ನಾಳೆಯಿಂದ ಬೆಂಗಳೂರಿನಲ್ಲಿ ಐದು ದಿನ ಕರ್ನಾಟಕ ಪರ್ವ–2026
180ಕ್ಕೂ ಹೆಚ್ಚು ಮಳಿಗೆಗಳು; ಕಲೆ, ಸಂಸ್ಕೃತಿ, ಕರಕುಶಲತೆ ಹಾಗೂ ಉದ್ಯಮಶೀಲತೆಗೆ ವೇದಿಕೆ
ಸಚಿವ ಯು.ಟಿ.ಖಾದರ ಎಕ್ಸ್ ಪೋಸ್ಟ್


ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಸೆಪ್ಟೆಂಬರ್ 26ರಿಂದ 30ರವರೆಗೆ ‘ಕರ್ನಾಟಕ ಪರ್ವ–2026’ ಆಯೋಜಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಎಕ್ಸ್‌ನಲ್ಲಿ ವಿಡಿಯೋ ಸಂದೇಶದ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಕಲೆ, ಸಂಸ್ಕೃತಿ, ಕರಕುಶಲತೆ ಹಾಗೂ ಸ್ಥಳೀಯ ಉದ್ಯಮಶೀಲತೆಯನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 26ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ, ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್, ಸಚಿವರಾದ ಕೆ.ಜೆ. ಜಾರ್ಜ್, ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹಾಗೂ ರಿಜ್ವಾನ್ ಅರ್ಷದ್ ಉಪಸ್ಥಿತರಿರಲಿದ್ದಾರೆ.

ತೆಲಂಗಾಣ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಮೊಹಮ್ಮದ್ ಅಜರುದ್ದೀನ್ ಹಾಗೂ ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವ ರೋಜಿ ಎಂ. ಜಾನ್ ಅವರು ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

180ಕ್ಕೂ ಹೆಚ್ಚು ಮಳಿಗೆಗಳು

ಕರ್ನಾಟಕದ ವಿವಿಧ ಭಾಗಗಳ ವಿಶಿಷ್ಟ ಉತ್ಪನ್ನಗಳು ಹಾಗೂ ಕರಕುಶಲ ವಸ್ತುಗಳ 180ಕ್ಕೂ ಹೆಚ್ಚು ಮಳಿಗೆಗಳು ಪರ್ವದ ಪ್ರಮುಖ ಆಕರ್ಷಣೆಯಾಗಿವೆ. ಆಹಾರ ಮೇಳ ಮತ್ತು ವಸ್ತು ಪ್ರದರ್ಶನವೂ ನಡೆಯಲಿದೆ. ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಮಹಿಳಾ ಮತ್ತು ಯುವ ಸಬಲೀಕರಣ ಕುರಿತು ವಿಚಾರಗೋಷ್ಠಿಗಳನ್ನು ಆಯೋಜಿಸಲಾಗಿದೆ.

ಡೊಳ್ಳು ಕುಣಿತ, ದಫ್, ಕೊಂಕಣಿ ವಾದ್ಯ, ಭಾಂಗ್ರಾ ಸೇರಿದಂತೆ ವಿವಿಧ ಜನಪದ ಕಲಾ ಪ್ರದರ್ಶನಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.

ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮ

ಪ್ರತಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸೆಪ್ಟೆಂಬರ್ 26ರಂದು ವಿಜಯ್ ಪ್ರಕಾಶ್, 27ರಂದು ಅಜಯ್ ವಾರಿಯರ್ ಮತ್ತು ನಾದಿರಾ ಬಾನು, 28ರಂದು ಸೂಫಿ ಗಾಯಕ ಆದಿಲ್ ಹುಸೇನಿ, 29ರಂದು ವಾರ್ಸಿ ಸಹೋದರರಿಂದ ಕವ್ವಾಲಿ ಹಾಗೂ 30ರಂದು ಮುಶಾಯಿರಾ ನಡೆಯಲಿದೆ.

ಸೆಪ್ಟೆಂಬರ್ 26ರಿಂದ 30ರವರೆಗೆ ನಡೆಯಲಿರುವ ‘ಕರ್ನಾಟಕ ಪರ್ವ–2026’ಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ ಕರ್ನಾಟಕದ ವೈವಿಧ್ಯತೆಯನ್ನು ಸಂಭ್ರಮಿಸುವಂತೆ ಸಚಿವ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande