
ಬೆಂಗಳೂರು, 25 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ತಕ್ಷಣದ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಮೊದಲ ಹಂತದಲ್ಲಿ ಪ್ರತಿ ರೈತರಿಗೆ ₹2,500ರಂತೆ ಇನ್‌ಪುಟ್ ಸಬ್ಸಿಡಿ ನೀಡಲು ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಮಾರು 45ರಿಂದ 50 ಲಕ್ಷ ರೈತರಿಗೆ ಈ ನೆರವು ತಲುಪಲಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು ₹1,250 ಕೋಟಿ ವೆಚ್ಚವಾಗಲಿದೆ. ಕೇಂದ್ರದಿಂದ ಎನ್‌ಡಿಆರ್‌ಎಫ್ ನೆರವು ನಿರೀಕ್ಷಿಸುತ್ತಿದ್ದರೂ, ರೈತರ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ತಕ್ಷಣವೇ ನೆರವು ನೀಡುತ್ತಿದೆ ಎಂದರು.
ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟ ₹40 ಸಾವಿರ ಕೋಟಿಗೂ ಅಧಿಕವಾಗುವ ಸಾಧ್ಯತೆಯಿದೆ. ಈಗಾಗಲೇ ಮೊದಲ ಹಂತದ ಮನವಿಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮನವಿಪತ್ರಗಳನ್ನು ಸಲ್ಲಿಸಲಾಗುವುದು. ಸಂಪೂರ್ಣ ನಷ್ಟದ ಅಂದಾಜು ಸಿದ್ಧಪಡಿಸಿ, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಅನ್ವಯ ರಾಜ್ಯಕ್ಕೆ ಅಗತ್ಯವಿರುವ ಪರಿಹಾರದ ಮೊತ್ತವನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸಲು ರಾಜ್ಯ ಸರ್ಕಾರ ಸುಮಾರು ₹22 ಸಾವಿರ ಕೋಟಿ ವಿದ್ಯುತ್ ಸಬ್ಸಿಡಿ ನೀಡುತ್ತಿದೆ. ₹1,250 ಕೋಟಿ ಮೊದಲ ಹಂತದ ನೆರವು ಸಣ್ಣ ಮೊತ್ತವಲ್ಲ. ಕೇಂದ್ರ ಸರ್ಕಾರದಿಂದ ದೊರೆಯುವ ಪರಿಹಾರದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೇಂದ್ರ ಸರ್ಕಾರದ ನೆರವು ದೊರೆಯುವ ಪ್ರಮಾಣವನ್ನು ಆಧರಿಸಿ ಮುಂದಿನ ಪರಿಹಾರ ಕ್ರಮಗಳನ್ನು ನಿರ್ಧರಿಸಲಾಗುವುದು. ಈ ಹಂತದಲ್ಲಿ ಪರಿಷ್ಕೃತ ಪರಿಹಾರ ಮೊತ್ತದ ಕುರಿತು ಯಾವುದೇ ಬದ್ಧತೆ ನೀಡಲು ಸಾಧ್ಯವಿಲ್ಲ ಎಂದು ಡಾ. ಪರಮೇಶ್ವರ ಸ್ಪಷ್ಟಪಡಿಸಿದರು.
ಕೇಂದ್ರ ತಂಡದ ಮೌಲ್ಯಮಾಪನದ ಬಳಿಕ ಅಂತಿಮ ಪರಿಹಾರ
ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಐಎಎಸ್ ಅಧಿಕಾರಿಯೊಬ್ಬರನ್ನು ಒಳಗೊಂಡ ತಂಡವನ್ನು ಕಳುಹಿಸುವ ಕುರಿತು ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿದೆ. ಆದರೆ ತಂಡದ ರಾಜ್ಯ ಭೇಟಿ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಿ ತನ್ನ ಮಾರ್ಗಸೂಚಿಗಳ ಪ್ರಕಾರ ಬರ ಪರಿಸ್ಥಿತಿ ಹಾಗೂ ನಷ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ ಮುಂದಿನ ಪರಿಹಾರದ ಪ್ರಮಾಣ ಸ್ಪಷ್ಟವಾಗಲಿದೆ ಎಂದು ಹೇಳಿದರು.
ಸರ್ವಪಕ್ಷ ನಿಯೋಗ ದೆಹಲಿಗೆ
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗವನ್ನು ದೆಹಲಿಗೆ ಕರೆದೊಯ್ಯುವ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹಾಗೂ ತಾವು ಸ್ಪಷ್ಟಪಡಿಸಿದ್ದೇವೆ. ಸರ್ವಪಕ್ಷ ಸಭೆ ನಡೆಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿಯೋಗವನ್ನು ದೆಹಲಿಗೆ ಕರೆದೊಯ್ಯಲಾಗುವುದು ಎಂದರು.
ಪ್ರಧಾನಮಂತ್ರಿ, ಕೇಂದ್ರ ಗೃಹ ಸಚಿವರು ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಕರ್ನಾಟಕದ ಬರ ಪರಿಸ್ಥಿತಿ ಮತ್ತು ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಲಾಗುವುದು. ವಿರೋಧ ಪಕ್ಷದವರು ಬರಲು ಸಿದ್ಧರಿದ್ದರೆ ಅವರನ್ನೂ ನಿಯೋಗದೊಂದಿಗೆ ಕರೆದೊಯ್ಯಲು ಸರ್ಕಾರ ಸಿದ್ಧವಿದೆ. ಆದರೆ ನಿಯೋಗದ ದೆಹಲಿ ಭೇಟಿಯ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ತಿಳಿಸಿದರು.
ವಿಶೇಷಚೇತನರ ಗೌರವಧನ ಹೆಚ್ಚಳದ ಬೇಡಿಕೆ
ರಾಮನಗರದಲ್ಲಿ ವಿಶೇಷಚೇತನರು ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಡಾ. ಪರಮೇಶ್ವರ, ಸಂಬಂಧಪಟ್ಟ ಇಲಾಖೆ ಈ ಕುರಿತು ಪ್ರಸ್ತಾವನೆ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ತರಬೇಕು ಎಂದರು.
ಮುಖ್ಯಮಂತ್ರಿಗಳೇ ಹಣಕಾಸು ಸಚಿವರಾಗಿದ್ದು, ಅವರೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಚಿವ ಸಂಪುಟದ ಮುಂದೆ ಬಂದರೆ ಎಲ್ಲರೂ ಸಹಕರಿಸುವುದಾಗಿ ಅವರು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.