ವಿಜಯಪುರದಲ್ಲಿ ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರಕ್ಕೆ ರಾಜಕೀಯ ಬಿಸಿ
ವಿಜಯಪುರ, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಕುರಿತು ಸಲ್ಲಿಸಲಾಗುತ್ತಿರುವ ಫಾರ್ಮ್–7 ಆಕ್ಷೇಪಣೆಗಳ ವಿಚಾರ ಇದೀಗ ಕಾ
ಪ್ರತ್ಯಾರೋಪ


ವಿಜಯಪುರ, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಕುರಿತು ಸಲ್ಲಿಸಲಾಗುತ್ತಿರುವ ಫಾರ್ಮ್–7 ಆಕ್ಷೇಪಣೆಗಳ ವಿಚಾರ ಇದೀಗ ಕಾಂಗ್ರೆಸ್ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗರ ನಡುವೆ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಎಸ್ಐಆರ್ ಪರಿಷ್ಕರಣೆ ಸಂದರ್ಭದಲ್ಲಿ ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಆಗ್ರಹಿಸಿದ್ದಾರೆ. ಇದೇ ವೇಳೆ, ಮುಸ್ಲಿಂ ಮತದಾರರನ್ನು ಗುರಿಯಾಗಿಸಿಕೊಂಡು ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿಸುವ ಉದ್ದೇಶದಿಂದ ಯತ್ನಾಳ ಬೆಂಬಲಿಗರು ಫಾರ್ಮ್–7ರಲ್ಲಿ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಹಲವು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲು ದುರುದ್ದೇಶಪೂರ್ವಕವಾಗಿ ಆಕ್ಷೇಪಣೆ ಸಲ್ಲಿಸಲಾಗುತ್ತಿದೆ. ನಿರ್ದಿಷ್ಟ ಸಮುದಾಯದ ಮತದಾರರನ್ನು ಗುರಿಯಾಗಿಸಿಕೊಂಡು ಇಂತಹ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ ಎಂಬುದು ಕಾಂಗ್ರೆಸ್ ಮುಖಂಡರ ಆರೋಪವಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆಯಂತಹ ಮಹತ್ವದ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರ ಹೆಸರು ಕೈತಪ್ಪದಂತೆ ಚುನಾವಣಾ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಿಬ್ಬಂದಿ ಎಚ್ಚರಿಕೆ ವಹಿಸಬೇಕು ಎಂದು ಮುಶ್ರಿಫ್ ಒತ್ತಾಯಿಸಿದ್ದರು.

ಫಾರ್ಮ್–7 ಮೂಲಕ ಸಲ್ಲಿಕೆಯಾಗುತ್ತಿರುವ ಆಕ್ಷೇಪಣೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಆಕ್ಷೇಪಣೆಯಲ್ಲಿರುವ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರವೇ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಕ್ರಮ ಕೈಗೊಳ್ಳಬೇಕು. ಸುಳ್ಳು ಮಾಹಿತಿ ನೀಡಿ ಅಥವಾ ದುರುದ್ದೇಶದಿಂದ ಆಕ್ಷೇಪಣೆ ಸಲ್ಲಿಸಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರಿ.

ಕಾಂಗ್ರೆಸ್ ಆರೋಪಕ್ಕೆ ಯತ್ನಾಳ ಬೆಂಬಲಿಗರ ತಿರುಗೇಟು

ಇತ್ತ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗರು ತಿರುಗೇಟು ನೀಡಿದ್ದಾರೆ. ಫಾರ್ಮ್–7ರಲ್ಲಿ ಆಕ್ಷೇಪಣೆ ಸಲ್ಲಿಸುವುದು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ನಿಯಮಬದ್ಧ ಅವಕಾಶವಾಗಿದ್ದು, ಅದನ್ನು ರಾಜಕೀಯ ಉದ್ದೇಶದ ಕ್ರಮವೆಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯಬೇಕು ಎಂಬುದೇ ತಮ್ಮ ಉದ್ದೇಶವಾಗಿದೆ. ಮತದಾರರ ಪಟ್ಟಿಯಲ್ಲಿನ ದೋಷಗಳು, ಅನರ್ಹ ಹೆಸರುಗಳು ಅಥವಾ ನಿಯಮಾನುಸಾರ ಪರಿಶೀಲನೆ ಅಗತ್ಯವಿರುವ ಪ್ರಕರಣಗಳ ಬಗ್ಗೆ ಆಕ್ಷೇಪಣೆ ಸಲ್ಲಿಸುವ ಅವಕಾಶವನ್ನು ಕಾನೂನು ಮತ್ತು ಚುನಾವಣಾ ಪ್ರಕ್ರಿಯೆ ಒದಗಿಸಿದೆ. ಹೀಗಾಗಿ ಫಾರ್ಮ್–7 ಸಲ್ಲಿಕೆಯನ್ನು ಸಮಗ್ರವಾಗಿ ಪರಿಶೀಲಿಸಬೇಕೇ ಹೊರತು, ಎಲ್ಲ ಆಕ್ಷೇಪಣೆಗಳನ್ನೂ ದುರುದ್ದೇಶಪೂರ್ವಕವೆಂದು ಹೇಳುವುದು ಸರಿಯಲ್ಲ ಎಂಬ ನಿಲುವನ್ನು ಯತ್ನಾಳ ಬೆಂಬಲಿಗರು ವ್ಯಕ್ತಪಡಿಸಿದ್ದಾರೆ.

ಬಿಎಲ್ಒಗಳಿಗೆ ಬೆದರಿಕೆ ಆರೋಪ

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿರುವ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಅಂಜಿಕೆ, ಬೆದರಿಕೆ ಹಾಗೂ ಧಮಕಿ ಹಾಕುತ್ತಿದ್ದಾರೆ ಎಂದು ಯತ್ನಾಳ ಬೆಂಬಲಿಗ ಪ್ರೇಮಾನಂದ ಬಿರಾದಾರ್ ಆರೋಪಿಸಿದ್ದಾರೆ.

ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿಯಮಾನುಸಾರ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಅಧಿಕಾರಿಗಳು ಒಳಗಾಗಬಾರದು. ಬಿಎಲ್ಒಗಳು ತಮ್ಮ ಕರ್ತವ್ಯವನ್ನು ಕಾನೂನು ಮತ್ತು ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ನಿರ್ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಇಂತಹ ಒತ್ತಡಗಳಿಗೆ ತಾವು ಹೆದರುವುದಿಲ್ಲ ಎಂದೂ ಪ್ರೇಮಾನಂದ ಬಿರಾದಾರ್ ತಿರುಗೇಟು ನೀಡಿದ್ದಾರೆ.

ಆರೋಪ–ಪ್ರತ್ಯಾರೋಪಕ್ಕೆ ವೇದಿಕೆಯಾದ ಎಸ್ಐಆರ್

ಮತದಾರರ ಪಟ್ಟಿ ಪರಿಷ್ಕರಣೆಯು ಸಾಮಾನ್ಯವಾಗಿ ಆಡಳಿತಾತ್ಮಕ ಹಾಗೂ ಚುನಾವಣಾ ಪ್ರಕ್ರಿಯೆಯ ಭಾಗವಾಗಿದ್ದರೂ, ವಿಜಯಪುರ ನಗರ ಕ್ಷೇತ್ರದಲ್ಲಿ ಇದೀಗ ಅದು ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಒಂದು ಕಡೆ ಕಾಂಗ್ರೆಸ್ ಮುಖಂಡರು ನಿರ್ದಿಷ್ಟ ಸಮುದಾಯದ ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದರೆ, ಮತ್ತೊಂದೆಡೆ ಯತ್ನಾಳ ಬೆಂಬಲಿಗರು ಫಾರ್ಮ್–7ರ ಆಕ್ಷೇಪಣೆ ಸಲ್ಲಿಕೆ ನಿಯಮಬದ್ಧ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡು, ಕಾಂಗ್ರೆಸ್ ವಿರುದ್ಧವೇ ಬಿಎಲ್ಒಗಳಿಗೆ ಒತ್ತಡ ಮತ್ತು ಬೆದರಿಕೆ ಆರೋಪ ಮಾಡಿದ್ದಾರೆ.

ಹೀಗಾಗಿ ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ವಾತಾವರಣ ಮತ್ತಷ್ಟು ಬಿಸಿಯಾಗಿದೆ. ಯಾರು ಸಲ್ಲಿಸಿರುವ ಆಕ್ಷೇಪಣೆಗಳು ಸತ್ಯಾಸತ್ಯತೆಯಿಂದ ಕೂಡಿವೆ? ಯಾವ ಮತದಾರರ ಹೆಸರುಗಳ ಕುರಿತು ಆಕ್ಷೇಪಣೆ ಸಲ್ಲಿಸಲಾಗಿದೆ? ಆಕ್ಷೇಪಣೆಗಳ ನಂತರ ಚುನಾವಣಾ ಅಧಿಕಾರಿಗಳು ಕೈಗೊಳ್ಳುವ ಪರಿಶೀಲನಾ ಕ್ರಮವೇನು? ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಮತದಾರರ ಪಟ್ಟಿಯ ಪರಿಷ್ಕರಣೆಯ ಅಂತಿಮ ಉದ್ದೇಶ ಅರ್ಹ ಮತದಾರರ ಹಕ್ಕನ್ನು ಸಂರಕ್ಷಿಸುವುದಾಗಿರುವುದರಿಂದ, ಯಾವುದೇ ಸಮುದಾಯದ ಅರ್ಹ ಮತದಾರರ ಹೆಸರು ಅನಗತ್ಯವಾಗಿ ಕೈತಪ್ಪದಂತೆ ಪಾರದರ್ಶಕ ಹಾಗೂ ನಿಯಮಬದ್ಧ ಪರಿಶೀಲನೆ ನಡೆಯಬೇಕಿದೆ. ಅದೇ ರೀತಿ, ಮತದಾರರ ಪಟ್ಟಿಯಲ್ಲಿ ಅನರ್ಹ ಅಥವಾ ತಪ್ಪು ಹೆಸರುಗಳಿದ್ದರೆ ಅವುಗಳ ಕುರಿತು ಸಲ್ಲಿಕೆಯಾಗುವ ಆಕ್ಷೇಪಣೆಗಳನ್ನೂ ನಿಯಮಾನುಸಾರ ಪರಿಶೀಲಿಸುವ ಅಗತ್ಯವಿದೆ.

ಒಟ್ಟಿನಲ್ಲಿ ಎಸ್ಐಆರ್ ಪ್ರಕ್ರಿಯೆ ಮುಂದುವರಿಯುತ್ತಿದ್ದಂತೆ ವಿಜಯಪುರದಲ್ಲಿ ಕಾಂಗ್ರೆಸ್ ಹಾಗೂ ಯತ್ನಾಳ ಬೆಂಬಲಿಗರ ನಡುವಿನ ಆರೋಪ–ಪ್ರತ್ಯಾರೋಪ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬರುತ್ತಿವೆ. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ ಇದೀಗ ರಾಜಕೀಯ ವಾಕ್ಸಮರದ ಪ್ರಮುಖ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande