ಇರಾನ್ ಪರಮಾಣು ಕಾರ್ಯಕ್ರಮ ಕೈಬಿಟ್ಟರೆ ಮಾತ್ರ ಶಾಂತಿ ಒಪ್ಪಂದ: ಟ್ರಂಪ್ ಷರತ್ತು–ರುಬಿಯೋ
ನ್ಯೂಯಾರ್ಕ್, 24 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಇರಾನ್‌ ಜತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಿದ್ಧರಿದ್ದಾರೆ. ಆದರೆ, ಇರಾನ್‌ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬುದು ಟ್ರಂಪ್‌ ಅವರ ಪ್ರಮುಖ ಷರತ್ತಾಗಿದೆ ಎಂದು ಅಮೆರಿಕದ ವಿದೇಶಾಂಗ ಸ
अमेरिका के सेक्रेटरी ऑफ स्टेट (विदेशमंत्री) मार्को रुबियो । फोटो - ग्रैब


ನ್ಯೂಯಾರ್ಕ್, 24 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಇರಾನ್‌ ಜತೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಿದ್ಧರಿದ್ದಾರೆ. ಆದರೆ, ಇರಾನ್‌ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬುದು ಟ್ರಂಪ್‌ ಅವರ ಪ್ರಮುಖ ಷರತ್ತಾಗಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ಹೇಳಿದ್ದಾರೆ.

ನ್ಯೂಯಾರ್ಕ್‌ನ ಪ್ಯಾಲೆಸ್‌ ಹೋಟೆಲ್‌ನಲ್ಲಿ ಸೆ.23ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರುಬಿಯೋ, ಇರಾನ್‌ ವಿಚಾರದಲ್ಲಿ ಮುಖ್ಯ ವಿಷಯವೆಂದರೆ ಆ ದೇಶಕ್ಕೆ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಇರಬಾರದು ಎಂಬುದಾಗಿದೆ. ಈ ನಿಲುವನ್ನು ಪ್ರತಿಯೊಂದು ಮಾತುಕತೆಯಲ್ಲೂ ಅಮೆರಿಕ ಸ್ಪಷ್ಟಪಡಿಸುತ್ತಿದೆ ಎಂದು ಹೇಳಿದರು.

ಇರಾನ್‌ ಜತೆ ನಡೆದ ಮಾತುಕತೆಗಳ ಕುರಿತು ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಅವರು, ಯಾವುದೇ ಒಪ್ಪಂದವಾದರೂ ಅದು ಸುದ್ದಿಗೋಷ್ಠಿಯಲ್ಲಿ ನಡೆಯುವುದಿಲ್ಲ. ಅದಕ್ಕೆ ದೀರ್ಘಕಾಲ ಬೇಕಾಗುತ್ತದೆ ಮತ್ತು ಮಧ್ಯವರ್ತಿಗಳೂ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದರು.

ಹೋರ್ಮುಜ್‌ ಜಲಸಂಧಿ ತೆರೆಯಲು ಬದ್ಧ

ಹೋರ್ಮುಜ್‌ ಜಲಸಂಧಿಯೂ ಪ್ರಮುಖ ವಿಷಯವಾಗಿದೆ ಎಂದು ರುಬಿಯೋ ಹೇಳಿದರು. ಜಲಸಂಧಿಯ ದಕ್ಷಿಣ ಮಾರ್ಗ ತೆರೆದಿದ್ದು, ಪ್ರತಿದಿನ ಹೆಚ್ಚಿನ ಪ್ರಮಾಣದ ತೈಲ ಸಾಗಣೆಯಾಗುತ್ತಿದೆ. ಅಮೆರಿಕದ ಸೇನೆ ಹಡಗುಗಳ ಸುರಕ್ಷತೆ ಒದಗಿಸುತ್ತಿದ್ದು, ಸಮುದ್ರದಲ್ಲಿದ್ದ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯವನ್ನೂ ನಡೆಸಿದೆ ಎಂದು ತಿಳಿಸಿದರು.

ಇರಾನ್‌ ಹಡಗುಗಳ ಮೇಲೆ ನಿರಂತರ ದಾಳಿ ನಡೆಸುತ್ತಿರುವುದರಿಂದ ಹೋರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ನಿರ್ಬಂಧ ಹೇರಿದೆ ಎಂದು ಅವರು ಹೇಳಿದರು. ಜಲಸಂಧಿಯನ್ನು ಮುಕ್ತವಾಗಿಡಲು ಅಮೆರಿಕ ಬದ್ಧವಾಗಿದೆ ಎಂದರು.

ಇರಾನ್‌ ಪರಮಾಣು ಶಸ್ತ್ರಾಸ್ತ್ರ ಹೊಂದುವ ಬಯಕೆಯನ್ನು ಕೈಬಿಟ್ಟರೆ ಆ ದೇಶವು ಮತ್ತಷ್ಟು ಸಮೃದ್ಧವಾಗಲು ಅವಕಾಶವಿದೆ. ಆದರೆ ಪರಮಾಣು ಶಸ್ತ್ರಾಸ್ತ್ರ ಪಡೆಯುವ ಹಠ ಮುಂದುವರಿಸಿದರೆ ಅದು ಇರಾನ್‌ಗೆ ಒಳಿತಾಗುವುದಿಲ್ಲ ಎಂದು ರುಬಿಯೋ ಹೇಳಿದರು. ಇರಾನ್‌ ವಿರುದ್ಧ ಹಲವು ಆಯ್ಕೆಗಳು ಅಧ್ಯಕ್ಷ ಟ್ರಂಪ್‌ ಅವರ ಮುಂದಿವೆ. ಅದರಲ್ಲಿ ಸೇನಾ ಆಯ್ಕೆಯೂ ಇದೆ ಎಂದು ಅವರು ತಿಳಿಸಿದರು.

ಇರಾನ್‌ ವಿಚಾರ ರಾಜಕೀಯ ವಿಷಯವಲ್ಲ

ಮಧ್ಯಂತರ ಚುನಾವಣೆಯ ಬಳಿಕ ಇರಾನ್‌ ಜತೆ ಒಪ್ಪಂದವಾಗಬಹುದು ಎಂಬ ಟ್ರಂಪ್‌ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ರುಬಿಯೋ, ಇರಾನ್‌ ಅಮೆರಿಕದ ರಾಜಕೀಯ ವ್ಯವಸ್ಥೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದರು. ನವೆಂಬರ್‌ನಲ್ಲಿ ಡೆಮಾಕ್ರಾಟ್‌ಗಳು ಗೆದ್ದರೆ ಅಧ್ಯಕ್ಷರು ಇರಾನ್‌ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಇರಾನ್‌ಗೆ ಇದೆ ಎಂದು ಹೇಳಿದರು.

ರಾಷ್ಟ್ರೀಯ ಭದ್ರತೆ, ನಿರ್ಬಂಧಗಳು ಮತ್ತು ಸೇನಾ ಬಲದ ಬಳಕೆಗೆ ಸಂಬಂಧಿಸಿದಂತೆ ಅಧ್ಯಕ್ಷರಿಗೆ ವ್ಯಾಪಕ ಅಧಿಕಾರವಿದೆ. ಇರಾನ್‌ ವಿಚಾರವನ್ನು ರಾಜಕೀಯ ವಿಷಯವಾಗಿ ಪರಿಗಣಿಸುವುದಿಲ್ಲ ಎಂದು ಟ್ರಂಪ್‌ ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು. ಇರಾನ್‌ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದಬಾರದು ಎಂಬ ವಿಚಾರದಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಸಹಮತ ಹೊಂದಿವೆ ಎಂದು ರುಬಿಯೋ ಹೇಳಿದರು.

ಕ್ಯೂಬಾಗೆ ಬದಲಾವಣೆಯ ಅವಕಾಶ

ಕ್ಯೂಬಾದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರುಬಿಯೋ, ಕ್ಯೂಬಾ ಬದಲಾಗಲು ಅವಕಾಶ ಹೊಂದಿದೆ ಎಂದರು. ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಎರಡೂ ಅಗತ್ಯವಾಗಿದ್ದು, ಬದಲಾವಣೆಯ ಪ್ರಕ್ರಿಯೆ ಆರಂಭಿಸಲು ನೆರವಾಗುವ ಕ್ರಮಗಳನ್ನು ಕೈಗೊಳ್ಳಲು ಅಮೆರಿಕ ಸಿದ್ಧವಿದೆ ಎಂದು ಹೇಳಿದರು.

ದಶಕಗಳ ಕಾಲ ನಡೆದ ದುರುಪಯೋಗ, ಭ್ರಷ್ಟಾಚಾರ ಮತ್ತು ಅಸಮರ್ಥತೆಯನ್ನು ಕೆಲವೇ ತಿಂಗಳಲ್ಲಿ ಸರಿಪಡಿಸಲು ಸಾಧ್ಯವಿಲ್ಲ. ಇಂತಹ ಬದಲಾವಣೆಗಳು ರಾತ್ರಿ ಬೆಳಗಾಗುವುದರಲ್ಲಿ ಸಂಭವಿಸುವುದಿಲ್ಲ ಎಂದರು.

ಕ್ಯೂಬಾದಿಂದ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅಪಾಯ ಎದುರಾದರೆ ಅದನ್ನು ಎದುರಿಸುವ ಅಧಿಕಾರ ಮತ್ತು ಹೊಣೆಗಾರಿಕೆ ಅಧ್ಯಕ್ಷರಿಗೆ ಇದೆ ಎಂದು ರುಬಿಯೋ ಹೇಳಿದರು. ಕ್ಯೂಬಾ ಸರ್ಕಾರದಲ್ಲಿರುವ ಕೆಲವರೊಂದಿಗೆ ಅಮೆರಿಕ ಎಂದಿಗೂ ಕೆಲಸ ಮಾಡಲು ಸಾಧ್ಯವಿಲ್ಲ ಎಂದೂ ಅವರು ತಿಳಿಸಿದರು.

ಯುದ್ಧ ಕೊನೆಗೊಳ್ಳುವುದು ಮಾತುಕತೆ ಮೂಲಕ

ರಷ್ಯಾ–ಉಕ್ರೇನ್‌ ಯುದ್ಧದ ಕುರಿತು ಮಾತನಾಡಿದ ರುಬಿಯೋ, ಈ ಯುದ್ಧ ಕೊನೆಗೊಳ್ಳಬೇಕು ಎಂಬುದು ಎಲ್ಲರ ಆಶಯವಾಗಿದೆ ಎಂದರು. ಯುದ್ಧವು ಕೇವಲ ಯುದ್ಧಭೂಮಿಯಲ್ಲಿ ಅಂತ್ಯಗೊಳ್ಳುವುದಿಲ್ಲ. ಸಂವಾದ ಮತ್ತು ಒಪ್ಪಂದದ ಮೂಲಕವೇ ಯುದ್ಧ ಕೊನೆಗೊಳ್ಳಲಿದೆ. ಅಧ್ಯಕ್ಷ ಟ್ರಂಪ್‌ ಕೂಡ ಇದೇ ಆಶಯ ಹೊಂದಿದ್ದಾರೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಪಾತ್ರದ ಕುರಿತು ಮಾತನಾಡಿದ ರುಬಿಯೋ, ಸಂಸ್ಥೆಯಲ್ಲಿ ಸಾಕಷ್ಟು ಸಾಮರ್ಥ್ಯವಿದ್ದರೂ ಅದು ತನ್ನ ಉದ್ದೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಭಿಪ್ರಾಯ ಹಲವು ನಾಯಕರಲ್ಲಿದೆ ಎಂದರು. ಥಾಯ್ಲೆಂಡ್‌–ಕಾಂಬೋಡಿಯಾ ಸಂಘರ್ಷ, ಭಾರತ–ಪಾಕಿಸ್ತಾನ ನಡುವಿನ ಸಂಭವನೀಯ ಸಂಘರ್ಷ, ಡಿಆರ್‌ಸಿ–ರುವಾಂಡಾ ಪರಿಸ್ಥಿತಿ, ಸೂಡಾನ್‌ ಹಾಗೂ ಇರಾನ್‌ಗೆ ಸಂಬಂಧಿಸಿದ ಹೋರ್ಮುಜ್‌ ಜಲಸಂಧಿಯ ಸಮಸ್ಯೆಗಳಂತಹ ವಿಚಾರಗಳಲ್ಲಿ ವಿಶ್ವಸಂಸ್ಥೆ ಪರಿಣಾಮಕಾರಿ ಪಾತ್ರ ವಹಿಸಬೇಕು ಎಂದು ಹೇಳಿದರು.

ಗೋಷ್ಠಿಯ ಬಹುತೇಕ ಪ್ರಶ್ನೆಗಳು ಇರಾನ್‌ ಮತ್ತು ಹೋರ್ಮುಜ್‌ ಜಲಸಂಧಿಯ ಸುತ್ತಲೇ ಕೇಂದ್ರೀಕೃತವಾಗಿದ್ದವು. ಜಲಸಂಧಿ ಮುಕ್ತವಾಗಿರಬೇಕು, ಅಲ್ಲಿ ಶಾಂತಿ ನೆಲೆಸಬೇಕು ಮತ್ತು ದಾಳಿಗಳು ನಡೆಯಬಾರದು ಎಂಬ ವಿಚಾರದಲ್ಲಿ ವ್ಯಾಪಕ ಒಮ್ಮತವಿದೆ ಎಂದು ರುಬಿಯೋ ಹೇಳಿದರು. ಯೆಮೆನ್‌ನಲ್ಲಿ ಹೂತಿಗಳ ಚಟುವಟಿಕೆಗಳೂ ದೊಡ್ಡ ಸಮಸ್ಯೆಯಾಗಿದ್ದು, ಆ ಹಿನ್ನೆಲೆಯಲ್ಲಿ ಆರ್ಥಿಕ ಮತ್ತು ವಿಮಾನಯಾನ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande