಾತರಿಗೆ ಅಪಮಾನ: ಪ್ರತಿಪಕ್ಷ ನಾಯಕ ಆರ್.ಅಶೋಕ
ಕೇಂದ್ರ ಸರ್ಕಾರ ಐದು ಪಟ್ಟು ಅಧಿಕ ಪರಿಹಾರ ನೀಡಿದೆ, ಪರಿಹಾರ ಕಡಿಮೆ ಮಾಡಿದ್ದೇ ಯುಪಿಎ ಸರ್ಕಾರ
ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ, ಅನ್ನದಾತರಿಗೆ ಅಪಮಾನ: ಪ್ರತಿಪಕ್ಷ ನಾಯಕ ಆರ್.ಅಶೋಕ


ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿರುವ ಕಾಂಗ್ರೆಸ್ ಸರ್ಕಾರ ಭಿಕ್ಷುಕರಿಗೆ ನೀಡುವಂತೆ ಪರಿಹಾರ ನೀಡಿದೆ. ಅನ್ನದಾತ ರೈತರಿಗೆ ಅಪಮಾನ ಮಾಡಿ ಭ್ರಮನಿರಸನ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಅಧಿವೇಶನದಲ್ಲಿ ಸರ್ಕಾರ ರೈತರಿಗೆ ಉತ್ತಮ ಪರಿಹಾರ ನೀಡಲಿದೆ ಅಥವಾ ಸಾಲಮನ್ನಾ ಮಾಡಲಿದೆ ಎಂದುಕೊಂಡಿದ್ದೆವು. ಆದರೆ 2,500 ರೂ. ಪರಿಹಾರ ನೀಡುವ ಮೂಲಕ ಭ್ರಮನಿರಸನವಾಗಿದೆ. ಎನ್ಡಿಆರ್ಎಫ್ ಮಾರ್ಗಸೂಚಿ ನೋಡಿದರೆ ಎಕರೆಗೆ 8000 ರೂ. ಪರಿಹಾರ ನೀಡಬೇಕಾಗುತ್ತದೆ. ಕೋವಿಡ್ ಬಂದಾಗ, ಯುದ್ಧ ಬಂದಾಗ ಬಜೆಟ್ನಲ್ಲಿ ಕೊರತೆಯಾಗುತ್ತದೆ. ಆ ತರಹದ ಯಾವುದೇ ಪರಿಸ್ಥಿತಿ ಈಗಿಲ್ಲ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಷ್ಟಾದರೂ ಕಾಮನ್ಸೆನ್ಸ್ ಇರಬೇಕಿತ್ತು. ಆರ್ಥಿಕ ಇಲಾಖೆಯು ಸಾಲ ಮಾಡಲು ಸಾಮರ್ಥ್ಯ ಇಲ್ಲವೆಂದೇ ಹೇಳಿದ್ದರೂ ಹೊಸ ಘೋಷಣೆಗಳನ್ನು ಮಾಡಲಾಗುತ್ತಿದೆ. ಬರಗಾಲದ ಸಮಯದಲ್ಲಿ ತಾಯಿಯ ಹೃದಯ ಇಟ್ಟುಕೊಂಡು ಕೆಲಸ ಮಾಡುವುದು ಬಿಟ್ಟು ಕಟುಕರ ಹೃದಯ ತೋರಿಸಲಾಗಿದೆ. ಈ ರೀತಿ ಪರಿಹಾರ ಪಡೆಯಲು ರೈತರು ಭಿಕ್ಷುಕರಲ್ಲ ಎಂದರು.

ಬರ ಪರಿಹಾರ ನೀಡಲು ಸಾಧ್ಯವಾಗದಿದ್ದರೆ ಪಾಪರ್ ಆಗಿದ್ದೇವೆ ಎಂದು ಹೇಳಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಅರ್ಧ ಪರಿಹಾರ ನೀಡಲಿ ಎಂದು ಹೇಳಲಾಗಿದೆ.

ಈ ಅಧಿವೇಶನದ ಒಟ್ಟು ಪರಿಣಾಮವೇ ರೈತರ ಕೈಗೆ ಚೊಂಬು ನೀಡಿರುವುದು. ಇದನ್ನು ನಾವು ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತೇವೆ. ನಾನು ಬೆಂಗಳೂರಿನವರಾಗಿದ್ದರೂ ಸುರಂಗ ರಸ್ತೆ ಯೋಜನೆಯನ್ನು ಸ್ಥಗಿತಗೊಳಿಸಿ ಎಂದು ಹೇಳುತ್ತಿದ್ದೇನೆ.

ಈ ರಸ್ತೆ ಇಲ್ಲವಾದರೂ ಪರವಾಗಿಲ್ಲ. ಇದೇ ಹಣವನ್ನು ಬಳಸಿ ರೈತರಿಗೆ ಎಕರೆಗೆ 25,000 ರೂ. ಪರಿಹಾರ ನೀಡಲಿ. ಇಲ್ಲವಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ. ಈಗಾಗಲೇ ಕಾಂಗ್ರೆಸ್ ಶಾಸಕರು ತಿರುಗಿಬಿದ್ದಿದ್ದಾರೆ. ಇಂತಹ ಸಮಯದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಪರವಾಗಿರಲು ಒಳ್ಳೆಯ ಅವಕಾಶವಿದೆ. ಇಲ್ಲವಾದರೆ ಇವರು ರಿಯಲ್ ಎಸ್ಟೇಟ್ ಏಜೆಂಟ್ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಮೋದಿ ಸರ್ಕಾರದಿಂದ ಐದು ಪಟ್ಟು ಅಧಿಕ ಪರಿಹಾರಬಿಜೆಪಿ ಅವಧಿಯಲ್ಲಿ ಕೇಂದ್ರದ ಮಾರ್ಗಸೂಚಿ ದರ 6,800 ರೂ. ಇದ್ದಾಗ ರಾಜ್ಯ ಸರ್ಕಾರದ ಕಡೆಯಿಂದ 6,800 ರೂ. ನೀಡಲಾಗಿತ್ತು. ನೀರಾವರಿ ಜಮೀನಿಗೆ 13,500 ರೂ. ಇದ್ದರೆ, ರಾಜ್ಯದಿಂದ 11,500 ರೂ. ನೀಡಲಾಗಿತ್ತು.

ಅಂದರೆ ಬಹುತೇಕ ದುಪ್ಪಟ್ಟು ಪರಿಹಾರ ನೀಡಲಾಗಿತ್ತು. ಡಾ.ಮನಮೋಹನ್ ಸಿಂಗ್ ಅವಧಿಯಲ್ಲಿ, ಪ್ರವಾಹಕ್ಕಾಗಿ 10 ವರ್ಷದಲ್ಲಿ ಎನ್ಡಿಆರ್ಎಫ್ನಲ್ಲಿ 3,233 ಕೋಟಿ ರೂ., ಎಸ್ಡಿಆರ್ಎಫ್ನಲ್ಲಿ 812 ಕೋಟಿ ರೂ. ನೀಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ 2015 ರಿಂದ 2025 ರವರೆಗೆ 16,071 ಕೋಟಿ ರೂ. ಪರಿಹಾರ ನೀಡಿದ್ದಾರೆ. ಬಜೆಟ್ನಲ್ಲಿ ಶೇಕಡಾವಾರು ಪ್ರಮಾಣದಲ್ಲಿ ನೋಡಿದರೂ 2.71% ಹೆಚ್ಚಾಗಿದೆ. ಆದರೆ ಕೇಂದ್ರ ಸರ್ಕಾರ ಐದು ಪಟ್ಟು ಅಧಿಕ ಪರಿಹಾರ ನೀಡಿದೆ.

ಎಸ್ಡಿಆರ್ಎಫ್ನಲ್ಲಿ 4,500 ಕೋಟಿ ರೂ.ನೀಡಲಾಗಿದೆ. ಎಲ್ಲ ಸೇರಿದರೆ 20,000 ಕೋಟಿ ರೂ. ಪರಿಹಾರ ಸಿಕ್ಕಿದೆ. ಕಡಿಮೆ ಪರಿಹಾರ ನೀಡಬೇಕೆಂಬ ನಿಯಮವನ್ನು ಅಂದಿನ ಯುಪಿಎ ಸರ್ಕಾರವೇ ಮಾಡಿತ್ತು. ಆ ಬಾಯಿಗೆ ಬಟ್ಟೆ ತುರುಕಿಕೊಂಡಿದ್ದ ಕಾಂಗ್ರೆಸ್ ನಾಯಕರು ಈಗ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.

ಆಗ ಸೋನಿಯಾ ಗಾಂಧಿಗೆ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲ. ಅವರು ಮುಖ್ಯಮಂತ್ರಿಗೆ ಸಮಯ ನೀಡಲು 15 ದಿನ ತೆಗೆದುಕೊಳ್ಳುತ್ತಿದ್ದರು. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಮೊದಲಾದವರ ನಾಲ್ಕು ಬೆಂಚುಗಳನ್ನು ದಾಟಿ ಪ್ರಧಾನಿಯನ್ನು ಭೇಟಿ ಮಾಡಬೇಕಿತ್ತು. ಆಗ ಮಾತಾಡದವರು ಈಗ ಮಾತಾಡಿ ನಾಟಕ ಮಾಡುತ್ತಾರೆ.

ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ನೀಡಿದ ಪರಿಹಾರವನ್ನೇ ಈಗಲೂ ನೀಡಿದರೆ ಸಾಕು. ಆ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿಲ್ಲ. ರೈತರಿಗೆ ಮೋಸ ಮಾಡುತ್ತಿದ್ದೇವೆ ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ರೈತರಿಗೆ ಹೆಚ್ಚಿನ ಪರಿಹಾರ ನೀಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಾಯಕರ ಕೊಲೆ ಯತ್ನಚಿಕ್ಕಬಳ್ಳಾಪುರದಲ್ಲಿ ನಾಲ್ಕು ಭಯೋತ್ಪಾದಕರ ತಂಡ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಹಾಗೂ ಸಿ.ಟಿ.ರವಿ ಅವರನ್ನು ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಅದರಲ್ಲಿ ಒಬ್ಬ ಭಯೋತ್ಪಾದಕನನ್ನು ಬಂಧಿಸಲಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂತಹವರ ಸಂಖ್ಯೆ ಹೆಚ್ಚಾಗಿದೆ. ಕೂಡಲೇ ಈ ನಾಯಕರಿಗೆ ಸರ್ಕಾರದಿಂದ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಯಾವುದೇ ತಪ್ಪು ಮಾಡಿಲ್ಲ. ಅವರು ಜಾತಿ ನಿಂದನೆ ಮಾಡಿಲ್ಲ ಎಂದರು.

ಹಣದ ಕೊರತೆ ಬಗ್ಗೆ ಆರ್ಥಿಕ ಇಲಾಖೆ ಬಗ್ಗೆ ತಿಳಿವಳಿಕೆ ಪತ್ರ ಈಗ ಏಕೆ ಸೋರಿಕೆಯಾಗಿದೆ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋಸ ಮಾಡಿ ಖಜಾನೆ ಖಾಲಿ ಮಾಡಿದ್ದಾರೆ ಎಂದು ತಿಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಈ ಪತ್ರವನ್ನು ಸೋರಿಕೆ ಮಾಡಿದ್ದಾರೆ. ಇಷ್ಟು ಗುಪ್ತವಾಗಿರುವ ಪತ್ರ ಸುಲಭವಾಗಿ ಸೋರಿಕೆಯಾಗುವುದಿಲ್ಲ. ಇದನ್ನು ಒಂದೋ ಸಿಎಂ ಅಥವಾ ಮುಖ್ಯ ಕಾರ್ಯದರ್ಶಿ ಸೋರಿಕೆ ಮಾಡಬೇಕಾಗುತ್ತದೆ.

ಇದು ಸಿದ್ದರಾಮಯ್ಯ ಅವರಿಗೆ ಮುಜುಗರದ ಸಂಗತಿ. ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. 2 ಲಕ್ಷ ಕೋಟಿ ರೂ. ಬಿಲ್ ಬಾಕಿ ಎಂದು ಆರ್ಥಿಕ ಇಲಾಖೆ ಹೇಳಿದೆ. ಹೊಸ ಘೋಷಣೆಗಳನ್ನು ಮಾಡಲಾಗುತ್ತಿದೆಯೇ ಹೊರತು, ಯಾವುದೂ ಈಡೇರಿಲ್ಲ. ಹೀಗೆಯೇ ಮುಂದುವರಿದರೆ ರಾಜ್ಯಕ್ಕೆ ಆದಾಯ ತರಲು ಭಿಕ್ಷಾಪಾತ್ರೆ ಹಿಡಿಯಬೇಕಾಗುತ್ತದೆ. ಇನ್ನೂ ಒಂದೂವರೆ ವರ್ಷ ದಿನನಿತ್ಯ ರಾಜೀನಾಮೆಯಾಗಲಿದೆ. ಇದು ಸ್ಥಿರವಾದ ಸರ್ಕಾರವಲ್ಲ. ಕಳೆದ ನೂರು ದಿನಗಳಲ್ಲಿ ಶೂನ್ಯ ಸಾಧನೆಯಾಗಿದೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ ಎಂದರು.

ಬರದ ಸಮಸ್ಯೆಯ ಚರ್ಚೆಯಲ್ಲಿ ಶಾಸಕರು ಎರಡು ಮದುವೆಯಾಗಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದು ಅನವಶ್ಯಕವಾಗಿತ್ತು. ಯಾರನ್ನು ಗುರಿ ಮಾಡಿಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಇದು ಎಲ್ಲರ ಮೇಲೆ ತೂಗುಗತ್ತಿಯಾದಂತಾಗಿದೆ. ಇದಕ್ಕೆ ಅವರೇ ಉತ್ತರ ನೀಡಬೇಕು ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande