
ವಿಜಯಪುರ, 25 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಕೊಪ್ಪಳದ ಪರಮಪೂಜ್ಯ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಾಡಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸೇವೆಯ ಮೂಲಕ ಜನಮಾನಸದಲ್ಲಿ ಗೌರವ ಪಡೆದಿರುವ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಮೈಸೂರು ದಸರಾ ಉದ್ಘಾಟನೆಯಂತಹ ಪ್ರತಿಷ್ಠಿತ ಅವಕಾಶ ದೊರೆತಿರುವುದು ಸಂತಸದ ವಿಚಾರ ಎಂದು ತಿಳಿಸಿದ್ದಾರೆ.
ಕೊಪ್ಪಳದ ಗವಿಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವ ಪೂಜ್ಯರು ಮಠದ ಸೀಮೆಯನ್ನು ಮೀರಿ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಬೆರೆತು, ಜ್ಞಾನ, ಅನ್ನ ಹಾಗೂ ಮಾನವೀಯತೆಯ ಬೆಳಕು ಹಂಚುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ, ಅನ್ನದಾಸೋಹ, ಯುವಜನರಲ್ಲಿ ಜಾಗೃತಿ ಹಾಗೂ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಅವರು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಮೈಸೂರು ದಸರಾ ಕರ್ನಾಟಕದ ಐತಿಹಾಸಿಕ ಪರಂಪರೆ, ಸಂಸ್ಕೃತಿ, ಕಲೆ, ಧಾರ್ಮಿಕ ನಂಬಿಕೆ ಹಾಗೂ ಜನಪದ ವೈಭವವನ್ನು ದೇಶ-ವಿದೇಶಗಳಿಗೆ ಪರಿಚಯಿಸುವ ನಾಡಿನ ಪ್ರಮುಖ ಉತ್ಸವವಾಗಿದೆ. ಇಂತಹ ನಾಡಹಬ್ಬವನ್ನು ಸಮಾಜಮುಖಿ ಚಿಂತನೆಯುಳ್ಳ, ಕಾಯಕಯೋಗಿ ಹಾಗೂ ಆಧ್ಯಾತ್ಮಿಕ ವ್ಯಕ್ತಿತ್ವದ ಸಂತರು ಉದ್ಘಾಟಿಸುತ್ತಿರುವುದು ಈ ಬಾರಿಯ ದಸರಾ ಸಂಭ್ರಮಕ್ಕೆ ವಿಶೇಷ ಅರ್ಥ ಮತ್ತು ಗೌರವವನ್ನು ತಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಧ್ಯಾತ್ಮಿಕ ಚಿಂತನೆ, ಸರಳತೆ, ಸಮಾಜಮುಖಿ ಸೇವೆ ಹಾಗೂ ಮಾನವೀಯ ಮೌಲ್ಯಗಳು ನಾಡಿನ ಜನತೆಗೆ ಸದಾ ದಾರಿದೀಪವಾಗಲಿ. ಅವರ ನೇತೃತ್ವದಲ್ಲಿ ಮೈಸೂರು ದಸರಾ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಲಿ ಎಂದು ಸಚಿವರು ಶುಭ ಹಾರೈಸಿದ್ದಾರೆ.
ನಾಡಿನ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ಮೈಸೂರು ದಸರಾ ಉತ್ಸವಕ್ಕೆ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಎಂ.ಬಿ. ಪಾಟೀಲ್, ಪೂಜ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಭಕ್ತಿಪೂರ್ವಕ ಶುಭಾಶಯಗಳನ್ನು ಸಲ್ಲಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande