
ಬಾಗಲಕೋಟೆ, 24 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಮಡಿವಾಳ ಸಮಾಜದ ಸಂಘಟನೆ ಬಲಪಡಿಸುವುದು, ಸಮಾಜದ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಅ.4ರಂದು ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಮಡಿವಾಳ ಸಮಾಜದ ಬೃಹತ್ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ ಎಂದು ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಗೋಪಿ ಮಡಿವಾಳ ಹೇಳಿದರು.
ನಗರದ ಕಾನಿಪ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.4ರಂದು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಡಿವಾಳ ಮಾಚಿದೇವ ಸಂಘದ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಸಮಾಜದ ಸಂಘಟನೆ, ಒಗ್ಗಟ್ಟು ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿಗೆ ಈ ಸಮಾವೇಶ ಮಹತ್ವದ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಸಮಾವೇಶದಲ್ಲಿ ವಿವಿಧ ಮಠಗಳ ಶ್ರೀಗಳು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮಡಿವಾಳ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರತಿಭಾವಂತರಿಗೆ ಸನ್ಮಾನ
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪ್ರತಿಭಾವಂತರನ್ನು ಗುರುತಿಸಿ ಸಮಾವೇಶದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು. ಶಿಕ್ಷಣ, ಉದ್ಯೋಗ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಮಾಜದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತೇಜನ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಗೋಪಿ ಮಡಿವಾಳ ಹೇಳಿದರು.
ಸಮಾಜದ ಸಮಸ್ಯೆಗಳ ಕುರಿತು ಚರ್ಚೆ
ಸಮಾವೇಶದಲ್ಲಿ ಮಡಿವಾಳ ಸಮಾಜ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ವಿಶೇಷವಾಗಿ ಸಮಾಜದ ಶೈಕ್ಷಣಿಕ ಪ್ರಗತಿ, ಯುವಜನರ ಭವಿಷ್ಯ, ಸಂಘಟನೆಯ ಬಲವರ್ಧನೆ ಹಾಗೂ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖಂಡರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಸಮಾಜದ ಪ್ರತಿಯೊಬ್ಬರೂ ಸಂಘಟಿತರಾಗಿ ತಮ್ಮ ಹಕ್ಕುಗಳು ಮತ್ತು ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ. ಯುವಜನರಿಗೆ ಉತ್ತಮ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಅರಿವು ಮೂಡಿಸುವುದು, ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಸೇರಿದಂತೆ ಹಲವು ವಿಚಾರಗಳಿಗೆ ಸಮಾವೇಶದಲ್ಲಿ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.
ಮಡಿವಾಳ ಸಮಾಜದ ಒಗ್ಗಟ್ಟು ಮತ್ತು ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸುವ ಈ ಸಮಾವೇಶಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸಮಾಜದ ಬಂಧುಗಳು ಆಗಮಿಸಬೇಕು. ಎಲ್ಲರೂ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಗೋಪಿ ಮಡಿವಾಳ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮಲ್ಲಪ್ಪ ಮಡಿವಾಳರ, ತಾಲೂಕು ಗೌರವಾಧ್ಯಕ್ಷ ಬಸವರಾಜ ಪರೀಟ, ಜಿಲ್ಲಾ ಗೌರವಾಧ್ಯಕ್ಷ ಅರ್ಜುನ ಮಡಿವಾಳರ, ತಾಲೂಕು ಉಪಾಧ್ಯಕ್ಷ ಲಕ್ಷ್ಮಣ ಪರೀಟ, ಜಿಲ್ಲಾ ಮಹಿಳಾ ಅಧ್ಯಕ್ಷೆ ಸುಲೋಚನಾ ಮಡಿವಾಳರ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಮಲ್ಲಮ್ಮ ಪರೀಟ, ಸದಸ್ಯರಾದ ಪ್ರಭು ಪರೀಟ, ಸಂದೀಪ್ ಪರೀಟ, ಬಸವರಾಜ ಪರೀಟ, ಸಂತೋಷ ಪರೀಟ, ವೆಂಕಟೇಶ ಅಗಸರ, ಸಾಗರ ಪರೀಟ ಹಾಗೂ ಮಹೇಶ ಪರೀಟ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande