
ಗದಗ, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ಗದಗ ನಗರದ ಬೆಟಗೇರಿ ಆಶ್ರಯ ಕಾಲೋನಿಯಲ್ಲಿರುವ ನಮ್ಮ ಕ್ಲಿನಿಕ್ ನಗರ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಅವಧಿ ಮುಗಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ರೋಗಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ನಮ್ಮ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳಿಗೆ ಮೆಫೈಡ್ ಡಿಟಿ ಮಾತ್ರೆಗಳನ್ನು ನೀಡಲಾಗಿದೆ. ಈ ಮಾತ್ರೆಗಳ ಅವಧಿ 2026ರ ಜೂನ್ ತಿಂಗಳಲ್ಲೇ ಮುಕ್ತಾಯಗೊಂಡಿದೆ ಎಂದು ರೋಗಿಗಳು ಆರೋಪಿಸಿದ್ದಾರೆ.
ನೆಗಡಿ, ಕೆಮ್ಮು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ರೋಗಿಗಳಿಗೆ ಅವಧಿ ಮುಗಿದ ಮಾತ್ರೆಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದರಿಂದ ರೋಗಿಗಳಲ್ಲಿ ಆತಂಕ ಉಂಟಾಗಿದೆ.
ಸಿಬ್ಬಂದಿ ವಿರುದ್ಧ ರೋಗಿಗಳ ಆಕ್ರೋಶ
ಅವಧಿ ಮುಗಿದ ಮಾತ್ರೆಗಳನ್ನು ನೀಡಿರುವ ವಿಷಯ ಗಮನಕ್ಕೆ ಬಂದ ಬಳಿಕ ರೋಗಿಗಳು ನಮ್ಮ ಕ್ಲಿನಿಕ್ಗೆ ಮರಳಿ ಬಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರೆಗಳ ಅವಧಿ ಮುಗಿದಿರುವುದು ಗೊತ್ತಿದ್ದರೂ ರೋಗಿಗಳಿಗೆ ವಿತರಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.
ಮಾತ್ರೆ ಸೇವಿಸಿದ ಬಳಿಕ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಅದರ ಹೊಣೆ ಯಾರು ಎಂಬ ಪ್ರಶ್ನೆಯನ್ನೂ ರೋಗಿಗಳು ಮುಂದಿಟ್ಟಿದ್ದಾರೆ.
ಈ ಸಂದರ್ಭದಲ್ಲಿ ನಮ್ಮ ಕ್ಲಿನಿಕ್ನ ಡಿ ದರ್ಜೆ ಸಿಬ್ಬಂದಿಯೊಬ್ಬರು ರೋಗಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ಅವಾಜ್ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸ್ಥಳದಲ್ಲಿ ಕೆಲಕಾಲ ವಾಗ್ವಾದದ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.
ವೈದ್ಯರ ವಿರುದ್ಧವೂ ಆಕ್ರೋಶ
ನಮ್ಮ ಕ್ಲಿನಿಕ್ನ ವೈದ್ಯರಾದ ಡಾ. ರಾಣಿ ಪರ್ವತಗೌಡ ಅವರ ವಿರುದ್ಧವೂ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದರು. ರೋಗಿಗಳಿಗೆ ವಿತರಿಸುವ ಔಷಧಗಳ ಅವಧಿ ಹಾಗೂ ಗುಣಮಟ್ಟವನ್ನು ಪರಿಶೀಲಿಸದೆ ಮಾತ್ರೆ ವಿತರಿಸಿರುವುದು ಹೇಗೆ ಎಂದು ಪ್ರಶ್ನಿಸಿದರು.
ಆರೋಪದ ಕುರಿತು ಪ್ರತಿಕ್ರಿಯಿಸಿದ ವೈದ್ಯರು, ತಪ್ಪಾಗಿದೆ, ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ತಾಲೂಕು ಆರೋಗ್ಯಾಧಿಕಾರಿ ಭೇಟಿ
ವಿಷಯ ತಿಳಿದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತಮ್ ಅವರು ನಮ್ಮ ಕ್ಲಿನಿಕ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವಧಿ ಮುಗಿದ ಮಾತ್ರೆ ವಿತರಣೆ ಆರೋಪದ ಕುರಿತು ಮಾಹಿತಿ ಪಡೆದು, ಔಷಧಗಳ ಪರಿಶೀಲನೆ ನಡೆಸಿದರು.
ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಭರವಸೆ ನೀಡಿದ್ದಾರೆ.
ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ವಿತರಿಸುವ ಔಷಧಗಳ ಅವಧಿ, ಗುಣಮಟ್ಟ ಹಾಗೂ ಸಂಗ್ರಹಣೆಯ ಬಗ್ಗೆ ಕಟ್ಟುನಿಟ್ಟಿನ ಪರಿಶೀಲನೆ ನಡೆಯಬೇಕಿದೆ. ಅವಧಿ ಮುಗಿದ ಔಷಧ ವಿತರಣೆ ನಿಜವಾಗಿದ್ದರೆ, ಘಟನೆಗೆ ಕಾರಣವೇನು ಮತ್ತು ಔಷಧ ವಿತರಣೆಯಲ್ಲಿ ಯಾವ ಹಂತದಲ್ಲಿ ಲೋಪವಾಗಿದೆ ಎಂಬುದರ ಕುರಿತು ಆರೋಗ್ಯ ಇಲಾಖೆ ಸಮಗ್ರ ಪರಿಶೀಲನೆ ನಡೆಸಬೇಕಾಗಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP