
ನವದೆಹಲಿ, 24 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಸೇವೆಯೇ ಮುಖ್ಯ ಉದ್ದೇಶವಾಗಬೇಕು. ಸೇವೆಯ ಸಂದೇಶವನ್ನು ಉಪದೇಶದ ಮೂಲಕವಲ್ಲ, ತಮ್ಮ ನಡವಳಿಕೆ ಮತ್ತು ಕಾರ್ಯಗಳ ಮೂಲಕ ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
‘ಸೇವಾ ಸಂಕಲ್ಪ ಅಭಿಯಾನ’ದಡಿ ವಡನಗರದಿಂದ ವಾರಾಣಸಿಗೆ ತೆರಳುತ್ತಿರುವ ಸೇವಾ ಯಾತ್ರಿಗಳೊಂದಿಗೆ ಗುರುವಾರ ವಿಡಿಯೋ ಸಂವಾದ ನಡೆಸಿದ ಅವರು, “ಸೇವೆ ಮಾಡುತ್ತಲೇ ಸೇವೆಯ ಸಂದೇಶ ನೀಡಬೇಕು, ಸೇವೆಯ ಉಪದೇಶ ನೀಡಬಾರದು. ನಾವು ಸೇವೆ ಮಾಡುವ ಮೂಲಕವೇ ಸೇವೆಯ ಸಂದೇಶ ನೀಡುತ್ತೇವೆ” ಎಂದು ಹೇಳಿದರು.
ರಾಜಕೀಯದಲ್ಲಿ ಎಷ್ಟೇ ದೊಡ್ಡ ಅಧಿಕಾರ ಅಥವಾ ಸ್ಥಾನಮಾನ ದೊರೆತರೂ ಸೇವೆಯ ಮಾರ್ಗದಿಂದ ವಿಚಲಿತರಾಗಬಾರದು. ಅಧಿಕಾರ ಎಷ್ಟೇ ದೊಡ್ಡದಾದರೂ ಸೇವೆಯೇ ತಮ್ಮ ಮಾರ್ಗ ಎಂಬುದನ್ನು ತಮ್ಮ ನಡವಳಿಕೆಯ ಮೂಲಕ ಜನರಿಗೆ ತೋರಿಸಬೇಕು ಎಂದು ಮೋದಿ ಯುವ ಸೇವಾ ಯಾತ್ರಿಕರಿಗೆ ಕರೆ ನೀಡಿದರು.
ವಡನಗರ ಮತ್ತು ವಾರಾಣಸಿ ಎರಡೂ ಪ್ರಾಚೀನ ಹಾಗೂ ಚೈತನ್ಯಭರಿತ ನಗರಗಳಾಗಿವೆ. ವಡನಗರ ತಮ್ಮ ಜನ್ಮಭೂಮಿಯಾದರೆ, ವಾರಾಣಸಿ ಕರ್ಮಭೂಮಿಯಾಗಿದೆ. ಈ ಎರಡೂ ನಗರಗಳ ನಡುವೆ ಸೇವೆಯ ದೊಡ್ಡ ಅಭಿಯಾನ ನಡೆಯುತ್ತಿದೆ ಎಂದು ಅವರು ಹೇಳಿದರು.
ಅಭಿಯಾನದಡಿ 20 ತಂಡಗಳು 10 ರಾಜ್ಯಗಳ 193 ಜಿಲ್ಲೆಗಳು, 773 ತಾಲೂಕುಗಳು ಹಾಗೂ 10,159 ಗ್ರಾಮಗಳ ಮೂಲಕ ಸಂಚರಿಸುತ್ತಿವೆ. ಒಟ್ಟು ಸುಮಾರು 35,576 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಲಿರುವ ಯಾತ್ರೆಯಲ್ಲಿ 380 ರಾತ್ರಿ ವಾಸ್ತವ್ಯಗಳನ್ನು ನಿಗದಿಪಡಿಸಲಾಗಿದೆ.
ಯಾತ್ರೆಯ ಸಂದರ್ಭದಲ್ಲಿ ಗ್ರಾಮಸಭೆಗಳು, ವಿವಿಧ ಯೋಜನೆಗಳ ಫಲಾನುಭವಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ, ಸಸಿ ನೆಡುವಿಕೆ, ಸ್ವಚ್ಛತಾ ಅಭಿಯಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಸೇವಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಭಾರತದಲ್ಲಿ ಯಾತ್ರೆ ಮತ್ತು ಸೇವೆ ಎರಡೂ ಸಾಮಾಜಿಕ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿವೆ. ಇಂತಹ ಯಾತ್ರೆಗಳು ಕರುಣೆ, ವಿನಯ, ತಂಡಭಾವನೆ ಮತ್ತು ಶಿಸ್ತನ್ನು ಕಲಿಸುವುದರ ಜತೆಗೆ ಸಮಾಜದೊಂದಿಗೆ ನೇರವಾಗಿ ಬೆರೆಯುವ ಅವಕಾಶವನ್ನು ಒದಗಿಸುತ್ತವೆ ಎಂದು ಪ್ರಧಾನಿ ಹೇಳಿದರು.
ರಾಜಕೀಯ ಮತ್ತು ಚುನಾವಣೆ ಒಂದು ಕಡೆ, ಆಡಳಿತ ವ್ಯವಸ್ಥೆ ಮತ್ತೊಂದು ಕಡೆ. ಆದರೆ ಸೇವಾ ಯಾತ್ರಿಕರು ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದಾರೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಮಹತ್ವದ್ದಾಗಿದೆ. ದೇಶದ ವಿವಿಧ ಪ್ರದೇಶಗಳು, ಸಾಮಾಜಿಕ ವರ್ಗಗಳು ಹಾಗೂ ಜನರ ಆಶಯಗಳನ್ನು ಯುವಕರು ನೆಲಮಟ್ಟಕ್ಕೆ ತೆರಳಿ ಅರ್ಥಮಾಡಿಕೊಳ್ಳಬೇಕು ಎಂದು ಮೋದಿ ಹೇಳಿದರು.
ಯಾತ್ರೆಯ ಅನುಭವಗಳನ್ನು ದಾಖಲಿಸಿಕೊಳ್ಳುವಂತೆ ಸೇವಾ ಯಾತ್ರಿಕರಿಗೆ ಅವರು ಸಲಹೆ ನೀಡಿದರು. ಯಾತ್ರೆಯ ವೇಳೆ ಭೇಟಿಯಾದ ಜನರು, ಅವರ ಅನುಭವಗಳು ಹಾಗೂ ಸ್ಥಳೀಯವಾಗಿ ಕಂಡುಬಂದ ಉತ್ತಮ ಕಾರ್ಯಗಳ ಕುರಿತು ದಾಖಲೆ ಸಿದ್ಧಪಡಿಸಬೇಕು ಎಂದು ತಿಳಿಸಿದರು.
ಆಡಳಿತದ ಮೂಲದಲ್ಲೇ ಸೇವಾ ಮನೋಭಾವ ಇದ್ದಾಗ ನೀತಿಗಳ ಕೇಂದ್ರಬಿಂದುವಾಗಿ ನಾಗರಿಕರು ಇರುತ್ತಾರೆ ಎಂದು ಮೋದಿ ಹೇಳಿದರು. ಬಡವರಿಗೆ ಉಚಿತ ಆಹಾರ ಧಾನ್ಯ, ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಆವಾಸ್, ಉಜ್ವಲಾ, ಪಿಎಂ ಕಿಸಾನ್ ಮತ್ತು ಪಿಎಂ ಸೂರ್ಯ ಘರ್ ಸೇರಿದಂತೆ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಅವರು, ಸೇವಾ ಮನೋಭಾವವೇ ಈ ಯೋಜನೆಗಳನ್ನು ಕೊನೆಯ ಹಂತದ ಫಲಾನುಭವಿಗಳಿಗೂ ತಲುಪಿಸುವ ಪ್ರೇರಣೆಯಾಗಿದೆ ಎಂದರು.
“ಸೇವಾ ಪರಮೋ ಧರ್ಮಃ, ಸೇವೆಯೇ ಅತ್ಯಂತ ದೊಡ್ಡ ಧರ್ಮ. ನರ ಸೇವಾ ನಾರಾಯಣ ಸೇವೆ, ಅಂದರೆ ಮಾನವನ ಸೇವೆಯೇ ದೇವರ ಸೇವೆ” ಎಂದು ಪ್ರಧಾನಿ ಹೇಳಿದರು.
ಗ್ರಾಮಗಳು, ರೈತರು ಮತ್ತು ಸ್ಥಳೀಯ ಸಮುದಾಯಗಳ ಬಳಿ ಅಪಾರ ಜ್ಞಾನ ಹಾಗೂ ಅನುಭವದ ಸಂಪತ್ತು ಇದೆ. ಒಂದು ಗ್ರಾಮದ ಉತ್ತಮ ಪ್ರಯೋಗ ಮತ್ತೊಂದು ಗ್ರಾಮಕ್ಕೆ ಉಪಯುಕ್ತವಾಗಬಹುದು. ಒಂದು ಪ್ರದೇಶದ ಅನುಭವ ಇಡೀ ದೇಶದ ಶಕ್ತಿಯಾಗಬಹುದು. ಯಾತ್ರೆಯ ಸಂದರ್ಭದಲ್ಲಿ ದೇಶದ ವೈವಿಧ್ಯತೆಯಲ್ಲಿನ ಏಕತೆಯನ್ನು ಅರ್ಥಮಾಡಿಕೊಂಡು, ಅದನ್ನು ಇತರ ಪ್ರದೇಶಗಳಿಗೂ ತಲುಪಿಸುವ ಪ್ರಯತ್ನ ಮಾಡಬೇಕು ಎಂದು ಮೋದಿ ಹೇಳಿದರು.
ಸೇವಾ ಯಾತ್ರಿಕರ ಪರಿಶ್ರಮ ಹಾಗೂ ಅನುಭವಗಳು ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಪ್ರಯಾಣಕ್ಕೆ ವೇಗ ನೀಡಲಿವೆ. ಯಾತ್ರೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲಿ ಎಂದು ಹಾರೈಸಿದ ಅವರು, ಇದುವರೆಗೆ ತೋರಿದ ಅದೇ ಉತ್ಸಾಹದೊಂದಿಗೆ ಮುಂದುವರಿಯುವಂತೆ ಕರೆ ನೀಡಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.